ಸಾರಾಂಶ
ಜಿಲ್ಲಾ ಮಟ್ಟದ 4ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ । ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ
ಕನ್ನಡಪ್ರಭ ವಾರ್ತೆ ಕೊಪ್ಪಳಪ್ರಸ್ತುತ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿವೆ. ರೈತರಿಗೆ ಉತ್ತಮ ಗುಣಮಟ್ಟದ ರಸಗೊಬ್ಬರ ಪೂರೈಸಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಪಂನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಜಿಲ್ಲಾ ಮಟ್ಟದ 4ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಸ್ತುತ ಮುಂಗಾರಿನಲ್ಲಿ ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಬೇಡಿಕೆಯನ್ವಯ ನಿಯಮಿತವಾಗಿ ಪೂರೈಸಬೇಕು. ಇದಕ್ಕಾಗಿ ಕೃಷಿ ಅಧಿಕಾರಿಗಳು ಪ್ರತಿ ತಾಲೂಕು/ವಿಧಾನಸಭಾ ಕ್ಷೇತ್ರವಾರು ಭೇಟಿ ನೀಡಿ, ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿನ ಬಗ್ಗೆ ಪರಿಶೀಲಿಸಬೇಕು. ಕಳಪೆ ಬೀಜ ಮತ್ತು ರಸಗೊಬ್ಬರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರುದ್ಧ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು. ಕಳೆದ ವರ್ಷದಲ್ಲಿ ಕಳಪೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿರುವ ಬಾಕಿ ಇರುವ ಪ್ರಕರಣಗಳನ್ನು ಅದಷ್ಟು ಬೇಗನೆ ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.ಬೆಳೆ ವಿಮೆ ಕುರಿತು ರೈತರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು. ಗಂಗಾವತಿ ತಾಲೂಕಿನ ಸಿದ್ದಾಪುರದಲ್ಲಿ ಕೆಆರ್‌ಐಡಿಎಲ್‌ನಿಂದ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ನಿರ್ಮಾಣ ಕಾಮಗಾರಿಗೆ ತಗುಲಿದ ವೆಚ್ಚವನ್ನು ಅಧಿಕಾರಿಗಳಿಂದ ವಸೂಲಿ ಮಾಡಿ. ಇದರಂತೆ ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುವ ಯಾವುದೇ ಸಿವಿಲ್ ಕಾಮಗಾರಿಯನ್ನು ಕಡ್ಡಾಯವಾಗಿ ಥರ್ಡ್ ಪಾರ್ಟಿ ಪರಿಶೀಲನೆಗೆ ಒಳಪಡಿಸಬೇಕು. ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಕಚೇರಿಗಳಿಗೆ ಭೇಟಿ ನಿಡುವ ರೈತರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:ಗಂಗಾವತಿ ಹಾಗೂ ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಸಿ.ಟಿ. ಸ್ಕ್ಯಾನಿಂಗ್ ಯಂತ್ರ ನಿರ್ವಹಣೆಗೆ ನೇಮಕಗೊಂಡಿದ್ದ ಸಿಬ್ಬಂದಿಗೆ ಬಾಕಿ ಇರುವ ವೇತನ ಪಾವತಿಯಾಗಿಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಎಂದು ವಿಷಯ ಪ್ರಸ್ತಾಪಿಸಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಸಚಿವರು, ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಕರೆ ಮಾಡಿ, ಕ್ರಮವಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಬಿಬಿಎಸ್ ವೈದ್ಯರ ಕೊರತೆ ಇದ್ದು, ಶೀಘ್ರವಾಗಿ ವೈದ್ಯರ ನೇಮಕ ಮಾಡಿಕೊಳ್ಳಿ. ಜಿಲ್ಲೆಯ ತಾಲೂಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯವಿರುವ 100 ಹಾಸಿಗೆ ಆಸ್ಪತ್ರೆ ಹಾಗೂ 30 ಹಾಸಿಗೆ ಆಸ್ಪತ್ರೆಯ ಬಗ್ಗೆ ಪ್ರಸ್ತಾವನೆ ಸಿದ್ದಪಡಿಸಿ, ವರದಿ ಸಲ್ಲಿಸಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸಚಿವರು ಸೂಚಿಸಿದರು.ಸಂಕಲ್ಪ ಪುಸ್ತಕ ಬಿಡುಗಡೆ:
ಜಿಪಂಯಿಂದ ರಚಿಸಿರುವ ಜಿಲ್ಲೆಯ ಆರ್ಥಿಕ, ಸಾಮಾಜಿಕ, ಆಡಳಿತಾತ್ಮಕ ವಿವರ ಒಳಗೊಂಡ ‘ಸಂಕಲ್ಪ’ ಪುಸ್ತಕವನ್ನು ಸಚಿವರು, ಶಾಸಕರು ಬಿಡುಗಡೆಗೊಳಿಸಿದರು.ಸಭೆಯಲ್ಲಿ ಸಂಸದ ಕೆ. ರಾಜಶೇಖರ ಹಿಟ್ನಾಳ್, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ದೊಡ್ಡನಗೌಡ ಪಾಟೀಲ್, ಜಿ. ಜನಾರ್ದನ ರೆಡ್ಡಿ, ಎಂಎಲ್ಸಿ ಹೇಮಲತಾ ನಾಯಕ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಕೆಡಿಪಿ ನಾಮನಿರ್ದೇಶಿತ ಸದಸ್ಯ ಕುರುಗೋಡ ರವಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಸೇರಿದಂತೆ ವಿವಿದ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕುಗಳ ತಹಸೀಲ್ದಾರರು, ತಾಪಂ ಇಒಗಳು ಇದ್ದರು.ತೋಟಗಾರಿಕೆ ಪಾರ್ಕ್ ನಿರ್ಮಾಣಕ್ಕೆ ಕ್ರಮ:
ಜಿಲ್ಲೆಯಲ್ಲಿ ತೋಟಗಾರಿಕೆ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಅನುಗುಣವಾಗಿ ಮಾರುಕಟ್ಟೆ ಸ್ಥಾಪಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿ ಈಗಾಗಲೇ ತೋಟಗಾರಿಕೆ ಪಾರ್ಕ್ ನಿರ್ಮಾಣಕ್ಕೆ ಸಿರವಾರದದಲ್ಲಿ 194 ಎಕರೆ ಜಮೀನನ್ನು ಗುರುತಿಸಲಾಗಿದ್ದು, ಇದರಲ್ಲಿ 120 ಎಕರೆ ಪ್ರದೇಶ ಸರ್ಕಾರದ್ದಾಗಿದೆ. ಉಳಿದ 74 ಎಕರೆ ಖಾಸಗಿ ಜಮೀನು ಮಾಲೀಕರಿಂದ ಖರೀದಿಸಬೇಕಿದೆ. ರೈತರು ಭೂಮಿ ಕೊಡಲು ಮೀನಮೇಷ ಮಾಡುತ್ತಿರುವುದರಿಂದ ಅವರೊಂದಿಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ. ಆಗಲೂ ರೈತರು ಒಪ್ಪದಿದ್ದಲ್ಲಿ ಭೂಸ್ವಾದೀನಕ್ಕೆ ಕ್ರಮ ವಹಿಸಿ. ಅದಕ್ಕೂ ಮೊದಲು ಖಾಸಗಿ ಅವರಿಂದ ತೋಟಗಾರಿಕೆ ಪಾರ್ಕ್ ನಿರ್ಮಾಣದಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಮಾರುಕಟೆ ಸ್ಥಾಪಿಸುವ ಕುರಿತು ಚರ್ಚಿಸಿ. ಪರ್ಯಾಯ ಹಾಗೂ ತಾತ್ಕಾಲಿಕವಾಗಿ ಕಾರಟಗಿ ತಾಲೂಕಿನ ನವಲಿ ಗ್ರಾಮದಲ್ಲಿರುವ ರೈಸ್ ಟೆಕ್ನಾಲಜಿ ಪಾರ್ಕ್‌ನಲ್ಲಿ ತೋಟಗಾರಿಕಾ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿ. ಅದಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಿ ಎಂದು ಸಚಿವರು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.