ಜಿಲ್ಲಾಸ್ಪತ್ರೆಗೆ ಬರುವಂತವರೆಲ್ಲಾ ಬಡ ಜನತೆ. ಅಂತವರಿಗೆ ತುರ್ತಾಗಿ ಸೇವೆ ಸಿಗಲು ಗಮನ ಹರಿಸಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಇದಕ್ಕಾಗಿ ಇಬ್ಬರು ಸಿಬ್ಬಂದಿಯನ್ನು ನೇಮಿಸಿಕೊಳ್ಳಿ. ಸಾರ್ವಜನಿಕರಿಂದ ದೂರುಗಳು ಬರದೇ ಇರುವಂತೆ ನೋಡಿಕೊಳ್ಳುವಂತೆ ಆಸ್ಪತ್ರೆಯ ವೈದ್ಯರಿಗೆ ಶಾಸಕ ಕೊತ್ತೂರು ಮಂಜುನಾಥ್‌ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾಸ್ಪತ್ರೆಯಲ್ಲಿ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಕೋಲಾರ ಶಾಸಕ ಕೊತ್ತೂರು ಜಿ.ಮಂಜುನಾಥ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಚಿಕಿತ್ಸೆ ಪಡೆಯುತ್ತಿದ್ದವರ ಯೋಗ ಕ್ಷೇಮ ವಿಚಾರಿಸಿದರು. ನಗರದ ಎಸ್.ಎನ್ ಆರ್ ಜಿಲ್ಲಾಸ್ಪತ್ರೆಗೆ ದಿಢೀರನೇ ಭೇಟಿ ನೀಡಿ ಪರಿಶೀಲನೆ ನಡೆಸಿ, ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್ ರಿಂದ ಮಾಹಿತಿ ಪಡೆದುಕೊಂಡು ಜಿಲ್ಲಾಸ್ಪತ್ರೆಗೆಂದು ಬರುವವರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು. ತುರ್ತು ನಿಗಾ ಘಟಕ:

ಜಿಲ್ಲಾಸ್ಪತ್ರೆಯ ಆವರಣದಲ್ಲಿ ಅನಧಿಕೃತವಾಗಿ ಅಂಗಡಿಗಳನ್ನು ಇಟ್ಟುಕೊಂಡಿದ್ದು ಚಿಕಿತ್ಸೆಗೆಂದು ಬರುವ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಜಾಗವಿಲ್ಲದೆ ಪರದಾಡುವಂತಾಗಿದ್ದು ಕೂಡಲೇ ಅಂಗಡಿಗಳನ್ನು ತೆರವುಗೊಳಿಸಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಜಿಲ್ಲಾಸ್ಪತ್ರೆಯ ಮುಂಬಾಗ ನೂತನವಾಗಿ ನಿರ್ಮಾಣ ಮಾಡಲಾಗಿರುವ ತುರ್ತು ನಿಗಾ ಘಟಕ ಶೀಘದಲ್ಲೇ ಉದ್ಘಾಟಿಸಲಾಗುವುದು, ಈ ವೇಳೆ ಸಣ್ಣ ಪುಟ್ಟ ಕೆಲಸಗಳು ಬಾಕಿ ಇವೆ ಎಂದು ಡಿ.ಎಸ್ ಜಗದೀಶ್ ಶಾಸಕರಿಗೆ ಮಾಹಿತಿ ನೀಡಿದರು. ಕೂಡಲೇ ಗುತ್ತಿಗೆ ಪಡೆದಿದ್ದ ಸಂಸ್ಥೆಯ ಮಾಲೀಕರಿಗೆ ದೂರವಾಣಿ ಕರೆ ಮಾಡಿ ಬ್ಯಾಟರಿ, ಜನರೇಟರ್ ಕೆಲಸ ಬಾಕಿ ಇದೆ. ಕೂಡಲೇ ಮುಗಿಸುವಂತೆ ಸೂಚಿಸಿದರು.

ಉತ್ತಮ ಚಿಕಿತ್ಸೆ ನೀಡಬೇಕು

ಶಾಸಕರು ಮಾತನಾಡಿ, ಹಿಂದಿನ ಕಾಲದಲ್ಲಿ ಮೈಸೂರು ಮಹಾರಾಜರು ಇಂತಹ ಅದ್ಬುತವಾದ ಅಸ್ಪತ್ರೆಯನ್ನು ಬಡ ಜನತೆಗೆ ಅನುಕೂಲಕ್ಕಾಗಿ ನಿರ್ಮಾಣ ಮಾಡಿದ್ದಾರೆ, ಈ ಕಾಲದಲ್ಲಿ ಇಂತಹ ಆಸ್ಪತ್ರೆ ನಿರ್ಮಾಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಹಾಗಾಗಿ ಅಸ್ಪತ್ರೆಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಬಡ ಜನತೆಗೆ ಉತ್ತಮ ಸೇವೆ ನೀಡಲು ತಾವೆಲ್ಲಾ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಎಂದು ವೈದ್ಯರಿಗೆ ಸಲಹೆ ನೀಡಿದರು. ಜಿಲ್ಲಾಸ್ಪತ್ರೆಗೆ ಬರುವಂತವರೆಲ್ಲಾ ಬಡ ಜನತೆ. ಅಂತವರಿಗೆ ತುರ್ತಾಗಿ ಸೇವೆ ಸಿಗಲು ಗಮನ ಹರಿಸಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಇದಕ್ಕಾಗಿ ಇಬ್ಬರು ಸಿಬ್ಬಂದಿಯನ್ನು ನೇಮಿಸಿಕೊಳ್ಳಿ. ಸಾರ್ವಜನಿಕರಿಂದ ದೂರುಗಳು ಬರದೇ ಇರುವಂತೆ ನೋಡಿಕೊಳ್ಳಿ ಎಂದು ಡಾ. ಜಗದೀಶ್‌ ಅವರಿಗೆ ಸೂಚಿಸಿದರು. ವೃದಾಪ್ಯ ವೇತನಕ್ಕೆ ವ್ಯವಸ್ಥೆ

ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ವಯಸ್ಸಾದ ವೃದ್ದರೊಬ್ಬರು ಸಿಟಿ ಸ್ಕ್ಯಾನಿಂಗ್ ಮಾಡಿಸಲು ಕಾಯುತ್ತಿರುವುದನ್ನು ಗಮನಿಸಿ ಯೋಗ ಕ್ಷೇಮ ವಿಚಾರಿಸಿ ಅವರಿಗೆ ವೃದಾಪ್ಯ ವೇತನ ಬರುತ್ತಿದೆಯೇ ಇಲ್ಲವೆ ಎನ್ನುವುದರ ಬಗ್ಗೆ ಮಾಹಿತಿ ಕೇಳಿದ್ದಾರೆ. ಈ ವೇಳೆ ವೃದ್ಸ ಮಹಿಳೆ ಇಲ್ಲ ಎನ್ನುತ್ತಿದ್ದಂತೆ ಅವರ ದೂರವಾಣಿ ಸಂಖ್ಯೆ ಪಡೆದು ನಿಮಗೆ ಹಣ ಬರುವಂತೆ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.