ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ವೈದ್ಯರು ಹಾಗೂ ದಾದಿಯರು ಬಡ ರೋಗಿಗಳ ಜತೆಗೆ ಸೌಜನ್ಯದಿಂದ ವರ್ತಿಸಿ, ಅವರ ಘನತೆಗೆ ಬೆಲೆ ನೀಡುವುದರ ಜತೆಗೆ ಸೂಕ್ತ ಚಿಕಿತ್ಸೆ ನೀಡದೇ ಖಾಸಗಿ ಆಸ್ಪತ್ರೆಗೆ ಕಳುಹಿಸಿದರೆ ಅವರು ಅಲ್ಲಿ ಹಣಕಾಸಿನ ಸಂಕಷ್ಟಕ್ಕೆ ಸಿಲುಕುತ್ತಾರೆ. ಸರ್ಕಾರ ಸವಲತ್ತು ನೀಡಿದೆ. ಅವರ ನೋವಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದಲ್ಲಿ ಅವರ ನೆಮ್ಮದಿಯ ಬದುಕಿನಲ್ಲಿ ನಮ್ಮ ಸಾರ್ಥಕತೆ ಕಾಣಬಹುದು ಎಂದು ರಾಜ್ಯ ಆರೋಗ್ಯ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿ ಕುಪ್ಪೆ ಶ್ರೀನಿವಾಸಗೌಡ ಸಲಹೆ ನೀಡಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳ ಜತೆ ಚರ್ಚಿಸಿ, ಖಾಸಗಿ ಔಷಧಾಲಯಗಳಿಂದ ತಂದ ಔಷಧಿಗಳನ್ನು ಪರಿಶೀಲನೆ ನಡೆಸಿದ ನಂತರ ಆಯೋಜಿಸಿದ್ದ ಸಭೆಯಲ್ಲಿ ಸಂಸದ ಶ್ರೇಯಸ್ ಎಂ.ಪಟೇಲ್ ಉಪಸ್ಥಿತಿಯಲ್ಲಿ ಅವರು ಮಾತನಾಡಿದರು. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ೩.೯೪ ಕೋಟಿ ರು. ಹಣ ಬಂದಿದೆ. ಇದರಲ್ಲಿ ೨ ಕೋಟಿ ರು. ಇನ್ನೂ ಉಳಿದಿದೆ. ಈ ಯೋಜನೆಯನ್ನು ಬಳಸಿಕೊಳ್ಳಿ. ನಿಮಗೂ ಶೇ.೩೦ ರಷ್ಟು ಪ್ರೋತ್ಸಾಹ ಧನ ದೊರೆಯುತ್ತದೆ ಎಂದರು. ಅದೇ ರೀತಿ ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಸೌಲಭ್ಯವಿದೆ, ಆದರೂ ಒಬ್ಬ ತಾಯಿಯು ಐದು ಸಾವಿರ ರು. ಖರ್ಚಾಯಿತು ಎಂದು ತಿಳಿಸಿದರು, ಏಕೆ ಹೀಗೆ? ಸರ್ಕಾರ ಸೌಲಭ್ಯ ನೀಡುತ್ತಾ, ಅಗತ್ಯವಿರುವ ಔಷಧಿಗೆ ಅನುದಾನವನ್ನೂ ನೀಡುತ್ತಿದೆ, ಹೀಗಿರುವಾಗ ಹೊರಗಿನಿಂದ ಔಷಧಿ ತರಿಸುವುದು ಎಷ್ಟು ಸರಿ?, ಆಸ್ಪತ್ರೆಯಲ್ಲಿ ಹೊರಗಿನಿಂದ ಒಂದು ರು. ಮಾತ್ರೆ ತರಿಸಿದರೂ ಕ್ರಮಕೈಗೊಳ್ಳುವಂತೆ ಆದೇಶವಿದ್ದು, ಇದಕ್ಕೆ ಅವಕಾಶವಾಗದಂತೆ ಜನರ ಸಮಸ್ಯೆಗೆ ಸ್ಪಂದಿಸುತ್ತಾ, ಜನರು ನೀಡಿರುವ ಗೌರವ ಹಾಗೂ ನಂಬಿಕೆಗೆ ದ್ರೋಹವಾಗದಂತೆ ಮುನ್ನಡೆಯೋಣ ಎಂದು ಸೂಚಿಸಿದರು.
ಜತೆಗೆ ಇತರೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಅವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.ಸಂಸದ ಶ್ರೇಯಸ್ ಎಂ.ಪಟೇಲ್ ಅವರು ಡೆಂಘೀ ಜ್ವರ ನಿಯಂತ್ರಣ ಕುರಿತು ಆಡಳಿತ ವೈದ್ಯಾಧಿಕಾರಿ ಡಾ. ಧನಶೇಖರ್ ಹಾಗೂ ವೈದ್ಯರ ಜತೆ ಚರ್ಚಿಸಿದರು. ನಂತರ ತುರ್ತು ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಡೆಂಘೀ ಜ್ವರ ಉಲ್ಪಣಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಪೂರ್ಣಿಮಾ ಅವರು ದೊಡ್ಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಕರು, ವೈದ್ಯರು, ಶುಶ್ರೂಷಕರ ಜತೆ ಚರ್ಚಿಸಿ, ತುರ್ತು ಸಂದರ್ಭಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.