ಕನ್ನಡಪ್ರಭ ವಾರ್ತೆ ಇಂಡಿ
ಮುಂಗಾರು ಮಳೆ ಇಲ್ಲದೆ ರೈತರು ತತ್ತರಿಸಿದ್ದಾರೆ. ಖರ್ಚು ಮಾಡಿ ಜಮೀನು ಹದ ಮಾಡಿ ಬಿತ್ತನೆಗೆ ಸಜ್ಜುಗೊಳಿಸಿದ್ದಾರೆ. ಮಳೆಯ ಅಭಾವದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಕೂಡಲೇ ಇಂಡಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ತುರ್ತು ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ ಒತ್ತಾಯಿಸಿದರು.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಮಳೆ ಹೆಚ್ಚಾಗಿ ಪ್ರವಾಹ ಬಂದು ಬೆಳೆ ಹಾನಿಯಾಗಿ ತೊಂದರೆ ಅನುಭವಿಸಿದರೆ, ಪ್ರಸಕ್ತ ವರ್ಷ ಮುಂಗಾರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಬರಬೇಕು. ಲಿಂಬೆ ಬೆಳೆಗಾರರು ಲಿಂಬೆ ಬೆಳೆ ಉಳಿಸಿಕೊಳ್ಳಲು ಪ್ರೋತ್ಸಾಹಧನ ನೀಡಬೇಕು. ಲಿಂಬೆ ಬೆಳೆ ಉಳುವಿಗೆ ಲಿಂಬೆ ಅಭಿವೃದ್ಧಿ ನಿಗಮದ ಮೂಲಕ ವಿಶೇಷ ಪ್ಯಾಕೇಜ್ ಘೋಷಿಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ ಮಾತನಾಡಿ, ರಾಜ್ಯದಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟ ಎದುರಿಸುತ್ತಿದ್ದರೂ ರೈತರ ನೆರವಿಗೆ ವಾರದ ವಿಳಂಬ ಮಾಡುತ್ತಿದ್ದು, ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವಂತಾಗಿದೆ ಎಂದು ಟೀಕಿಸಿದರು.ಬಿಜೆಪಿ ಮುಖಂಡ ಅನೀಲ ಜಮಾದಾರ ಮಾತನಾಡಿ, ಕಾವೇರಿ ತೀರದಲ್ಲಿ ಮೋಡ ಬಿತ್ತನೆ ಮಾಡುತ್ತೇವೆ ಎನ್ನುವವರಿಗೆ ಕೂಡ ಕೃಷ್ಣಾ, ಭೀಮಾನದಿ ಭಾಗದ ರೈತರ ಕಷ್ಟ ಕೇಳಿಸುವುದಿಲ್ಲವೇ. ರಾಜ್ಯದಲ್ಲಿ ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೋ ಅಂದು ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆಯಾಗುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶಂಕರಗೌಡ ಪಾಟೀಲ ಡೊಮನಾಳ ಮಾತನಾಡಿ, ರೈತರು ಸಂಕಷ್ಟದಲ್ಲಿದ್ದು, ರೈತರ ಸಾಲ ಮನ್ನಾ ಮಾಡಬೇಕು. ಎಪಿಎಂಸಿ ಮೂಲಕ ಲಿಂಬೆ ಹಣ್ಣು ಖರೀದಿಯಾಗಬೇಕು ಎಂದು ಒತ್ತಾಯಿಸಿದರು.ಈ ವೇಳೆ ರಾಜ್ಯ ಮುಖಂಡ ಶೀಲವಂತ ಉಮರಾಣಿ, ಯುವ ಮೋರ್ಚಾ ಅಧ್ಯಕ್ಷ ಶಿವು ಬಗಲಿ, ರೈತ ಮೋರ್ಚಾ ಅಧ್ಯಕ್ಷ ಚನ್ನಯ್ಯ ಹಿರೇಮಠ, ಸಂತೋಷಗೌಡ ಪಾಟೀಲ, ವಿಜು ಮಾನೆ, ಭಾಗೇಶ ಮಲಗಾಣ, ಸಾಗರ ಉಪಸ್ಥಿತರಿದ್ದರು.