ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯಲ್ಲಿ ವನ್ಯ ಜೀವಿಗಳ ದಾಳಿಯಿಂದ ಗಾಯಗೊಂಡವರಿಗೆ 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು ೨೦೨೫ ರ ಜನವರಿಯಿಂದ ಇದುವರೆಗೆ ಸಂಭವಿಸಿರುವ ಅವಘಡಗಳು, ಸಾವು,ಗಾಯಗೊಂಡವರ ಪಟ್ಟಿಯನ್ನು ತಾಲ್ಲೂಕುವಾರು ಸಿದ್ದಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಗಾಯಗೊಂಡವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರದಲ್ಲಿ ಎಪೆನಾಲ್ ಆಗಿರುವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಒಂದು ಸುತ್ತೋಲೆ ಹೊರಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಾಲೂಕು ಆರೋಗ್ಯ ಅಧಿಕಾರಿಗಳು ವಿಳಂಬ ಮಾಡದೆ ಗಾಯಾಳುಗಳ ಆರೋಗ್ಯದ ಮೇಲೆ ಉಂಟಾಗಿರುವ ತೀವ್ರತೆಯನ್ನು ಅರಿತು ತಕ್ಷಣ ಪ್ರಮಾಣಪತ್ರವನ್ನು ನೀಡಿ ಪರಿಹಾರ ನೀಡಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಪರಿಹಾರಕ್ಕೆ ಜನರು ಅಲೆದಾಟ ಮಾಡದಂತೆ ಎಚ್ಚರಿಕೆವಹಿಸಿ ಪರಿಹಾರ ಒದಗಿಸಲು ಅಧಿಕಾರಿಗಳಿಗೆ ತಿಳಿಸಿದರು.ಶಾಶ್ವತ ಅಂಗವಿಕಲತೆಗೆ ೧೦ ಲಕ್ಷ, ಭಾಗಶಃ ಅಂಗವಿಕಲತೆಗೆ ೫ ಲಕ್ಷ ಪರಿಹಾರ ನೀಡಲು ಅಧಿಕಾರಿಗಳು ನಿಗಾವಹಿಸಲು ನಿರ್ದೇಶನ ನೀಡಿದರು. ಬೆಳೆ ,ಪೈಪ್‌ಲೈನ್, ಗೇಟ್, ಕಾಂಪೌಂಡ್, ಶೆಡ್ ಮೇಲೆ ಪ್ರಾಣಿಗಳು ದಾಳಿ ಮಾಡಿ ನಷ್ಟ ಉಂಟು ಮಾಡಿದಾಗ ಪರಿಹಾರ ನೀಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತೆಂಗು, ಅಡಿಕೆ, ಕಾಫಿ, ಮೆಣಸು ಮತ್ತಿತರ ತೋಟಗಾರಿಕೆ ಬೆಳೆಗಳನ್ನು ವನ್ಯ ಪ್ರಾಣಿಗಳು ದಾಳಿ ಮಾಡಿ ನಷ್ಟ ಉಂಟು ಮಾಡಿದಾಗ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಕ್ಕೆ ನೆರವಾಗುವಂತೆ ಒಂದು ಸಮಿತಿ ರಚಿಸಿ ವರದಿ ತಯಾರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಬಿಕ್ಕೋಡು, ಅರೆಹಳ್ಳಿ ವ್ಯಾಪ್ತಿಯಲ್ಲಿ ಆನೆಗಳು ಓಡಾಡುವುದರಿಂದ ಸಾರ್ವಜನಿಕರು ಕತ್ತಲೆ ಸಮಯದಲ್ಲಿ ಎಚ್ಚರವಹಿಸಲು ಸಹಕಾರಿಯಾಗುವಂತೆ ರಸ್ತೆಯ ತಿರುವಿನಲ್ಲಿ ಹಾಗೂ ಎರಡು ಬದಿಗಳಲ್ಲಿ ವಿದ್ಯುತ್ ದೀಪ ಅಳವಡಿಳಸಲು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಮಲೆನಾಡು ಪ್ರದೇಶದಲ್ಲಿ ನೆಟ್ ವರ್ಕ್ ಸಿಗದಿರುವ ಗ್ರಾಮಗಳು ಮತ್ತು ಸ್ಥಳಗಳನ್ನು ಗುರುತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅರೆಹಳ್ಳಿಯಲ್ಲಿ ಸುಸ್ಸಜ್ಜಿತ ಅಂಬುಲೆನ್ಸ್ ೨೪x೭ ಲಭ್ಯವಿರುವಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿದರು. ಈ ವ್ಯಾಪ್ತಿಯಲ್ಲಿ ಎಷ್ಟು ಶಾಲೆಗಳಿವೆ ಎಷ್ಟು ಮಕ್ಕಳಿದ್ದಾರೆ. ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಬೇಕು ಎಂದು ತಿಳಿಸಿದರಲ್ಲದೆ,ನ.೨೭ ರಂದು ನಡೆಯುವ ಸಭೆಯಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಾಡುಕೋಣ, ಕರಡಿ, ಚಿರತೆ ಮತ್ತಿತರ ವನ್ಯ ಪ್ರಾಣಿಗಳ ದಾಳಿಯಿಂದ ಉಂಟಾಗುವ ನಷ್ಟದ ಬಗ್ಗೆ ಎಲ್ಲಾ ತಹಸೀಲ್ದಾರ್ ಗಳು ಗಮನಹರಿಸಿ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಮಂಜುನಾಥ್,ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರಾದ ಹೇಮಲತಾ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))