ಚಿಕ್ಕಮಗಳೂರುಮತದಾರಪಟ್ಟಿ ತೀವ್ರ ಸಮಗ್ರ ಪರಿಷ್ಕರಣೆ ಕುರಿತು ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಜಾಗೃತಿ ಮೂಡಿಸಿ ತಿಳಿಸುವ ಕೆಲಸ ಮಾಡಬೇಕೆಂದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮತದಾರಪಟ್ಟಿ ತೀವ್ರ ಸಮಗ್ರ ಪರಿಷ್ಕರಣೆ ಕುರಿತು ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಜಾಗೃತಿ ಮೂಡಿಸಿ ತಿಳಿಸುವ ಕೆಲಸ ಮಾಡಬೇಕೆಂದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.

ನಗರದ ಎಐಟಿ ವೃತ್ತದ ಸಮೀಪ ಒಕ್ಕಲಿಗರ ಭವನದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಚಿಕ್ಕಮಗಳೂರು-ಹಾಸನ ಜಿಲ್ಲೆಯ ಕಾರ್ಯಕರ್ತರಿಗೆ ಎಸ್‌ಐಆರ್ ಸಮಗ್ರ ಮತದಾನ ಪಟ್ಟಿ ಪರಿಷ್ಕರಣೆ ಕುರಿತು ತರಬೇತಿ ಮತ್ತು ಸಮಾಲೋಚನಾ ಸಭೆಯಲ್ಲಿ ಮಾತನಾಡಿ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಈಗಿನಿಂದಲೇ ಸನ್ನದ್ಧರಾಗಬೇಕು. ತಳಮಟ್ಟದಲ್ಲಿ ನಾಯಕತ್ವ ಬೆಳೆಸಲು ಪಕ್ಷ ಅವಕಾಶ ನೀಡಿದೆ. ಹೀಗಾಗಿ ಎಲ್ಲರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಪಕ್ಷದ ಕಾರ್ಯಕರ್ತರು ಅರ್ಹ ಮತದಾನದ ಹಕ್ಕನ್ನು ಕಸಿದುಕೊಳ್ಳದಂತೆ ಗಮನಹರಿಸ ಬೇಕು. ಮ್ಯಾಪಿಂಗ್ ನಡೆದಿರುವ ಅನೇಕ ಕಡೆಗಳಲ್ಲಿ ಮತದಾರರನ್ನು ಪಟ್ಟಿಯಿಂದ ಅಳಿಸುವ ಪ್ರಕ್ರಿಯೆ ನಡೆದಿವೆ. ಹಲವೆಡೆ ಮ್ಯಾಪಿಂಗ್ ಪ್ರಕ್ರಿಯೆ ಹಂತದಲ್ಲಿರುವ ಕಾರಣ ಪಕ್ಷದ ಮುಖಂಡರು ಸೇನಾನಿಗಳಂತೆ ವಿಚಾರ ವಿನಿಯಮ ಮಾಡಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಕರೆ ನೀಡಿದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸಂದಿಗ್ನ ಪರಿಸ್ಥಿತಿ ಯಲ್ಲಿ ಸಿಲುಕಿಕೊಂಡಿದೆ. ಕೇಂದ್ರ ಸರ್ಕಾರ ಎಸ್‌ಐಆರ್ ಅಸ್ತ್ರ ಬಳಸಿ ಜನಸಾಮಾನ್ಯರ ಮತದಾನದ ಹಕ್ಕನ್ನು ಕಸಿಯುವ ದೊಡ್ಡ ಸಂಚು ರೂಪಿಸುತ್ತಿದೆ.

ಎಸ್‌ಐಆರ್ ಸಂವಿಧಾನದಲ್ಲಿ ಅಡಕವಾಗಿದೆ. 1951ರ ಇಸವಿಯಿಂದ ಎಂಟು ಬಾರಿ ಎಸ್‌ಐಆರ್ ಆಗಿದೆ. ಭಾರತದ ಪ್ರತಿ ಪ್ರಜೆ, ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಪ್ರಶ್ನಿಸಿಕೊಳ್ಳಬೇಕು. ಬಿಜೆಪಿ ಸರ್ಕಾರ ಸಂವಿ ಧಾನ ನೀಡಿದ ಹಕ್ಕನ್ನು ತಿರುಚುವ ಕೆಲಸ ಮಾಡುತ್ತಿದೆ. ಈಗಿನ ಎಸ್‌ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ಯಲ್ಲ, ಮತಾಧಿಕಾರದ ಹಗರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೇಶದಲ್ಲಿ ಎಂಟು ಬಾರಿ ಎಸ್‌ಐಆರ್ ನಡೆದರೂ ಯಾವುದೇ ರಾಜಕೀಯ ಪಕ್ಷಗಳು ಎಸ್‌ಐಆರ್ ತರಬೇತಿ ಶಿಬಿರ, ಜಾಗೃತಿ ಕೆಲಸ ಮಾಡಿಲ್ಲ. ಅದು ಚುನಾವಣಾ ಆಯೋಗದ ಪಾರದರ್ಶಕ ಪ್ರಕ್ರಿಯೆಯಾಗಿತ್ತು. ಆದರೆ ಹನ್ನೊಂದು ವರ್ಷಗಳಲ್ಲಿ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಬುಡಮೇಲು ಮಾಡಿ, ಚುನಾಯಿತ ಸರ್ಕಾರವೇ ಮತದಾರ ಯಾರೆಂದು ಗುರುತಿಸುತ್ತಿದೆ ಎಂದು ದೂರಿದರು.ಸದ್ಯದಲ್ಲೇ ಮ್ಯಾಪಿಂಗ್ ಕಾರ್ಯ ಮುಗಿಯುವ ಹಂತದಲ್ಲಿದೆ. ಆ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಪ್ರತಿ ವಾರ್ಡ್ಗಳಲ್ಲಿ ಮಾಹಿತಿ ಕೇಂದ್ರ ತೆರೆದು ಜನರಿಗೆ ಅರಿವು ಮಾಡಬೇಕು. ನಿರ್ಲಕ್ಷ್ಯಸಿದರೆ ಮುಂದೆ ಭಾರೀ ಗಂಡಾಂತರ ಕಾದಿದೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ 16 ಕೋಟಿ ಜನಸಂಖ್ಯೆಯಿದೆ. ಎಸ್‌ಐಆರ್ ಬಳಿಕ 2 ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡುವ ಕೆಲಸ ಬಿಜೆಪಿ ಮಾಡಿದೆ ಎಂದರು.ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಎಸ್‌ಐಆರ್ ಬಳಸಿ ಕೇಂದ್ರದ ಬಿಜೆಪಿ ಸರ್ಕಾರ, ಆರ್‌ಎಸ್‌ಎಸ್ ಸಂಘಟನೆಗಳು ಮತದಾರನ್ನು ಹಕ್ಕನ್ನು ಕಸಿದುಕೊಳ್ಳಲು ಮುಂದಾಗುತ್ತಿದೆ. ಆ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದ ಬರಲು ಕಾರಣವಾದ ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳಲು ಹೋರಾಟ ರೂಪಿಸಿಕೊಂಡು ಯಶಸ್ವಿಯಾಗಬೇಕು ಎಂದು ಕರೆ ನೀಡಿದರು.ಹಾಸನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್‌ ಮಾತನಾಡಿದರು. ಇದೇ ವೇಳೆ ಕರ್ನಾಟಕ ಜಾಗೃತ ಬಳಗದ ಸಂಚಾಲಕ ಡಾ. ಬಿ.ಸಿ.ಬಸವರಾಜ್ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಡಿ.ಎಲ್.ವಿಜಯ್ ಕುಮಾರ್, ಎಂ.ಎಲ್.ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಸಂಶೊಧನಾ ವಿಭಾಗದ ಎಚ್.ಎಸ್.ಶಿವಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕೆ.ಮಹಮ್ಮದ್, ಸತೀಶ್, ಮಾಜಿ ವಿಧಾನಪರಿಷತ್‌ ಸದಸ್ಯೆ ಗಾಯತ್ರಿಶಾಂತೇಗೌಡ ಉಪಸ್ಥಿತರಿದ್ದರು.

ಫೋಟೋ: ಚಿಕ್ಕಮಗಳೂರಿನ ಎಐಟಿ ವೃತ್ತದ ಸಮೀಪ ಒಕ್ಕಲಿಗರ ಭವನದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಚಿಕ್ಕಮಗಳೂರು-ಹಾಸನ ಜಿಲ್ಲೆಯ ಕಾರ್ಯಕರ್ತರಿಗೆ ಎಸ್‌ಐಆರ್ ಸಮಗ್ರ ಮತದಾನ ಪಟ್ಟಿ ಪರಿಷ್ಕರಣೆ ಕುರಿತು ತರಬೇತಿ ಮತ್ತು ಸಮಾಲೋಚನಾ ಸಭೆ ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಉದ್ಘಾಟಿಸಿದರು.