ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸಗಿ
ಹುಣಸಗಿ ಮತ್ತು ಕೊಡೇಕಲ್ ಸರಕಾರಿ ವಿಜ್ಞಾನ ಪಿಯು ಕಾಲೇಜುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ತಾಲೂಕು ಕರವೇ ಕಾರ್ಯಕರ್ತರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.ಈ ವೇಳೆ ಕರವೇ ತಾಲೂಕಾಧ್ಯಕ್ಷ ರಮೇಶ ಬಿರಾದಾರ್ ಮಾತನಾಡಿ, ಹುಣಸಗಿ ತಾಲೂಕಿನಲ್ಲಿ ಎರಡು ವಿಜ್ಞಾನ ವಿಭಾಗದ ಕಾಲೇಜುಗಳಿವೆ. ಆದರೆ, ಸೂಕ್ತ ಪ್ರಯೋಗಾಲಯ, ಉಪನ್ಯಾಸಕರು ಹಾಗೂ ವಸತಿ ನಿಲಯಗಳು ಇಲ್ಲದಿರುವುದರಿಂದ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳತ್ತ ಮುಖ ಮಾಡುವಂತಾಗಿದೆ ಎಂದರು.ಕೊಡೇಕಲ್ ಪದವಿ ಪೂರ್ವ ಕಾಲೇಜಿನಲ್ಲಿ, ಪಿಯು ಮೊದಲ ವರ್ಷ ವಿಜ್ಞಾನ ವಿದ್ಯಾರ್ಥಿಗಳ ಸಂಖ್ಯೆ 35 ಇತ್ತು. ಅದು ಎರಡನೇ ವರ್ಷ 30ಕ್ಕೆ ಇಳಿದಿದೆ. ಇದಕ್ಕೆ ಜೀವಶಾಸ್ತ್ರ ವಿಷಯದ ಉಪನ್ಯಾಸಕರು ಇಲ್ಲದಿರುವುದೇ ಕಾರಣ. ಕಾಲೇಜಿನ ಕೋಣೆಗಳು ಮೇಲ್ಛಾವಣಿ ಇಲ್ಲದೇ ಸೋರುತ್ತಿದೆ. ಕಾಲೇಜಿನ ಆಡಳಿತ ನಿರ್ವಹಣೆಗೆ ಅಗತ್ಯ ಸೌಲಭ್ಯ ಕೊರತೆ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಲೇಜಿನಲ್ಲಿ ಪ್ರತ್ಯೇಕವಾಗಿ ರಾಸಾಯನಿಕ, ಜೀವಶಾಸ್ತ್ರ ಮತ್ತು ಭೌತಶಾಸ್ತ್ರ ಪ್ರಯೋಗಾಲಯವನ್ನು ನಿರ್ಮಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ದೃಷ್ಟಿಯಿಂದ ಸಿಇಟಿ, ಎನ್.ಇ.ಇ.ಟಿ, ಜೆಇಇ ತರಬೇತಿ ಕಾರ್ಯಕ್ರಮಗಳು ನಡೆಯಬೇಕು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಷಯವಾರು ಪುಸ್ತಕಗಳನ್ನು ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಮಾನಸಿಂಗ ಚವ್ಹಾಣ, ಶಿವರಾಜ ಹೊಕ್ರಾಣಿ, ಅಮರೇಶ ನೂಲಿ, ರಮೇಶ ಪೂಜಾರಿ ಸೇರಿದಂತೆ ಇತರರಿದ್ದರು.