ಅಂಬೇಡ್ಕರ್‌ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸಿ

| Published : Jun 15 2024, 01:01 AM IST

ಸಾರಾಂಶ

ತಾಲೂಕಿನ ಸಾಲೋಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಂಬೇಡ್ಕರ್ ನಗರ ರಸ್ತೆ, ಶೌಚಾಲಯ, ಬೀದಿ ದೀಪಗಳು, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಮೂಲಭೂತ ಸೌಕರ್ಯ ಒಗಿದಸಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗಿರುವುದಿಲ್ಲ. ನಾಳೆ, ನಾಡಿದ್ದು ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಸಾಲೋಟಗಿ ಗ್ರಾಮ ಪಂಚಾಯಿತಿ ಸದಸ್ಯ ಧರ್ಮರಾಜ ಸಾಲೋಟಗಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ಸಾಲೋಟಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅಂಬೇಡ್ಕರ್‌ ನಗರ ರಸ್ತೆ, ಶೌಚಾಲಯ, ಬೀದಿ ದೀಪಗಳು, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ. ಮೂಲಭೂತ ಸೌಕರ್ಯ ಒಗಿದಸಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರು ಪ್ರಯೋಜನವಾಗಿರುವುದಿಲ್ಲ. ನಾಳೆ, ನಾಡಿದ್ದು ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಸಾಲೋಟಗಿ ಗ್ರಾಮ ಪಂಚಾಯಿತಿ ಸದಸ್ಯ ಧರ್ಮರಾಜ ಸಾಲೋಟಗಿ ತಿಳಿಸಿದ್ದಾರೆ.

ಅಂಬೇಡ್ಕರ್‌ ನಗರದ ರಸ್ತೆಯಲ್ಲಿ ತಗ್ಗುಗಳು ಬಿದ್ದು ಮಳೆ ನೀರು ನಿಂತು ರಾಡಿಯಾಗುತ್ತಿದೆ. ರಸ್ತೆಗೆ ಗರಸು ಹಾಕಿ ಅಭಿವೃದ್ಧಿ ಪಡಿಸಬೇಕು. ಶುದ್ದ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ಮೂರ್ನಾಲ್ಕು ವರ್ಷಗಳು ಕಳೆದರೂ ದುರಸ್ತಿ ಮಾಡಿಲ್ಲ. ಕಳೆದ ಮೂರು ವರ್ಷಗಳಿಂದ ಪಿಡಿಒ ಅವರಿಗೆ ಮನವಿ ಮಾಡುತ್ತಲೇ ಬರಲಾಗಿದೆ. ಆದರೂ ಪಿಡಿಒ ಅವರು ಸದಸ್ಯರ ಮಾತಿಗೆ ಬೆಲೆ ನೀಡುತ್ತಿಲ್ಲ. ಅಂಬೇಡ್ಕರ್‌ ನಗರದ ನಿವಾಸಿಗಳು ಮಳೆ ಬಂದರೆ ನಡೆದುಕೊಂಡು ಹೋಗಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಂಬೇಡ್ಕರ್‌ ನಗರಕ್ಕೆ ಹೋಗುವ ಕುಡಿಯುವ ನೀರಿನ ಪೈಪ್‌ಲೈನ್‌ ಚರಂಡಿಯಲ್ಲಿ ಹಾಕಿದ್ದು, ಪೈಪ್‌ಗಳು ಅಲ್ಲಲ್ಲಿ ಒಡೆದು ಚರಂಡಿ ನೀರು ಪೈಪಿನಲ್ಲಿ ಸೇರಿಕೊಂಡು ಹೋಗುತ್ತಿದೆ. ಚರಂಡಿಯಿಂದ ಕುಡಿಯುವ ನೀರಿನ ಪೈಪ್‌ ಮೇಲೆ ಹಾಕಬೇಕು ಎಂದು ಹೇಳಿದರೂ ಕೇಳುತ್ತಿಲ್ಲ. ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ಹೊಸ ಶೌಚಾಲಯ ನಿರ್ಮಾಣ ಮಾಡಲಾಗುತ್ತದೆ ಎಂದು ಹಳೆ ಶೌಚಾಲಯ ನೆಲಸಮ ಮಾಡಿದ್ದಾರೆ. ಇತ್ತ ಹೊಸ ಶೌಚಾಲಯವೂ ಇಲ್ಲ. ಹಳೆ ಶೌಚಾಲಯವೂ ಇಲ್ಲದಂತಾಗಿ, ಮಹಿಳೆಯರು ರಸ್ತೆಯ ಬದಿಯಲ್ಲಿ ಬಹಿರ್ದೇಸೆ ಮಾಡುವ ಪರಿಸ್ಥಿತಿ ಉಂಟಾಗಿದೆ. ಕೂಡಲೇ ಅಂಬೇಡ್ಕರ್‌ ನಗರಕ್ಕೆ ಹೋಗುವ ರಸ್ತೆ ಅಭಿವೃದ್ಧಿಪಡಿಸಬೇಕು. ಬೀದಿ ದೀಪಗಳು ಅಳವಡಿಸಬೇಕು. ಮಹಿಳೆಯರಿಗೆ ಶೌಚಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಕಳೆದ 3 ವರ್ಷಗಳಿಂದ 14 ಹಾಗೂ 15 ನೇ ಹಣಕಾಸು ಯೋಜನೆ ಅಡಿಯಲ್ಲಿ ಒಂದೂ ಕೆಲಸ ಮಾಡಿಲ್ಲ. ಪಜಾ,ಪಪಂಗಳಿಗೆ ಮೀಸಲಿರುವ ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ದಿ ಮಾಡದೇ ಹಾಗೆಯೇ ಅನುದಾನ ದುರುಪಯೋಗ ಪಡಿಸಿಕೊಂಡಿದ್ದಾರೆ. ಕೂಡಲೇ ಸಾಲೋಟಗಿ ಗ್ರಾಪಂಗೆ ಬಂದಿರುವ 15ನೇ ಹಣಕಾಸು ಯೋಜನೆಯ ಕ್ರೀಯಾಯೋಜನೆ, ಕಾಮಗಾರಿಯನ್ನು ಮೇಲಧಿಕಾರಿಗಳು ಪರಿಶೀಲನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.