ಹಾನಿಗೊಳಗಾದ ಭತ್ತಕ್ಕೆ ವಿಮೆ ಪರಿಹಾರ ನೀಡಿ: ಕೆ.ರಮೇಶ್

| Published : Oct 09 2025, 02:01 AM IST

ಹಾನಿಗೊಳಗಾದ ಭತ್ತಕ್ಕೆ ವಿಮೆ ಪರಿಹಾರ ನೀಡಿ: ಕೆ.ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕಂಪ್ಲಿ ತಾಲೂಕಿನ ಕೆಲವೆಡೆ ಭತ್ತ ಬೆಳೆ ಗರಿ ಒಣಗುವ ರೋಗಕ್ಕೆ ತುತ್ತಾಗಿ ಸಂಪೂರ್ಣವಾಗಿ ಹಾನಿಗೊಳಗಾಗಿದೆ.

ಕಂಪ್ಲಿ: ತಾಲೂಕಿನ ಕೆಲವೆಡೆ ಭತ್ತ ಬೆಳೆ ಗರಿ ಒಣಗುವ ರೋಗಕ್ಕೆ ತುತ್ತಾಗಿ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ರೈತರ ಕಷ್ಟವನ್ನು ಅರ್ಥ ಮಾಡಿಕೊಂಡು ಭತ್ತಕ್ಕೆ ವಿಮೆ ಪರಿಹಾರ ಒದಗಿಸಬೇಕು ಎಂದು ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಕೊಟ್ಟೂರು ರಮೇಶ ಒತ್ತಾಯಿಸಿದರು.

ತಾಲೂಕಿನ ಸಣಾಪುರ ಗ್ರಾಮದಲ್ಲಿ ಹಾನಿಗೊಳಗಾದ ಬೆಳೆಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದರು.

ಸಣಾಪುರ ಗ್ರಾಮದಲ್ಲಿ ಹತ್ತು ಎಕರೆ ಭತ್ತ ಸಂಪೂರ್ಣವಾಗಿ ನೆಲಕ್ಕೆ ಬಿದ್ದಿದೆ. ಗರಿ ಒಣಗುವ ರೋಗದಿಂದ ಗಿಡಗಳು ಒಣಗಿ ಇಳುವರಿಯಲ್ಲಿ ಭಾರೀ ಕುಸಿತ ಉಂಟಾಗಿದೆ. ಎಕರೆಗೊಂದು ಸರಾಸರಿ ಮೂವತ್ತು ಸಾವಿರ ರೂಪಾಯಿಗಳಷ್ಟು ವೆಚ್ಚ ಮಾಡಿರುವ ರೈತರಿಗೆ ಈಗ ನಷ್ಟದ ಭೀತಿ ಎದುರಾಗಿದೆ. ಹಾನಿಗೊಳಗಾದ ಬೆಳೆಗೆ ವಿಮೆ ಮಾಡಿಸಲಾಗಿದೆ. ಈ ಕುರಿತು ಹಲವು ದಿನಗಳಿಂದ ವಿಮಾ ಸಂಸ್ಥೆಯವರಿಗೂ ಹಾಗೂ ಕೃಷಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಭತ್ತ ಬೆಳೆ ರೈತನ ಆರ್ಥಿಕ ನಾಡಿಯಂತಿದೆ. ರೋಗಪೀಡಿತ ಬೆಳೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ವಿಮೆ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಭತ್ತ ಬೆಳೆ ವಿಮೆ ಮಾಡಿಸಿರುವ ರೈತರಿಗೆ ಪರಿಹಾರ ನೀಡುವ ಕಾರ್ಯವನ್ನು ಕೈಗೊಳ್ಳಬೇಕು. ಬೆಳೆ ನಷ್ಟವನ್ನು ಪರಿಗಣಿಸಿ ವಿಮಾ ಸಂಸ್ಥೆಗಳು ನ್ಯಾಯಸಮ್ಮತ ಪರಿಹಾರ ನೀಡದಿದ್ದರೆ ರೈತ ಸಂಘ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು. ರೈತ ಮುಖಂಡ ಕನಕಗಿರಿ ರೇಣುಕಗೌಡ ಇದ್ದರು.