ಬಾಚಣಕಿ ಗ್ರಾಮಕ್ಕೆ ನೀರಾವರಿ ಸೌಲಭ್ಯ ಒದಗಿಸಿ: ರೈತರ ಪ್ರತಿಭಟನೆ

| Published : Mar 26 2024, 01:06 AM IST / Updated: Mar 26 2024, 01:07 AM IST

ಸಾರಾಂಶ

ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯವರು ಸೋಮವಾರ ಪ್ರತಿಭಟನೆ ನಡೆಸಿದರು.

ಮುಂಡಗೋಡ: ಬಾಚಣಕಿ ಗ್ರಾಮದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯವರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಅರ್ಪಿಸಿದರು.

ಮುಂಡಗೋಡ ತಾಲೂಕು ಬಾಚಣಕಿ ಗ್ರಾಪಂ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಬಾಚಣಕಿ ಜಲಾಶಯವು ೩೧೦ ಎಂ.ಸಿ.ಎಫ್.ಟಿ. ಸಾಮರ್ಥ್ಯದ ನೀರು ಸಂಗ್ರಹಣೆ ವ್ಯವಸ್ಥೆ ಹೊಂದಿದ್ದು, ಜಲಾಶಯ ಇರುವ ಬಾಚಣಕಿ ಗ್ರಾಮದ ರೈತರು ಈಗಲೂ ಮಳೆ ಆಧರಿತ ಬೇಸಾಯವನ್ನೇ ಅವಲಂಬಿಸಿದ್ದಾರೆ. ೧೯೭೨ರಲ್ಲಿ ಬಾಚಣಕಿ ಜಲಾಶಯ ನಿರ್ಮಾಣವಾಗಿದ್ದು, ಅಂದಿನಿಂದ ಇಂದಿನವರೆಗೂ ಗ್ರಾಮದ ಸುಮಾರು ೩೦೦ ಎಕರೆ ಪ್ರದೇಶದ ರೈತರ ಜಮೀನಿಗಳಿಗೆ ಜಲಾಶಯದಿಂದ ನೀರಾವರಿ ಸೌಲಭ್ಯವನ್ನು ಒದಗಿಸಲಾಗಿಲ್ಲ. ಆಗಿನ ತೀವ್ರ ಬರಗಾಲದ ಸಂದರ್ಭದಲ್ಲಿ ರೈತರು ಕೃಷಿ ಚಟುವಟಿಕೆ ಮಾಡಲು ನೀರಿಗಾಗಿ ರೈತರು ಬೋರ್‌ವೆಲ್‌ಗಳ ಮೊರೆ ಹೋಗಿದ್ದು, ಸುಮಾರು ೬೦೦ ಅಡಿ ಕೊರೆಸಿದರೂ ನೀರು ಬಾರದೇ ಇರುವುದರಿಂದ ರೈತರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ತಕ್ಷಣ ಸಣ್ಣ ನೀರಾವರಿ ಇಲಾಖೆ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಬೆಳಗಾವಿ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಬೇಡಿಕೆಗಳು: ಬಾಚಣಕಿ ಗ್ರಾಮದ ರೈತರ ಸುಮಾರು ೧೦೦ ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕು. ತಾಲೂಕಿನ ರೈತರ ಜಮೀನುಗಳಿಗೆ ಹೋಗಲು "ನಮ್ಮ ಹೆಮ್ಮೆ ನಮ್ಮ ದಾರಿ " ಯೋಜನೆಯಲ್ಲಿ ರಸ್ತೆ ನಿರ್ಮಾಣ ಮಾಡಬೇಕು. ತಾಲೂಕಿನಾದ್ಯಂತ ಇರುವ ಸಣ್ಣ ಮತ್ತು ದೊಡ್ಡ ಕೆರೆಗಳ ಹೂಳೆತ್ತುವ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಬೇಕು. ರೈತರು ಪ್ರತಿ ವರ್ಷ ತುಂಬುವ ಬೆಳೆ ವಿಮೆಯ ಸೌಲಭ್ಯವನ್ನು ಕೂಡಲೆ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಬೇಡಿಕೆ ಮಂಡಿಸಿದರು. ಬೇಡಿಕೆ ಈಡೇರದೇ ಹೋದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.