ಸಾರಾಂಶ
ಅರ್ಹ ಕಟ್ಟಡ ಕಾರ್ಮಿಕರಿಗೆ ಪರಿಕರಗಳ ಕಿಟ್ ವಿತರಿಸದೇ ಅನರ್ಹರಿಗೆ ವಿತರಿಸಲಾಗುತ್ತಿದೆ ಎಂದು ಆರೋಪಿಸಿ ನೂರಾರು ಕಟ್ಟಡ ಕಾರ್ಮಿಕರು, ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಬುಧವಾರ ದಿಢೀರ್ ರಸ್ತೆ ತಡೆ ಹಾಗೂ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಅರ್ಹ ಕಟ್ಟಡ ಕಾರ್ಮಿಕರಿಗೆ ಪರಿಕರಗಳ ಕಿಟ್ ವಿತರಿಸದೇ ಅನರ್ಹರಿಗೆ ವಿತರಿಸಲಾಗುತ್ತಿದೆ ಎಂದು ಆರೋಪಿಸಿ ನೂರಾರು ಕಟ್ಟಡ ಕಾರ್ಮಿಕರು, ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಬುಧವಾರ ದಿಢೀರ್ ರಸ್ತೆ ತಡೆ ಹಾಗೂ ಕಾರ್ಮಿಕ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಸರ್ಕಾರದ ಯೋಜನೆಗಳು ಕಾರ್ಮಿಕ ಇಲಾಖೆಯಿಂದ ಅಧಿಕೃತ ಕಾರ್ಡ್ ಹೊಂದಿರುವವರಿಗೆ ಮಾತ್ರ ಯೋಜನೆಗಳ ಸೌಲಭ್ಯ ಕೊಡಬೇಕು. ಆದರೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದಾಗಿ ಹಲವಾರು ಅನರ್ಹರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿವೆ. ಆದರೆ, ಕಾರ್ಡ್ ಹೊಂದಿರುವ ನಮಗೆ ಯೋಜನೆಗಳು ಸಿಗುತ್ತಿಲ್ಲ ಎಂದು ಕಿಟ್ ವಂಚಿತ ಹಲವಾರು ಜನ ಕಟ್ಟಡ ಕಾರ್ಮಿಕರು ದೂರಿದರು.
ಕಟ್ಟಡ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್ ಮಾತನಾಡಿ, ಇಲ್ಲಿ ಪ್ರತಿಭಟನೆ ಮಾಡುತ್ತಿರುವ ಎಲ್ಲರೂ ಕಾರ್ಡ್ ಹೊಂದಿರುವ ಅರ್ಹ ಫಲಾನುಭವಿಗಳು. ಆದರೆ. ಇಲ್ಲಿ ಯಾರಿಗೂ ಇನ್ನೂ ಕಿಟ್‌ಗಳೇ ವಿತರಿಸಿಲ್ಲ. ₹2000 ಮೊತ್ತದ ಕಟ್ಟಡ ಪರಿಕರಗಳು ಸಹ ಕಳಪೆಯಿಂದ ಕೂಡಿವೆ. ಅಧಿಕಾರಿಗಳು ಎಚ್ಚೆತ್ತು ಅರ್ಹ ಫಲಾನುಭವಿಗಳಿಗೆ ಗುಣಮಟ್ಟದ ಪರಿಕರಗಳ ಕಿಟ್‍ಗಳನ್ನು ವಿತರಸಬೇಕು ಎಂದು ಒತ್ತಾಯಿಸಿದರು.ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಅಧಿಕಾರಿಗಳು ಕಾರ್ಡ್ ಹೊಂದಿದ ಹಾಗೂ ಹಿರಿತನದ ಆದ್ಯತೆ ಮೇರೆಗೆ ಕಿಟ್‌ಗಳನ್ನು ನೀಡಬೇಕು. ತಾರತಮ್ಯ ನೀತಿ ನಿಲ್ಲಿಸದಿದ್ದರೆ ಕಿಟ್ ವಂಚಿತ ಅರ್ಹರೊಂದಿಗೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೂರಾರು ಕಟ್ಟಡ ಕಾರ್ಮಿಕರು ದಿಢೀರ್ ರಸ್ತೆ ತಡೆ ನಡೆಸಿದ್ದರಿಂದ ಅರ್ಧ ತಾಸು ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾಯಿತು. ಪ್ರತಿಭಟನೆಯಲ್ಲಿ ಹನುಮಂತಪ್ಪ, ಬಸವರಾಜಪ್ಪ, ಕೆಂಚಪ್ಪ, ಹಳದಪ್ಪ ಮತ್ತಿತರರು ಇದ್ದರು.