ಮೊಬೈಲ್‌ಗಳ ಅಂರ್ತಜಾಲ ಸೌಲಭ್ಯವನ್ನು ನಾವು ಸಾಧ್ಯವಾದಷ್ಟು ಸದುಪಯೋಗಪಡಿಸಿಕೊಳ್ಳಬೇಕಿದೆ ಜೊತೆಗೆ ನಿಮ್ಮನ್ನು ಹುಡುಕಿ ಬರುವ ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯದಾನ ಕಲ್ಪಿಸಲು ಇದು ಸಹಕಾರಿಯಾಗಲಿದೆ. ಅಗತ್ಯ ಸೇವೆಗಳಿಂದ ಏಕಾಗ್ರತೆ, ಸಮಯಪ್ರಜ್ಞೆ ಹಾಗೂ ಕಾರ್ಯಬದ್ಧತೆಯಿಂದ ಜನರಿಗೆ ನ್ಯಾಯಿಕ ಸೇವೆ ಲಭ್ಯವಾದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಅದು ಉತ್ತಮ ಕೊಡುಗೆಯಾಗಲಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ನ್ಯಾಯ ಹುಡುಕಿ ನ್ಯಾಯಾಲಯಕ್ಕೆ ಆಗಮಿಸುವ ಕಕ್ಷಿದಾರರಿಗೆ ನ್ಯಾಯವಾದಿಗಳು ಕಾರ್ಯದಕ್ಷತೆ ಮತ್ತು ಬದ್ಧತೆಯಿಂದ ಕಾನೂನು ಸೇವೆಗಳನ್ನು ಕಲ್ಪಿಸಬೇಕು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ತಿಳಿಸಿದರು.

ಪಟ್ಟಣದ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ವಕೀಲರ ಗ್ರಂಥಾಲಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಬದಲಾದ ಕಾಲಘಟ್ಟ, ಆಧುನಿಕತೆ ಮತ್ತು ತಾಂತ್ರಿಕ ಅನೂಕೂಲತೆಗೆ ನಮ್ಮನ್ನು ನಾವು ಪರಿವರ್ತಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಮೊಬೈಲ್‌ಗಳ ಅಂರ್ತಜಾಲ ಸೌಲಭ್ಯವನ್ನು ನಾವು ಸಾಧ್ಯವಾದಷ್ಟು ಸದುಪಯೋಗಪಡಿಸಿಕೊಳ್ಳಬೇಕಿದೆ ಜೊತೆಗೆ ನಿಮ್ಮನ್ನು ಹುಡುಕಿ ಬರುವ ಕಕ್ಷಿದಾರರಿಗೆ ತ್ವರಿತವಾಗಿ ನ್ಯಾಯದಾನ ಕಲ್ಪಿಸಲು ಇದು ಸಹಕಾರಿಯಾಗಲಿದೆ. ಅಗತ್ಯ ಸೇವೆಗಳಿಂದ ಏಕಾಗ್ರತೆ, ಸಮಯಪ್ರಜ್ಞೆ ಹಾಗೂ ಕಾರ್ಯಬದ್ಧತೆಯಿಂದ ಜನರಿಗೆ ನ್ಯಾಯಿಕ ಸೇವೆ ಲಭ್ಯವಾದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಅದು ಉತ್ತಮ ಕೊಡುಗೆಯಾಗಲಿದೆ ಎಂದು ಹೇಳಿದರು.

ಶಾಸಕ, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಸಮಾಜ ವ್ಯವಸ್ಥೆಯಲ್ಲಿ ಉಂಟಾಗುವ ಕೆಲವೊಂದು ಲೋಪದೋಷಗಳು, ಎದುರಾಗುವ ಸಮಸ್ಯೆಗಳ ಸರಿಪಡಿಸಲು ಜ್ಞಾನದ ಕಲಿಕೆ ಅತ್ಯಂತ ಅಗತ್ಯವಾಗಿದೆ. ಇಂತಹ ವಿಷಯಗಳ ಅಭ್ಯಾಸ ಮಾಡಲು ಹೆಚ್ಚಿನ ಜ್ಞಾನಭಂಡಾರವಿರುವ ಗ್ರಂಥಾಲಯ ಬೇಕಿತ್ತು ಎಂದರು.

ಸಾಕಷ್ಟು ಹಿರಿಯ ನ್ಯಾಯಾವಾದಿಗಳು ಹಾಗೂ ನ್ಯಾಯಾಧೀಶರ ಇಚ್ಚೆಯಂತೆ ಬಹಳ ವರ್ಷಗಳಿಂದ ಬೇಡಿಕೆಯಾಗಿದ್ದ ಗ್ರಂಥಾಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇನ್ನು ಹೆಚ್ಚಿನ ಸೌಲಭ್ಯಗಳಿಗೆ ತಮ್ಮ ಶಾಸಕರ ನಿಧಿಯಿಂದ ಅನುದಾನ ನೀಡುವ ಭರವಸೆ ನೀಡಿದರು.

ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಶಿವಮೂರ್ತಿ ಮಾತನಾಡಿ, ರಾಜ್ಯದ ನ್ಯಾಯಾಲಯಗಳಲ್ಲಿ ಇನ್ನು ಮುಂದೆ ಏಕರೂಪದ ವಸ್ತ್ರಸಂಹಿತೆ ಜಾರಿಗೆ ಬರಲಿದೆ. ಇದರ ಉಲ್ಲಂಘನೆ ಮಾಡುವ ನ್ಯಾಯಾವಾದಿಗಳಿಗೆ ನ್ಯಾಯಾಲಯಗಳಲ್ಲಿ ತಮ್ಮ ಕೇಸುಗಳ ವಿಚಾರದಲ್ಲಿ ಹಾಜರಾಗಲು ಅನುಮತಿ ಲಭಿಸುವುದಿಲ್ಲ. ಇದು ನಮ್ಮ ಶಿಸ್ತು, ಬದ್ಧತೆ ಮತ್ತು ಕಾರ್ಯಕ್ಷಮತೆ ಇನ್ನಷ್ಟು ಗೌರವದೊಂದಿಗೆ ಹೆಚ್ಚಿಸಲು ಸಹಕಾರಿಯಾಗಲಿದೆ. ಇದರ ಪಾಲನೆ ಎಲ್ಲರಿಂದಾಗಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ್, ವಕೀಲರ ಸಂಘದ ತಾಲೂಕು ಅಧ್ಯಕ್ಷ ಎನ್.ಮರೀಗೌಡ, ೩ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಧೀಶೆ ಡಿ.ಜ್ಯೋತ್ಸ್ನಾ, ರಾಜ್ಯ ವಕೀಲರ ಪರಿಷತ್‌ನ ಸದಸ್ಯ ಮಹದೇವಪ್ರಸಾದ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮೋಹನ್ ಗೌಡ, ಸಿವಿಲ್ ನ್ಯಾಯಾಧೀಶ ಕೃಷ್ಣಮೂರ್ತಿ, ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶ ಉಮೇಶ್ ಎಂ.ಪಿ., ಕಿರಿಯ ಕು.ಪ್ರತೀಕ್ಷ, ಕಾರ್ಯದರ್ಶಿ ದಿನೇಶ್, ಹಿರಿಯ ವಕೀಲರಾದ ಡಾ.ಎಂ.ಪುಟ್ಟೇಗೌಡ,ಲೋಕೋಪಯೋಗಿ ಇಲಾಖೆ ಎಇಇ ಉಮೇಶ್ ಇತರರು ಉಪಸ್ಥಿತರಿದ್ದರು.