ದೇವದಾಸಿ ಮಹಿಳೆಯರಿಗೆ ಹೆಚ್ಚಿನ ಯೋಜನೆ ಒದಗಿಸಿ

| Published : Dec 22 2023, 01:30 AM IST

ದೇವದಾಸಿ ಮಹಿಳೆಯರಿಗೆ ಹೆಚ್ಚಿನ ಯೋಜನೆ ಒದಗಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಆರ್.ಏಟ್ ಹೋಟೆಲ್‌ ಸಭಾಂಗಣದಲ್ಲಿ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್‌, ಅಮ್ಮಾ ಫೌಂಡೇಶನ್‌ ಸಹಯೋಗದಲ್ಲಿ ಚಿಲ್ಡ್ರನ್ ಗುಡ್ ಯೋಜನೆ ವತಿಯಿಂದ ದೇವದಾಸಿ ಮಹಿಳೆಯರು ಹಾಗೂ ಮಕ್ಕಳ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಹೊರಡಿಸಿದ ಆದೇಶಗಳ ಮಾಹಿತಿ ಹಂಚಿಕೆ ಕಾರ್ಯಾಗಾರ ನಡೆಯಿತು. ಈ ವೇಳೆ ಚಂದ್ರಶೇಖರ ಎಸ್.ಚಿನಕೇಕರ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ದೇವದಾಸಿ ಪದ್ಧತಿಯು ಒಂದು ಅನಿಷ್ಟ ಪದ್ಧತಿಯಾಗಿದೆ. ಇದನ್ನು ತಡೆಗಟ್ಟಲು ದೇವದಾಸಿಯರ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು. ಅಲ್ಲದೇ, ದೇವದಾಸಿ ಮಹಿಳೆಯರಿಗೆ ಸರ್ಕಾರ ಇನ್ನೂ ಹೆಚ್ಚಿನ ಯೋಜನೆಗಳನ್ನು ಒದಗಿಸಿಕೊಡಬೇಕು ಎಂದು ಚಂದ್ರಶೇಖರ ಎಸ್.ಚಿನಕೇಕರ ಹೇಳಿದರು.

ಪಟ್ಟಣದ ಆರ್.ಏಟ್ ಹೋಟೆಲ್‌ ಸಭಾಂಗಣದಲ್ಲಿ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್‌, ಅಮ್ಮಾ ಫೌಂಡೇಶನ್‌ ಸಹಯೋಗದಲ್ಲಿ ಚಿಲ್ಡ್ರನ್ ಗುಡ್ ಯೋಜನೆ ವತಿಯಿಂದ ದೇವದಾಸಿ ಮಹಿಳೆಯರು ಹಾಗೂ ಮಕ್ಕಳ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಹೊರಡಿಸಿದ ಆದೇಶಗಳ ಮಾಹಿತಿ ಹಂಚಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಮಾಧ್ಯಮಗಳು ಸಮಾಜದ ಓರೆ ಕೋರೆಗಳನ್ನು ತಿದ್ದಿ ಸರಿ ದಾರಿಗೆ ತರುವ ಕೆಲಸ ಮಾಡುತ್ತಿದ್ದು, ದೇವದಾಸಿ ಪದ್ಧತಿ ನಿರ್ಮೂಲನೆಯಲ್ಲಿ ಮಾಧ್ಯಮಗಳ ಪಾತ್ರ ಅಪಾರವಾಗಿದೆ ಎಂದರು.

ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸಹಸ್ರಾರು ದೇವದಾಸಿ ಮಹಿಳೆಯರು ಸರ್ಕಾರ ನಡೆಸಿದ ಸಮೀಕ್ಷೆಯಿಂದ ಹೊರಗುಳಿದಿದ್ದು, ಅವರಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ದೇವದಾಸಿ ಮಹಿಳೆಯರ ಮಕ್ಕಳು ಮುಜುಗುರಕ್ಕೊಳಗಾಗದೇ ಶಿಕ್ಷಣ ಪಡೆದುಕೊಂಡು ಸಾಧನೆ ಮಾಡಬೇಕು ಎಂದು ತಿಳಿಸಿದರು.

ದೇವದಾಸಿ ಸೇವಾ ಸಂಸ್ಥೆಯ ಅಧ್ಯಕ್ಷೆ ನಿಂಗವ್ವ ಕಾಂಬಳೆ ಮಾತನಾಡಿ, ದೇವದಾಸಿ ಮಹಿಳೆಯರಿಗೆ ಮಾಸಿಕ ಪಿಂಚಣಿಯನ್ನು ₹5 ಸಾವಿರಗೆ ಹೆಚ್ಚಿಸಬೇಕು. ದೇವದಾಸಿ ಮಹಿಳೆಯರ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸಿಕೊಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸರ್ಕಾರದ ನಾರಿ ಶಕ್ತಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ, ಅಮ್ಮಾ ಫೌಂಡೇಶನ್‌ ಕಾರ್ಯದರ್ಶಿ ಶೋಭಾ ಗಸ್ತಿ ಮಾತನಾಡಿ, ತಂದೆಯ ಹೆಸರನ್ನು ಕಡ್ಡಾಯಗೊಳಿಸಿದ್ದರಿಂದ ಬ್ಯಾಂಕ್ ಅಕೌಂಟ್ ತೆರೆಯುವುದು ಸೇರಿದಂತೆ ವಿವಿಧ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ದೇವದಾಸಿ ಮಹಿಳೆಯರ ಮಕ್ಕಳು ತೀವ್ರ ತೊಂದರೆಗೊಳಗಾಗುತ್ತಿದ್ದು, ಇದನ್ನು ಸರ್ಕಾರ ಕೈಬಿಡಬೇಕು. ದೇವದಾಸಿ ಮಹಿಳೆಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ವಸತಿ ನಿಲಯಗಳಲ್ಲಿ ಮೀಸಲಾತಿ ನಿಗದಿಪಡಿಸಬೇಕು. ದೇವದಾಸಿ ಮಹಿಳೆಯರಿಗೆ ನಿವೇಶನ ನೀಡಬೇಕು ಎಂದರು.

ಸಂಸ್ಥೆ ಹೊರ ತಂದ ಜನಪರ ವಕಾಲತ್ತು ಫಲಿತಾಂಶಗಳು ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.

ಮೇಘನಾ ಮಾದರ, ಅಕ್ಷತಾ ಸನದಿ, ಪ್ರಿಯಾಂಕಾ ಕಾಂಬಳೆ, ಶ್ರಾವಣಿ ದೊಡಮನಿ ಮುಂತಾದ ಕಿಶೋರಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಗುಡ್ ಯೋಜನೆಯ ಸಂಯೋಜಕಿ ಮಂಜುಳಾ ಹರಿಜನ ಪ್ರಾಸ್ತಾವಿಕವಾಗಿ ಮಾತನಾಡಿ, ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಲು ಸಂಸ್ಥೆ ಮಾಡುತ್ತಿರುವ ಕೆಲಸ ಕಾರ್ಯಗಳ ಕುರಿತು ಮಾಹಿತಿಯನ್ನು ಹಂಚಿಕೊಂಡರು.

ಮೂಡಲಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಿರೆನ್ನವರ, ಕಾಂಚನಾ ಮೇತ್ರಿ, ಲಕ್ಷ್ಮೀ ಹತ್ತರಕಿ, ಪತ್ರಕರ್ತರಾದ ರಾಜು ಸಂಕೇಶ್ವರಿ, ಮಹಾದೇವ ಪೂಜೇರಿ, ಕಾಶಿನಾಥ ಸುಳಕುಡೆ, ರವಿ ಮಂಗಾವೆ, ಡಿ ಕೆ ಉಪ್ಪಾರ, ಲಾಲಸಾಬ ತಟಗಾರ, ಮಹಾಂತೇಶ ಮಠಪತಿ, ವೆಂಕಟೇಶ ಬಾಲರೆಡ್ಡಿ, ಭೀಮಶಿ ತಳವಾರ, ಸಂಜೀವ ಕಾಂಬಳೆ, ಈಶ್ವರ ಢವಳೇಶ್ವರ ಉಪಸ್ಥಿತರಿದ್ದರು. ಸುಜಾತಾ ಕೆಳಗಡೆ ಸ್ವಾಗತಿಸಿದಳು. ಸರಿತಾ ಗಸ್ತಿ ನಿರೂಪಿಸಿದರು. ಯಲ್ಲಪ್ಪ ಮಾದರ ವಂದಿಸಿದರು.