ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳ ಕಲ್ಪಿಸಿ

| Published : Feb 18 2025, 12:32 AM IST

ಸಾರಾಂಶ

ರಾಜ್ಯದ ಸರ್ಕಾರಿ ಆಸ್ಪತ್ರೆಗಳನ್ನು ಉಳಿಸಿ, ಸುಸಜ್ಜಿತಗೊಳಿಸುವುದು, ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

- ದಾವಣಗೆರೆ ಎಸಿ ಕಚೇರಿ ಬಳಿ ಎಸ್‌ಸುಸಿಐ ಪ್ರತಿಭಟನೆಯಲ್ಲಿ ಸರ್ಕಾರಕ್ಕೆ ಜಿಲ್ಲಾ ಮುಖಂಡ ಮಂಜುನಾಥ ಕೈದಾಳೆ ಒತ್ತಾಯ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಸರ್ಕಾರಿ ಆಸ್ಪತ್ರೆಗಳನ್ನು ಉಳಿಸಿ, ಸುಸಜ್ಜಿತಗೊಳಿಸುವುದು, ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಪದಾಧಿಕಾರಿಗಳು, ಮುಖಂಡರ ನೇತೃತ್ವದಲ್ಲಿ ಪ್ರತಿಭಟಿಸಿದ ಕಾರ್ಯಕರ್ತರು, ಸಾವಿರಾರು ಸಾರ್ವಜನಿಕರಿಂದ ಸಂಗ್ರಹಿಸಿದ ಸಹಿಯುಳ್ಳ ಮನವಿ ಪತ್ರವನ್ನು ಎಸಿ ಕಚೇರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು.

ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೈದಾಳೆ ಈ ಸಂದರ್ಭ ಮಾತನಾಡಿ, ದಾವಣಗೆರೆಯಲ್ಲಿ ಬಹು ವರ್ಷಗಳ ಬೇಡಿಕೆಯಾದ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಆರಂಭಿಸಬೇಕು. ಜಯದೇವ ಹೃದ್ರೋಗ ಆಸ್ಪತ್ರೆ ಜಿಲ್ಲಾ ಘಟಕವನ್ನು ನಗರದಲ್ಲಿ ಸ್ಥಾಪಿಸಬೇಕು. ಇಲ್ಲಿನ ಜಿಲ್ಲಾಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳ ಗುಣಮಟ್ಟ, ಸೇವೆ, ಸೌಲಭ್ಯವನ್ನು ಉತ್ತಮಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಬೆಡ್‌ಗಳು ಹಾಗೂ ವೈದ್ಯರ ಸಂಖ್ಯೆ ಹೆಚ್ಚಿಸಬೇಕು. ಅವಶ್ಯಕ ಸುಸಜ್ಜಿತ ಕಟ್ಟಡ, ಕೊಠಡಿ, ಶೌಚಾಲಯಗಳು, ಶುದ್ಧ ಕುಡಿಯುವ ನೀರು, ಮೂಲಭೂತ ಆಧುನಿಕ ಯಂತ್ರೋಪಕರಣಗಳು, ಇತರೆ ಸೌಕರ್ಯ ಒದಗಿಸಬೇಕು. ಅವಶ್ಯಕತೆ ಇರುವಷ್ಟು ನುರಿತ ವೈದ್ಯರು, ದಾದಿಯರು, ಇತರೆ ವೈದ್ಯಕೀಯ ಸಿಬ್ಬಂದಿ, ''''''''ಡಿ'''''''' ಗ್ರೂಪ್ ನೌಕರರನ್ನು ಕಾಯಂ ಆಧಾರದಲ್ಲಿ ನೇಮಕಾತಿ ಮಾಡಬೇಕು ಎಂದರು.

ಬಿಪಿಎಲ್ ಕಾರ್ಡ್‌ದಾರರು ಸೇರಿದಂತೆ ಎಲ್ಲ ಜನಸಾಮಾನ್ಯರಿಗೆ ಉಚಿತ ಚೀಟಿ, ಸ್ಕ್ಯಾನಿಂಗ್‌, ರಕ್ತ ಪರೀಕ್ಷೆ, ಸರ್ಜರಿಗಳಿಗೆ ಅನುಕೂಲ ಮಾಡಿಕೊಡಬೇಕು. ಜಿಲ್ಲಾಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚೀಟಿ, ಹಣ ಪಾವತಿ, ಔಷಧಿ ಕೌಂಟರ್ ಸಂಖ್ಯೆ ಹೆಚ್ಚಿಸಬೇಕು. ಆಸ್ಪತ್ರೆ ಔಷಧಾಲಯಗಳಲ್ಲಿ ಉತ್ತಮ ಗುಣಮಟ್ಟದ ಎಲ್ಲ ಅವಶ್ಯಕತೆ ಪೂರೈಸಬೇಕು. ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಕ್ಷೇತ್ರದ ಖಾಸಗೀಕರಣ ನಿಲ್ಲಿಸಿ, ಆರೋಗ್ಯ ಕ್ಷೇತ್ರಕ್ಕೆ ಸರ್ಕಾರಿ ಬಜೆಟ್‌ನಲ್ಲಿ ಅನುದಾನ ಹೆಚ್ಚಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಸೇರಿದಂತೆ ಎಲ್ಲ ಹಂತಗಳ ಆಸ್ಪತ್ರೆಗಳ ಸಂಖ್ಯೆ ಹಾಗೂ ಗುಣಮಟ್ಟ ಹೆಚ್ಚಿಸಿ, ಆಸ್ಪತ್ರೆಗಳ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು. ಜಿಲ್ಲಾದ್ಯಂತ ಸರ್ಕಾರಿ ಆಸ್ಪತ್ರೆಗಳು ಸಮಸ್ಯೆಗಳ ಆಗರಗಳಾಗಿವೆ. ಪಿಎಚ್‌ಸಿಗಳಿಂದ ಹಿಡಿದು ಜಿಗಟೇರಿ ಜಿಲ್ಲಾಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯವರೆಗೂ ಸಾಕಷ್ಟು ಸಮಸ್ಯೆಗಳಿವೆ. ಅವಶ್ಯಕತೆ ಇರುವಷ್ಟು ನುರಿತ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಆಧುನಿಕ ಯಂತ್ರೋಪಕರಣಗಳ ಕೊರತೆ ಇದೆ ಎಂದು ತಿಳಿಸಿದರು.

ಜಿಲ್ಲಾ ಸಮಿತಿ ಸದಸ್ಯ ಅಣಬೇರು ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರದ ಹುಸಿ ಆರ್ಥಿಕ ಸಂಕಷ್ಟದ ನೆಪದಿಂದಾಗಿ ಬಿಪಿಎಲ್‌ ಕಾರ್ಡ್ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಸ್ಕ್ಯಾನಿಂಗ್, ರಕ್ತಪರೀಕ್ಷೆ, ಸರ್ಜರಿ ಸೇರಿದಂತೆ ಇತರೆ ಉಚಿತ ತಪಾಸಣೆಗಳಿಗೂ ಕತ್ತರಿ ಬಿದ್ದಿದೆ. ಆದ್ದರಿಂದ ಕೇಂದ್ರ-ರಾಜ್ಯ ಸರ್ಕಾರಗಳು ಕೂಡಲೇ ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಅವಶ್ಯಕ ಅನುದಾನ ಹೆಚ್ಚಿಸಿ, ಆಧುನಿಕ ತಂತ್ರಜ್ಞಾನವುಳ್ಳ ಚಿಕಿತ್ಸಾ ಯಂತ್ರೋಪಕರಣ ಒದಗಿಸಬೇಕು. ವಿದ್ಯಾ ಕೇಂದ್ರ, ವಾಣಿಜ್ಯ ಕೇಂದ್ರ, ಪ್ರಮುಖ ಸ್ಮಾರ್ಟ್‌ ಸಿಟಿಯಾದ ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಎಂ.ಆರ್.ಹಿರೇಮಠ, ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಇಸ್ಮಾಯಿಲ್, ಮಂಜುನಾಥ ಕುಕ್ಕುವಾಡ, ಮಧು ತೊಗಲೇರಿ, ಪರಶುರಾಮ, ಕೆ.ಭಾರತಿ, ಮಹಾಂತೇಶ, ಅನಿಲ್, ಪೂಜಾ ನಂದಿಹಳ್ಳಿ, ಸುಮನ್, ಗುರು, ಕಾವ್ಯ, ಮಮತಾ, ಮಂಜುಳಾ ಹರಿಹರ, ಖಲೀಲ್ ಇತರರು ಇದ್ದರು.

- - -

ಬಾಕ್ಸ್‌ * ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಕಡಿತ: ಅಪರ್ಣ ಟೀಕೆ ಆರೋಗ್ಯಕ್ಕೆ ಪ್ರತಿ ವರ್ಷ ಬಜೆಟ್‌ನಲ್ಲಿ ಅನುದಾನ ಕಡಿತಗೊಳಿಸಿದ್ದರಿಂದ ರೋಗಿಗಳಿಗೆ ಸಮರ್ಪಕ, ಗುಣಮಟ್ಟದ ಔಷಧೋಪಚಾರ ಒದಗಿಸಲಾಗದೇ, ಈಚೆಗೆ ಬಾಣಂತಿಯರು, ನವಜಾತ ಶಿಶುಗಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಪ್ರಧಾನಿ ಅಮೇರಿಕ ಪ್ರವಾಸದಲ್ಲಿ ಆರೋಗ್ಯ- ಶಿಕ್ಷಣದಂತಹ ಪ್ರಮುಖ ಸೇವಾ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಹ್ವಾನಿಸುತ್ತಿದ್ದಾರೆ. ರಾಜ್ಯದಲ್ಲೂ ಇನ್‌ವೆಸ್ಟ್ ಕರ್ನಾಟಕದಲ್ಲಿ ಲಕ್ಷಾಂತರ ಕೋಟಿ ಬಂಡವಾಳ ಹೂಡಿಕೆಯಾದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಆರೋಗ್ಯ ಕ್ಷೇತ್ರ ಅಭಿವೃದ್ಧಿಪಡಿಸುವ ಯಾವ ಯೋಜನೆ ಇಲ್ಲ. ಬಡವರು, ರೈತರು, ಕಾರ್ಮಿಕರು ಒಗ್ಗಟ್ಟಾಗಿ ಸರ್ಕಾರದ ಜನವಿರೋಧಿ ನೀತಿಗಳನ್ನು ಒಕ್ಕೊರಲಿನಿಂದ ಪ್ರತಿಭಟಿಸಬೇಕು ಎಂದು ರಾಜ್ಯ ಸಮಿತಿ ಸದಸ್ಯೆ ಬಿ.ಆರ್‌.ಅಪರ್ಣ ಹೇಳಿದರು.

- - - -17ಕೆಡಿವಿಜಿ1, 2.ಜೆಪಿಜಿ:

ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ, ದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಒತ್ತಾಯಿಸಿ ದಾವಣಗೆರೆಯಲ್ಲಿ ಸೋಮವಾರ ಸುಸಿ ಸಂಘಟನೆ ಪ್ರತಿಭಟಿಸಿತು.