ಸಾರಾಂಶ
ಕೊರಟಗೆರೆ: ಮಕ್ಕಳ ದೈಹಿಕ ಕ್ಷಮತೆ- ಕ್ರಿಯಾಶೀಲತೆಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬಿಕಾ ತಿಳಿಸಿದರು.
ಕೊರಟಗೆರೆ: ಮಕ್ಕಳ ದೈಹಿಕ ಕ್ಷಮತೆ- ಕ್ರಿಯಾಶೀಲತೆಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬಿಕಾ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಗ್ರಾಪಂ ವ್ಯಾಪ್ತಿಯ ಗಿಡಚಿಕ್ಕನಹಳ್ಳಿ ಗ್ರಾಮದಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಹಿಂದೆ ಸಿರಿಧಾನ್ಯಗಳು, ತರಕಾರಿಗಳನ್ನು ಹೆಚ್ಚಾಗಿ ಬಳಸುವ ಮೂಲಕ ನಮ್ಮ ಹಿರಿಯರು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದರು. ಹಳ್ಳಿಗಳಲ್ಲಿ ಅಕ್ಕಿಯನ್ನು ನೋಡುತ್ತಿದ್ದುದೇ ಅಪರೂಪವಾಗಿತ್ತು. ಆದರೆ ಈಗ ಅಕ್ಕಿ, ಸಕ್ಕರೆ ಮೊದಲಾದ ಪದಾರ್ಥಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಮಕ್ಕಳು ತರಕಾರಿಗಳನ್ನು ತೆಗೆದಿಟ್ಟು ಊಟ ಮಾಡುತ್ತಿರುವ ಬೆಳವಣಿಗೆ ಹೆಚ್ಚಾಗುತ್ತಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಪೂರ್ತಿ ಪೋಷಣ್ ಅಭಿಯಾನ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ರಕ್ತಹೀನತೆ, ಶಿಶು ಮರಣ ಕಡಿಮೆ ಮಾಡುವುದು, ಕಡಿಮೆ ತೂಕದ ಮಕ್ಕಳ ಜನನವನ್ನು ತಡೆಗಟ್ಟುವುದು, ಗರ್ಭಿಣಿ ಬಾಣಂತಿಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ಕಡಿಮೆ ಮಾಡುವುದಾಗಿದೆ ಎಂದು ತಿಳಿಸಿದರು. ಗ್ರಾ.ಪಂ ಪಿಡಿಓ ಪೃಥ್ವಿಭಾ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಎಲ್ಲರೂ ತಮ್ಮ ತಮ್ಮ ಮನೆಯ ಬಳಿ ಪೌಷ್ಟಿಕ ಕೈತೋಟ ನಿರ್ಮಿಸಿಕೊಂಡು ತರಕಾರಿಗಳನ್ನು ಬೆಳೆಸಿ ಅದರಿಂದ ಆರೋಗ್ಯಯುತ ಅಡಿಗೆ ತಯಾರಿಸಿಕೊಂಡು ಸೇವಿಸಿದಾಗ ಯಾವುದೇ ಆಸ್ಪತ್ರೆಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದು ಸಲಹೆ ನೀಡಿದರು. ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಈ ಸಂದರ್ಭದಲ್ಲಿ ಅರಸಾಪುರ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯರಾದ ರಾಮಕೃಷ್ಣಯ್ಯ, ಮಂಜುನಾಥ್, ಗಿಡಚಿಕ್ಕನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಬಸವರಾಜು, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಯಶೋದಮ್ಮ, ವೈದ್ಯಾಧಿಕಾರಿಗಳಾದ ಡಾ.ರೋಹಿತ್, ಅಂಗನವಾಡಿ ಸಹಾಯಕಿ ರತ್ನಮ್ಮ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.