ಗರ್ಭಿಣಿಯರು, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ

| Published : Oct 13 2025, 02:00 AM IST

ಗರ್ಭಿಣಿಯರು, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯವಂತ ಮಗು ಜನನವಾಗಬೇಕಾದರೆ ಮೊದಲು ಮಹಿಳೆಗೆ ಆರೋಗ್ಯಪೂರ್ಣ ಆಹಾರವನ್ನು ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅಂಬಿಕಾ ಹೇಳಿದರು

ಕನ್ನಡಪ್ರಭವಾರ್ತೆ ತುರುವೇಕೆರೆ

ಆರೋಗ್ಯವಂತ ಮಗು ಜನನವಾಗಬೇಕಾದರೆ ಮೊದಲು ಮಹಿಳೆಗೆ ಆರೋಗ್ಯಪೂರ್ಣ ಆಹಾರವನ್ನು ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅಂಬಿಕಾ ಹೇಳಿದರು.

ತಾಲೂಕಿನ ಅಮ್ಮಸಂದ್ರದ ಕಾರ್ಮಿಕರ ಭವನದಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಂಡಿನಶಿವರ ಮತ್ತು ಅಮ್ಮಸಂದ್ರ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಗರ್ಭಿಣಿಯರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡಬೇಕು. ಗರ್ಭಿಣಿಯರು ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಗರ್ಭಿಣಿಯರು ಯಾವುದೇ ಕಾರಣಕ್ಕೂ ಕುರುಕಲು ತಿಂಡಿ, ಜಂಕ್ ಫುಡ್ ಗೆ ದಾಸರಾಗಬಾರದು. ಮಗು ಹೊಟ್ಟೆಯಲ್ಲಿ ಬೆಳೆಯುವ ಸಮಯದಲ್ಲಿ ಏನು ಸೇವಿಸುತ್ತಾರೋ ಅದೇ ಮಕ್ಕಳಿಗೆ ಬರಲಿದೆ. ಮಹಿಳೆ ಗರ್ಭಿಣಿ ಆದ ದಿನದಿಂದ ಮಗು ಎರಡು ವರ್ಷದವರೆಗೆ ಬೆಳೆಯುವತನಕ ಅಂದರೆ ಕನಿಷ್ಠ 1 ಸಾವಿರ ದಿನಗಳ ಕಾಲ ಉತ್ತಮ ಗುಣಮಟ್ಟದ ಪೌಷ್ಠಿಕಾಂಶಯುಕ್ತ ಆಹಾರವನ್ನಷ್ಠೇ ಸೇವಿಸಬೇಕು ಎಂದು ಅಂಬಿಕಾ ಕಿವಿಮಾತು ಹೇಳಿದರು. ಗರ್ಭಿಣಿಯಾದ ವೇಳೆ ಮತ್ತು ನಂತರ ಮಹಿಳೆಯರು ಅದಷ್ಟು ಮೊಬೈಲ್ ನಿಂದ ದೂರವಿರುವುದು ಒಳಿತು. ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಅದು ಪರಿಣಾಮ ಬೀರಲಿದೆ. ಮಹಿಳೆಯರು ತಾವು ಹೆತ್ತ ಮಗುವಿಗೆ ಕನಿಷ್ಠ 2 ವರ್ಷದವರೆಗೆ ಎದೆ ಹಾಲು ಕುಡಿಸಿದರೆ ಮಗು ತನ್ನ ಜೀವಮಾನಪರ್ಯಂತ ಆರೋಗ್ಯವಂತವಾಗಿರುತ್ತದೆ. ಎದೆ ಹಾಲು ಕುಡಿಸುವುದರಿಂದ ತಮ್ಮ ಸೌಂದರ್ಯ ಕಡಿಮೆಯಾಗುತ್ತದೆ ಎಂಬುದು ಅಪನಂಬಿಕೆ. ಅದೆಲ್ಲಾ ಸುಳ್ಳು. ಮಗುವಿಗೆ ಎದೆ ಹಾಲು ಕುಡಿಸಿದಷ್ಠೂ ಮಹಿಳೆಯೂ ಆರೋಗ್ಯವಂತರಾಗಿರುತ್ತಾರೆ ಎಂದು ಅವರು ಕಿವಿಮಾತು ಹೇಳಿದರು. ಎಲ್ಲಾ ತಾಯಂದಿರಿಗೂ ತನ್ನ ಮಗುವಿಗೆ ಎಷ್ಟು ಅಗತ್ಯವೋ ಅಷ್ಟು ಪ್ರಮಾಣದಲ್ಲಿ ಪ್ರಕೃತ್ತಿ ದತ್ತವಾಗಿ ಎದೆಹಾಲು ಉತ್ಪತ್ತಿಯಾಗುತ್ತದೆ. ಮಗುವಿಗೆ ತಾಯಿ ಬಹಳ ಶಾಂತಚಿತ್ತತೆಯಿಂದ ಹಾಲುಣಿಸಬೇಕು. ಎರಡು ವರ್ಷದ ವರೆಗೂ ಬೇರೆ ಆಹಾರಗಳನ್ನು ಕೊಡಬಾರದು. ಎದೆ ಹಾಲೇ ಮಗುವಿಗೆ ಅಮೃತವಿದ್ದಂತೆ. ಹಾಗೆಯೇ ತಾಯಯೂ ಸಹ ಶಕ್ತಿಯುತವಾದ ಆಹಾರವಾಗಿರುವ ಮಾಂಸ, ಮೊಟ್ಟೆ, ತರಕಾರಿಗಳು, ಸೊಪ್ಪು, ಕಾಳುಗಳು ಸೇರಿದಂತೆ ಇನ್ನಿತರ ಪೌಷ್ಠಿಕಾಂಶ ಆಹಾರಗಳನ್ನು ಸೇವಿಸಿದಲ್ಲಿ ರೋಗದಿಂದ ದೂರವಿರಬಹುದೆಂದು ಅಂಬಿಕಾ ತಿಳಿಸಿದರು. ಮಗುವಿನ ಭವಿಷ್ಯ ತಾಯಿಯ ಕೈಲಿದೆ. ತಾಯಿ ಆಲಸ್ಯ ಮಾಡಿದರೆ ಜೀವನಪರ್ಯಂತ ನೀವೇ ಕೊರಗಬೇಕಾಗುತ್ತದೆ ಎಂದು ಎಚ್ಚರಿಯ ಸಂದೇಶವನ್ನೂ ಸಹ ಅಂಬಿಕಾ ನೀಡಿದರು. ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖಾ ಅಧಿಕಾರಿ ವೆಂಕಟಪ್ಪ ಮಾತನಾಡಿ ತಾಯಿಯೇ ಮಗುವಿಗೆ ಮೊದಲ ಗುರು ಅಷ್ಠೇ ಅಲ್ಲ ವೈದ್ಯೆಯೂ ಹೌದು. ಆಕೆ ತನ್ನ ಆರೋಗ್ಯವನ್ನು ಸರಿಯಾಗಿಟ್ಟುಕೊಂಡರೆ ಮಗುವಿಗೆ ಅದೇ ಶ್ರೀರಕ್ಷೆ ಇದ್ದಂತೆ. ಆದಷ್ಟೂ ಮಹಿಳೆಯರು ಮೊಬೈಲ್ ನಿಂದ ದೂರವಿರಬೇಕು. ನಿಮ್ಮನ್ನು ನೋಡಿ ಮಗು ಕಲಿಯತ್ತದೆ. ಆರೋಗ್ಯ ಪೂರ್ಣ ನಾರಿ ಸುಕ್ಷಿತ ಸಮಾಜಕ್ಕೆ ದಾರಿ ಎನ್ನುವಂತೆ ಮಹಿಳೆ ಆರೋಗ್ಯವಾಗಿದ್ದಲ್ಲಿ ಕುಟುಂಬ ಮತ್ತು ಸಮಾಜ ನೆಮ್ಮದಿಯಾಗಿರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಂ.ಜೆ ಸಿ ಶಾಲಾ ಮುಖ್ಯೋಪಧ್ಯಾಯಿನಿ ಪವಿತ್ರಾ ಚಾರ್, ವೈದ್ಯಾಧಿಕಾರಿಗಳಾದ ಪವಿತ್ರಾ, ಸಾಹೇರಾ, ಮಮತಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಣ್ಣ, ಸದಸ್ಯರಾದ ಸಿದ್ದಗಂಗಣ್ಣ, ಉಮೇಶ್, ಗಂಗಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕಾರ್ಮಿಕ ಭವನದ ವ್ಯವಸ್ಥಾಪಕ ಗಂಗಾಧರಯ್ಯ, ದಂಡಿನಶಿವರ ವಲಯ ಮೇಲ್ವಿಚಾರಕಿ ಹೇಮಲತಾ, ತಾಲೂಕು ಮೇಲ್ವಿಚಾರಕಿಯರಾದ ಭಾಗ್ಯಜ್ಯೋತಿ, ಬಿ.ಎನ್. ಪ್ರೇಮ, ಯಶೋಧಮ್ಮ, ಲೀಲಾವತಿ, ಮಹಾದೇವಿ. ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವಸಂತಕುಮಾರಿ, ಖಜಾಂಚಿ ಆಶಾರಾಣಿ, ಜಿಲ್ಲಾ ಸಂಯೋಜಕರಾದ ಸಿಂಧೂ, ಶಶಿಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಈ ವೇಳೆ ಎಂಟು ಮಂದಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನೂ ಸಹ ಹಮ್ಮಿಕೊಳ್ಳಲಾಗಿತ್ತು. ಭಾಗ್ಯಜ್ಯೋತಿ ಸ್ವಾಗತಿಸಿದರು. ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.