ಸಾರಾಂಶ
ಚಿಕ್ಕಬಳ್ಳಾಪುರ : ಬಯಲು ಸೀಮೆಯ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳು ಸದಾ ಬರಕ್ಕೆ ತುತ್ತಾಗುತ್ತಿದ್ದು, ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕು ಎಂದು ಸಂಸದ ಡಾ। ಕೆ.ಸುಧಾಕರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಸಂಸತ್ ಅಧಿವೇಶನದಲ್ಲಿ ಸೋಮವಾರ ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಅವರು, ಕುಡಿಯುವ ನೀರು ಹಾಗೂ ಕೃಷಿಗಾಗಿ ಕೈಗೊಳ್ಳಬೇಕಿರುವ ಶಾಶ್ವತ ಪರಿಹಾರ ಯೋಜನೆ ಹಾಗೂ ಕ್ರಮಗಳ ಬಗ್ಗೆ ವಿವರಿಸಿದರು.
ಕರ್ನಾಟಕ 2023ರಲ್ಲಿ ತೀವ್ರ ಬರಗಾಲ ಎದುರಿಸಿದ್ದು, ರಾಜ್ಯದ ಬಹುತೇಕ ಎಲ್ಲ ತಾಲೂಕುಗಳಲ್ಲಿ ತೀವ್ರ ದುಷ್ಪರಿಣಾಮ ಬೀರಿದೆ. ಅದರಲ್ಲೂ ಸಣ್ಣ ರೈತರಿಗೆ ಹೆಚ್ಚು ನಷ್ಟವಾಗಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳ ಜನರು ಬೆಂಗಳೂರು ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡುತ್ತಿದ್ದಾರೆ. ಆದ್ದರಿಂದ ಈ ಪ್ರದೇಶದ ಜನರು, ಜಾನುವಾರು ಹಾಗೂ ಪರಿಸರವನ್ನು ಉಳಿಸಲು ಶಾಶ್ವತ ಪರಿಹಾರ ನೀಡಬೇಕು ಎಂದರು.
ಸಂಸ್ಕರಿತ ಕೊಳಚೆ ನೀರು ಬಳಕೆ:
ದುರದೃಷ್ಟವಶಾತ್ ಈ ಜಿಲ್ಲೆಗಳಲ್ಲಿ ಕೆಲವು ವರ್ಷಗಳಿಂದ ಅಂತರ್ಜಲ ಮಟ್ಟ ತೀರಾ ಕುಸಿದಿದ್ದು, 1,500 ಅಡಿಗಳಷ್ಟು ಆಳಕ್ಕೆ ಇಳಿದಿದೆ. ಈ ಪ್ರಮುಖ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ರಾಜ್ಯ ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಬದಲು, ಸಂಸ್ಕರಿತ ನೀರನ್ನು (ಎಸ್‌ಟಿಪಿ) ಈ ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತಿದೆ. ಈ ನೀರನ್ನು 80 ಲಕ್ಷ ಜನರು ಕುಡಿಯಲು ಬಳಸುತ್ತಿದ್ದು, ಕೆರೆ ತುಂಬಿಸಲು ಹಾಗೂ ಕೃಷಿಗೆ ಸಹ ಉಪಯೋಗಿಸುತ್ತಿದ್ದಾರೆ. ಇದರಿಂದ ಯಾವೆಲ್ಲ ಪರಿಣಾಮವಾಗಲಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಹೀಗೆ ಎಸ್‌ಟಿಪಿ ನೀರನ್ನು ಕೆರೆ ತುಂಬಿಸಲು, ಕುಡಿಯಲು ಹಾಗೂ ಕೃಷಿಗೆ ಬಳಸುತ್ತಿರುವುದು ಇಡೀ ದೇಶದಲ್ಲೇ ಮೊದಲು ಎಂದು ಮಾಹಿತಿ ನೀಡಿದರು.ಬಾಕ್ಸ್...
ಸಮಸ್ಯೆ ಪರಿಹಾರಕ್ಕೆ ಸಲಹೆ
ಕೃಷ್ಣಾ ನದಿಯಿಂದ ಕನಿಷ್ಠ 5 ಟಿಎಂಸಿ ನೀರನ್ನು ಈ ಭಾಗಕ್ಕೆ ಸರಬರಾಜು ಮಾಡಬಹುದು. ಇದಕ್ಕಾಗಿ ಕಾಲುವೆಗಳನ್ನು ನಿರ್ಮಾಣ ಮಾಡಬಹುದು. ಹಾಗೆಯೇ ಎತ್ತಿನಹೊಳೆ ಯೋಜನೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದು ಕೂಡ ಇದಕ್ಕೆ ಪರಿಹಾರವಾಗಲಿದೆ. ಜೊತೆಗೆ, ಪಾಲಾರ್, ಪೆನ್ನಾರ್ ಮತ್ತು ಚಿತ್ರಾವತಿ ನದಿಗಳಲ್ಲಿ ವಿಶೇಷ ಜಲಾನಯನ ಯೋಜನೆ ರೂಪಿಸುವುದು ಕೂಡ ಉತ್ತಮ ಪರಿಹಾರ. ಈ ನದಿಗಳ ಜಲಾನಯನ ಪ್ರದೇಶ, ಅಚ್ಚುಕಟ್ಟು ಪ್ರದೇಶವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಆದ್ಯತೆ ಮೇರೆಗೆ ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕು. ಗ್ರಾಮಗಳ ಕೆರೆಗಳು ಸೇರಿ ಎಲ್ಲ ಜಲಮೂಲಗಳನ್ನು ಪುನಶ್ಚೇತನ ಮಾಡಬೇಕು ಎಂದು ಸಂಸದ ಡಾ। ಕೆ.ಸುಧಾಕರ್ ಸಹಲೆ ನೀಡಿದರು.ಚಿತ್ರ ಶೀರ್ಷಿಕೆ: ಸಂಸತ್‌ನಲ್ಲಿ ಸಂಸದ ಡಾ। ಕೆ.ಸುಧಾಕರ್.