ಪ್ರತಿ ಮನೆಗೂ ನಳಗಳ ಸಂಪರ್ಕ ಒದಗಿಸಿ: ವಿಪ ಸದಸ್ಯ ಸುನೀಲಗೌಡ

| Published : Jan 25 2024, 02:06 AM IST

ಸಾರಾಂಶ

ತಾಂತ್ರಿಕ ನೆಪಹೇಳಿ ಯಾವುದೇ ಕುಟುಂಬವನ್ನು ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಬಾರದು ಎಂದು ವಿಧಾನ ಪರಿಷತ್‌ ಶಾಸಕ ಸುನೀಲಗೌಡ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಲಜೀವನ ಮಿಷನ್‌ ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗಳಿಗೂ ನಳಗಳ ಸಂಪರ್ಕ ಒದಗಿಸಬೇಕು. ತಾಂತ್ರಿಕ ನೆಪಹೇಳಿ ಯಾವುದೇ ಕುಟುಂಬವನ್ನು ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಬಾರದು ಎಂದು ವಿಧಾನ ಪರಿಷತ್‌ ಶಾಸಕ ಸುನೀಲಗೌಡ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಬಲೇಶ್ವರ ವಿಧಾನಸಭೆ ಮತಕ್ಷೇತ್ರದ ಹೊನಗನಹಳ್ಳಿ, ಉಪ್ಪಲದಿನ್ನಿ, ಕಾತ್ರಾಳ ಹಾಗೂ ಅರ್ಜುಣಗಿ ಗ್ರಾಮಗಳಲ್ಲಿ ಜಲಜೀವನ್ ಮಿಶನ್ ಯೋಜನೆಯಡಿ ನಾನಾ ಗ್ರಾಮಗಳ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಸುವ ನಳಗಳ ಸಂಪರ್ಕ ಯೋಜನೆಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹಲವಾರು ಗ್ರಾಮಗಳಲ್ಲಿ ತಾಂತ್ರಿಕ ಕಾರಣಗಳ ನೆಪವೊಡ್ಡಿ ಅನೇಕ ಮನೆಗಳಿಗೆ ನಳಗಳ ಸಂಪರ್ಕ ನಿರಾಕರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ನಗರ ಪ್ರದೇಶದ ಜನರಿಗೆ ನೀಡಲಾಗುವ ರೀತಿಯಲ್ಲಿ ಗ್ರಾಮೀಣ ಭಾಗದ ಜನರಿಗೂ ಮನೆಮನೆಗಳಿಗೆ ಕುಡಿಯಲು ನೀರು ಪೂರೈಸುವ ಈ ಮಹತ್ವಾಕಾಂಕ್ಷೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಯಾವ ಕುಟುಂಬವೂ ಈ ಯೋಜನೆಯಿಂದ ವಂಚಿತರಾಗದಂತೆ ನಳಗಳ ಸಂಪರ್ಕ ಒದಗಿಸಲು ಜಾಗರೂಕತೆಯಿಂದ ಕೆಲಸ ಮಾಡಬೇಕು ಎಂದರು.

ಈಗಾಗಲೇ ಎಲ್ಲ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಜಲಜೀವನ ಮಿಶನ್ ಅನುಷ್ಠಾನ ಸಂದರ್ಭದಲ್ಲಿ ನಳಗಳಿಗೆ ಸಂಪರ್ಕ ಒದಗಿಸಲು ಪೈಪುಗಳನ್ನು ಅಳವಡಿಸುವಾಗ ಜೆಸಿಬಿ ಮೂಲಕ ಈ ರಸ್ತೆಗಳಷ್ಟು ಅಗೆಯಬಾರದು. ಪೈಪು ಅಳವಡಿಸಲು ಅಗತ್ಯವಿರುವಷ್ಟು ಮಾತ್ರ ರಸ್ತೆಯನ್ನು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿ ಕಟ್ ಮಾಡಬೇಕು. ಪೈಪು ಅಳವಡಿಸಿದ ನಂತರ ಮತ್ತೆ ಆ ರಸ್ತೆಯಲ್ಲಿ ಅಗೆಯಲಾಗಿರುವ ಜಾಗವನ್ನು ಯಥಾರೀತಿ ದುರಸ್ತಿ ಮಾಡಿ ಕೊಡಬೇಕು ಎಂದು ಸೂಚಿಸಿದರು.

ಹೊನಗನಹಳ್ಳಿಯ ₹1.70 ಕೋ. ಸವನಳ್ಳಿಯಲ್ಲಿ ₹97 ಲಕ್ಷ ಮತ್ತು ತೊನಶ್ಯಾಳ ಆರ್.ಸಿ. ಕೇಂದ್ರದ ₹20.02 ಲಕ್ಷ , ಉಪ್ಪಲದಿನ್ನಿ ಗ್ರಾಮದ ₹81.65 ಲಕ್ಷ, ಹಂಚಿನಾಳ ಪಿ. ಎಂ. ಗ್ರಾಮದ ₹27.97 ಲಕ್ಷ ವೆಚ್ಚದ, ಕಾತ್ರಾಳ ಗ್ರಾಮದ ಬಿರಾದಾರ ವಸ್ತಿಯ ₹20.50 ಲಕ್ಷ, ಬೋಳಚಿಕ್ಕಲಗಿ ಗ್ರಾಮದ ಆಶ್ರಯ ಕಾಲನಿಯ ₹15.36 ಲಕ್ಷ, ಹೊಕ್ಕುಂಡಿ ಗ್ರಾಮದ ಹೊಕ್ಕುಂಡಿ ವಸ್ತಿಯ ₹31.50 ಲಕ್ಷ, ಅರ್ಜುಣಗಿ ಗ್ರಾಮದ ಮಡಿವಾಳ ವಸ್ತಿ(ತಂವಸೆ ವಸ್ತಿ)ಯ ₹24.32 ಲಕ್ಷ ಮತ್ತು ಅರ್ಜುಣಗಿ ಗ್ರಾಮದ ಹೆಬ್ಬಾಳಟ್ಟಿ ತೋಟದ ವಸ್ತಿ(ಪ್ರಧಾನಿ ವಸ್ತಿ)ಯಲ್ಲಿ ₹21.26 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳಿಗ ಭೂಮಿಪೂಜೆ ನೆರವೇರಿಸಿದರು.

ಹೊನಗನಹಳ್ಳಿ ಗ್ರಾಪಂ ಅಧ್ಯಕ್ಷ ನಚಿಕೇತ ಬಿದರಿ, ಶಶಿಧರ ಬಿದರಿ, ಶಿವಯ್ಯ ಒಡೆಯರ, ಮಹಾಂತೇಶ ಹಳ್ಳಿ, ವಿ. ಆರ್.ಗೌಡರ, ರಾವುತ ಗಾಣಗೇರ, ಹಣಮಂತ ಹಚಡದ, ಬಸವರಾಜ ರೆಡ್ಡಿ, ಸಂಗಯ್ಯ ಹಿರೇಮಠ, ಚಂದ್ರಶೇಖರ ಪೂಜಾರಿ, ಸೋಮು ಬಿರಾದಾರ, ಸಿದ್ದಪ್ಪ ಬೀಳಗಿ, ಅಶೋಕಗೌಡ ಪಾಟೀಲ, ಮೌಲಾಸಾಬ ಜಾಗೀರದಾರ, ಚಾಂದಸಾಬ ಜಾಗೀರದಾರ, ದುಂಡಪ್ಪ ಕೋಲಕಾರ, ಶಮನಸಾಬ ಮುಳವಾಡ, ಮಲ್ಲಿಕಾರ್ಜನ ಅಂಗಡಿ, ಗುರಬಸು ತೇವರಟ್ಟಿ, ಕೆ. ಎಚ್. ನರಳೆ, ಮಹ್ಮಮದಸಾಬ ಜಮಾದಾರ, ರಫೀಕ ಸೋನಾರ, ರಮೇಶ ದೇಸಾಯಿ, ಉಮಾಕಾಂತ ತಡಾಕೆ, ಅಶೋಕ ಕಾಖಂಡಕಿ, ಸಿದ್ದಪ್ಪ ಕಲಬೀಳಗಿ, ಗೈಬುಸಾಬ ಕೌಜಲಗಿ, ಮುದಕನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.