ಸಾರಾಂಶ
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅವರಿಗೆ ಪೊಲೀಸ್ ಭದ್ರತೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡಿ.ಮಂಜುನಾಥ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಅವರಿಗೆ ಪೊಲೀಸ್ ಭದ್ರತೆ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡಿ.ಮಂಜುನಾಥ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅವರ ಪರಮಾಧಿಕಾರ, ಅಸಂವಿಧಾನಿಕ ನಡೆಯ ವಿರುದ್ಧ 3 ವರ್ಷಗಳಿಂದ ನಿರಂತರವಾಗಿ ಕಸಾಪ ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸುತ್ತಿದ್ದೇವೆ. ಇದರ ಪರಿಣಾಮವಾಗಿ ಕಸಾಪ ಆಜೀವ ಸದಸ್ಯತ್ವದಿಂದಲೇ ಅಮಾನತು ಮಾಡುವ ಷೋಕಾಸ್ ನೀಡಿ ಬೆದರಿಕೆ ಒಡ್ಡಿದ್ದಾರೆ. ಇದೇ ಮೇ 14ರಂದು ಬೆಂಗಳೂರಿನ ಕಸಾಪ ಕೇಂದ್ರ ಕಚೇರಿಯಲ್ಲಿ ನಡೆಯುವ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಡಿ.ಮಂಜುನಾಥ ಅವರು ಚರ್ಚಿಸಲು ಬಯಸಿರುವ ಅಂಶಗಳನ್ನು ಹಾಗೂ ಸಭೆಯಲ್ಲಿ ಮಾತನಾಡಲು ಅಗತ್ಯ ಅನುಮತಿಯನ್ನು ನೀಡುವಂತೆ ಕೋರಿ ಕಸಾಪ ರಾಜ್ಯಾಧ್ಯಕ್ಷರಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ಇದರಿಂದ ಕೆರಳಿ, ತಮ್ಮ ಮೇಲೆ ದ್ವೇಷ ಅಸೂಯೆಯಿಂದ ಸಭೆಯಲ್ಲಿನ ಘಟನಾವಳಿಗಳನ್ನು ತಿರುಚಿ, ತಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸುವ ಸಾಧ್ಯತೆ ಇರುವುದರಿಂದ ಹಾಗೂ ರಾಜ್ಯಾಧ್ಯಕ್ಷರ ಬೆಂಬಲಿಗರಿಂದಲೂ ಅಪಾಯವಿರುವುದರಿಂದ, ಬೆಂಗಳೂರಿನಲ್ಲಿ ನಡೆಯುವ ಕಾರ್ಯಕಾರಿ ಸಮಿತಿ ಸಭೆಗೆ ಭಾಗವಹಿಸಲು ಅಗತ್ಯ ಪೊಲೀಸ್ ಭದ್ರತೆ ನೀಡಲು ಡಿ.ಮಂಜುನಾಥ ಮನವಿ ಮಾಡಿದ್ದಾರೆ.ಜೊತೆಯಲ್ಲಿ ಮಹೇಶ್ ಜೋಷಿ ಅವರು ನೀಡುತ್ತಿರುವ ಮಾನಸಿಕ ಕಿರುಕುಳ ಮತ್ತು ಸಭೆಯಲ್ಲಿ ಮಾಡಿದ ಅಪಮಾನದ ಕುರಿತು ದೂರು ದಾಖಲಿಸುತ್ತಿರುವುದಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ವಕೀಲರಾ ಕೆ.ಪಿ.ಶ್ರೀಪಾಲ್, ವಿರೇಂದ್ರ, ಪದಾಧಿಕಾರಿಗಳಾದ ಕೃಷ್ಣಮೂರ್ತಿ ಹಿಳ್ಳೋಡಿ, ಎಂ.ನವೀನ್ ಕುಮಾರ್, ಕೆ.ಜಿ.ವೆಂಕಟೇಶ್, ಶಿವಪ್ಪಗೌಡ, ನಾರಾಯಣ್, ವಿರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.