- ಇಂದು ಶ್ರೀರಾಮ ಮಂದಿರದ ಹುಂಡಿ ಹಣ ಕದ್ದವರು, ಬೆಳ್ಳಿ ಇಟ್ಟಿಗೆ ಕಾಣೆಯಾಗಿಸಿದವರ ವಿರುದ್ಧ ಪ್ರತಿಭಟನೆ: ದಿನೇಶ ಶೆಟ್ಟಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಯೋಧ್ಯೆಯ ಶ್ರೀರಾಮ ಮಂದಿರದ ಹುಂಡಿ ಹಣ ಕದ್ದ ಭ್ರಷ್ಟರು ಹಾಗೂ ದಾವಣಗೆರೆಯಲ್ಲಿ ಬೆಳ್ಳಿ ಇಟ್ಟಿಗೆ ಕಾಣೆಯಾಗಿಸಿದ ಭ್ರಷ್ಟರ ವಿರುದ್ಧ ಜಿಲ್ಲಾ ಕಾಂಗ್ರೆಸ್‌ನಿಂದ ಜು.25ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5 ಗಂಟೆಗೆ ಇಲ್ಲಿನ ಪಿ.ಜೆ. ಬಡಾವಣೆಯ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಿಂದ ಪಂಜಿನ ಮೆರವಣಿಗೆ ಹೊರಟು ಅರುಣ ಚಿತ್ರ ಮಂದಿರ ರಸ್ತೆ, ಹಳೇ ಪಿ.ಬಿ. ರಸ್ತೆ, ಅಕ್ಕ ಮಹಾದೇವಿ ರಸ್ತೆ ಮಾರ್ಗವಾಗಿ ಶ್ರೀರಾಮ ದೇವಸ್ಥಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದರು.

ದೇಶಾದ್ಯಂತ ಭಕ್ತರು ಶ್ರೀರಾಮ ಮಂದಿರಕ್ಕೆ ಚಿನ್ನ, ಬೆಳ್ಳಿ, ನಗದು ಸೇರಿದಂತೆ ತಮ್ಮ ಸೇವೆ ಸಮರ್ಪಿಸಿದ್ದಾರೆ. ಅದೇ ರೀತಿ ದಾವಣಗೆರೆಯಿಂದ ಬೆಳ್ಳಿ ಇಟ್ಟಿಗೆಗೆಂದು ಕಾಂಗ್ರೆಸ್ಸಿನ ಮುಖಂಡರಾದ ಸೋಗಿ ಶಾಂತಕುಮಾರ, ಎಲ್.ಡಿ.ಗೋಣೆಪ್ಪ ತಲಾ ₹30 ಸಾವಿರ, ಪ್ರವೀಣ ಜಾಧವ್ ₹10 ಸಾವಿರ ದೇಣಿಗೆ ನೀಡಿದ್ದಾರೆ. ಸಾವಿರಾರು ಭಕ್ತರು ದೇಣಿಗೆ ನೀಡಿದ ಹಣ ದುರ್ಬಳಕೆ ಆಗಿದೆ ಎಂದು ಆರೋಪಿಸಿದರು.


ಶ್ರೀರಾಮನ ಹೆಸರಿನಲ್ಲಿ ದಾವಣಗೆರೆಯಲ್ಲಿ ಲಕ್ಷಾಂತರ ರು. ದೇಣಿಗೆ ಎತ್ತಿ, ಅದನ್ನು ನುಂಗಿದವರಿದ್ದಾರೆ. ಅಲ್ಲದೇ, ಬೆಳ್ಳಿ ಇಟ್ಟಿಗೆ ಮಾಡಿಸುವುದಾಗಿ ಹಣ ಪಡೆದು, ಬೆಳ್ಳಿ ಇಟ್ಟಿಗೆಯನ್ನೆ ಕಾಣೆ ಮಾಡಿದ ಭ್ರಷ್ಟರ ವಿರುದ್ಧ ಜಾಗೃತಿಗಾಗಿ ಪಂಜಿನ ಪ್ರತಿಭಟನಾ ಮೆರವಣಿಗೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದೇವೆ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಶ್ರೀರಾಮನ ಭಕ್ತರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ರಾಮ ಮಂದಿರದ ಹುಂಡಿ ಹಣ ಕದ್ದ ಚಂಪತ್ ರಾಯ್‌ನಂತೆ ದಾವಣಗೆರೆಯಲ್ಲೂ ಬೆಳ್ಳಿ ಇಟ್ಟಿಗೆ ಕದ್ದ ದಾವಣಗೆರೆ ಚಂಪತ್ ರಾಯ್‌ಗಳಿದ್ದಾರೆ. ಅಯೋಧ್ಯೆ ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ನೀಡಿದ್ದಾಗಿ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಮಕ್ಷಮದಲ್ಲಿ ಸಮರ್ಪಿಸಿದ್ದಾಗಿ ಹೇಳಿಕೆ ನೀಡುವವರು ಈ ಬಗ್ಗೆ ದಾಖಲೆ, ಸಾಕ್ಷ್ಯ ನೀಡಿದ್ದಕ್ಕೆ ರಸೀದಿ ನೀಡಲಿ. ವಿನಾಕಾರಣ ಇಂತಹ ವಿಚಾರದಲ್ಲಿ ಪೂಜ್ಯ ಗುರುಗಳ ಹೆಸರನ್ನು ಮಧ್ಯ ತರುವುದು ಬೇಡ ಎಂದು ಬಿಜೆಪಿ ಮುಖಂಡ ಯಶವಂತ ರಾವ್‌ ಜಾಧವ್‌ಗೆ ತಾಕೀತು ಮಾಡಿದರು.

ಕಾಂಗ್ರೆಸ್‌ನ ಪ್ರವೀಣ ಜಾಧವ್‌ಗೆ ಇದೇ ಯಶವಂತ ರಾವ್‌ ಫೋನ್‌ನಲ್ಲಿ ಬೆದರಿಕೆ ಹಾಕಿರುವುದನ್ನು ಖಂಡಿಸುತ್ತೇವೆ. ಆ ಆಡಿಯೋ ಸಹ ತಮ್ಮ ಬಳಿ ಇದೆ. ಅಯೋಧ್ಯೆಗೆ ಹೋಗಿ ಬೆಳ್ಳಿ ಇಟ್ಟಿಗೆ ನೀಡಿದ್ದಾರೋ, ಇಲ್ಲವೋ ಎಂಬುದನ್ನು ಯಶವಂತ ರಾವ್ ಸಾಬೀತುಪಡಿಸಲಿ. ಅದನ್ನು ಬಿಟ್ಟು, ಫ್ಲೈಟ್ ಟಿಕೆಟ್ ಮಾಡಿಸುತ್ತೇವೆ, ಟ್ರೈನ್‌ ಟಿಕೆಟ್ ಮಾಡಿಸುತ್ತೇನೆಂಬ ಹೇಳಿಕೆಗಳನ್ನು ನೀಡುವುದಲ್ಲ. ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಯಶವಂತ ರಾವ್ ಇತರರು ಬೆಳ್ಳಿ ಇಟ್ಟಿಗೆ ನೀಡಿದ್ದರೆ ಮಾಧ್ಯಮಗಳ ಸಮಕ್ಷಮವೇ ಸಾಕ್ಷ್ಯ ನೀಡಲಿ ಅಥವಾ ತಮಗೆ ಅದನ್ನು ಕಳಿಸಲಿ ಎಂದು ದಿನೇಶ ಕೆ. ಶೆಟ್ಟಿ ಹೇಳಿದರು.

ಪಕ್ಷದ ಮುಖಂಡರಾದ ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ, ನಗರಸಭೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ, ಯುವ ಕಾಂಗ್ರೆಸ್ ಮುಖಂಡರಾದ ಎಲ್.ಎಂ.ಎಚ್‌.ಸಾಗರ್‌, ಅಲಿ ರೆಹಮತ್‌, ಮಹಿಳಾ ಘಟಕದ ಕೆ.ಪಿ.ರಾಜೇಶ್ವರಿ, ರಾಜೇಶ್ವರಿ, ಯುವರಾಜ, ನಿಟುವಳ್ಳಿ ಪ್ರವೀಣ ಇತರರು ಇದ್ದರು.

- - -

(ಬಾಕ್ಸ್‌) * ಇಂದು ದಾವಣಗೆರೆಗೆ ರಾಹುಲ್‌ ಬಾಲ್ ಪ್ರವಾಸದಾವಣಗೆರೆ: ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾ ವೀಕ್ಷಕ ರಾಹುಲ್ ಬಾಲ್ ಜು.25ರಿಂದ ಆ.1ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಕ್ಷ ಸಂಘಟನೆ, ಎಸ್ಐಆರ್ ಪ್ರಕ್ರಿಯೆ ಕುರಿತ ಪರಿಶೀಲನೆ ಹಾಗೂ ಮುಂಬರುವ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ರಾಹುಲ್ ಬಾಲ್ ಜಿಲ್ಲಾ ಪ್ರವಾಸ ಕೈಗೊಂಡದ್ದಾರೆ ಎಂದರು.

ಜು.25ರಂದು ಮಧ್ಯಾಹ್ನ 2.30 ಗಂಟೆಗೆ ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಅಧ್ಯಕ್ಷತೆಯ ಪ್ರಮುಖ ನಾಯಕರ ಸಭೆಯಲ್ಲಿ ರಾಹುಲ್ ಬಾಲ್ ಸಂಸದರು, ಎಲ್ಲ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ವಿಪ ಸದಸ್ಯರು, 2023ರ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳು, ಎಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರೊಂದಿಗೆ ಮುಖ್ಯ ಸಭೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಅದೇ ದಿನ ಸಂಜೆ 4.30 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ರಾಹುಲ್ ಬಾಲ್ ಭಾಗವಹಿಸುವರು. ಸಂಬಂಧಿಸಿದ ಎಲ್ಲ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಕಡ್ಡಾಯವಾಗಿ ಸಭೆಗಳಲ್ಲಿ ಭಾಗವಹಿಸುವಂತೆ ಪಕ್ಷದ ಸೂಚನೆ ಇದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಭಾಗವಹಿಸುವಂತೆ ತಿಳಿಸಿದರು.

- - -

-24ಕೆಡಿವಿಜಿ1: ದಾವಣಗೆರೆಯಲ್ಲಿ ಶುಕ್ರವಾರ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಇತರರು ಸುದ್ದಿಗೋಷ್ಠಿಯಲ್ಲಿ ಪಂಜಿನ ಪ್ರತಿಭಟನೆ ಪೋಸ್ಟರ್ ಪ್ರದರ್ಶಿಸಿದರು.