ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಸಚಿವ ಡಾ. ಶರಣಪ್ರಕಾಶ ಪಾಟೀಲ

| Published : Jul 17 2025, 12:40 AM IST

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಸಚಿವ ಡಾ. ಶರಣಪ್ರಕಾಶ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಸ್ಪತ್ರೆ ನೆಲಮಹಡಿ ಹಾಗೂ ಮೊದಲನೇ ಮಹಡಿ ನವೀಕರಣ ಕಾರ್ಯ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು.

ಹಾವೇರಿ: ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರವಾದದ್ದು. ಅದಕ್ಕಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹಿಮ್ಸ್ ಡೀನ್ ಹಾಗೂ ಬೋಧಕರಿಗೆ ವೈದ್ಯಕೀಯ ಶಿಕ್ಷಣ ಸಚಿವ ಸಚಿವ ಡಾ. ಶರಣಪ್ರಕಾಶ ಎಸ್. ಪಾಟೀಲ ಸೂಚಿಸಿದರು.ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬುಧವಾರ ಭೇಟಿ ನೀಡಿ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂದರು.

ಎಂಜಿನಿಯರ್‌ಗೆ ತರಾಟೆ: ಜಿಲ್ಲಾಸ್ಪತ್ರೆ ನೆಲಮಹಡಿ ಹಾಗೂ ಮೊದಲನೇ ಮಹಡಿ ನವೀಕರಣ ಕಾರ್ಯ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಬೇಕು. ಆದರೆ, ನಿಗದಿತ ಕೆಲಸ ಮಾತ್ರ ಆಗಿಲ್ಲ, ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲಾಗಿದೆ. ಕ್ರಿಯಾಯೋಜನೆಯಲ್ಲಿ ಇಲ್ಲದ ಕಾಮಗಾರಿ ಹೇಗೆ ಮಾಡುತ್ತಿರಿ, ಯಾರು ನಿಮಗೆ ಅನುಮತಿ ನೀಡಿದ್ದಾರೆ ಎಂದು ಕಾರ್ಯನಿರ್ವಾಹಕ ಅಭಿಯಂತರರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.ಆಗ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣ ಮಾಡದಿದ್ದರೆ ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದರು.ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಡಾ. ಪ್ರದೀಪಕುಮಾರ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿಗೆ 150 ಎಂಬಿಬಿಎಸ್ ಸೀಟುಗಳು, 21 ಎಂಡಿ ಸೀಟುಗಳು, 40 ಬಿಎಸ್ಸಿ ನರ್ಸಿಂಗ್, ಬಿಎಸ್ಸಿ ಅನಸ್ತೇಶಿಯಾ, ಬಿಎಸ್ಸಿ ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಐದು ಬಿಎಸ್ಸಿ ಕೋರ್ಸ್‌ಗಳು ಸೇರಿ ಒಟ್ಟು 70 ಸೀಟುಗಳು, ಪ್ಯಾರ‍್ಯಾಮೆಡಿಕಲ್- 100, ಜಿಎನ್‌ಎಂ ನರ್ಸಿಂಗ್ 40 ಸೀಟುಗಳು ಲಭ್ಯ ಇವೆ. ಹಿಮ್ಸ್‌ ತಡೆಗೋಡೆ ನಿರ್ಮಾಣ ಹಾಗೂ ಹಿಮ್ಸ್ ಮುಂಭಾಗದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ, ಎಂಆರ್‌ಐ ಸ್ಕ್ಯಾನ್ ಯಂತ್ರೋಪಕರಣ ಅವಶ್ಯಕತೆ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಮೊಬೈಲ್ ಆ್ಯಪ್ ಬಿಡುಗಡೆ: ಇದೇ ಸಂದರ್ಭದಲ್ಲಿ ಹಿಮ್ಸ್‌ನ ಶೈಕ್ಷಣಿಕ ಮಾಹಿತಿ, ಶುಲ್ಕ ಪಾವತಿ ಮಾಹಿತಿ, ಅಧಿಸೂಚನೆಗಳು ಸೇರಿದಂತೆ ಮಾಹಿತಿಯುಳ್ಳ ಮೊಬೈಲ್ ಆ್ಯಪ್‌ನ್ನು ಸಚಿವ ಡಾ. ಶರಣಪ್ರಕಾಶ ಎಸ್. ಪಾಟೀಲ ಬಿಡುಗಡೆಗೊಳಿಸಿದರು. ಗೃಹ ಆರೋಗ್ಯ ಯೋಜನೆಯಡಿ ಮನೆ ಮನೆಗೆ ತೆರಳಿ ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ನಿರ್ವಹಣೆ ಕುರಿತು ಆಶಾ ಕೈಪಿಡಿ ಹಾಗೂ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಯುವನಿಧಿ ಯೋಜನೆಗೆ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾದ ವಿಶೇಷ ನೋಂದಣಿ ಅಭಿಯಾನ ಪ್ರಚಾರ ಸಾಮಗ್ರಿಗಳನ್ನು ಸಚಿವರು ಹಾಗೂ ಸಂಸದರು ಬಿಡುಗಡೆಗೊಳಿಸಿದರು.ವಿದ್ಯಾರ್ಥಿಗಳೊಂದಿಗೆ ಸಂವಾದ: ಇದೇ ಸಂದರ್ಭದಲ್ಲಿ ಸಚಿವರಾದ ಡಾ. ಶರಣಪ್ರಕಾಶ ಎಸ್. ಪಾಟೀಲ, ಶಿವಾನಂದ ಪಾಟೀಲ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು 1, 2 ಹಾಗೂ 3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಈ ವೈದ್ಯಕೀಯ ಸಂಸ್ಥೆಯಲ್ಲಿ ಕಲಿಕೆ, ವಸತಿ ಹಾಗೂ ಆಹಾರದ ಸಮಸ್ಯೆಗಳಿದ್ದಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು ಎಂದರು.ಹಿಮ್ಸ್‌ನಲ್ಲಿ ಕಲಿಕೆ ಹಾಗೂ ವಸತಿ ಸೌಲಭ್ಯ ಉತ್ತಮವಾಗಿದೆ. ಆದರೆ ಅನಾಟೊಮಿ ವಿಭಾಗದಲ್ಲಿ ಕಲಿಕೆ ಸಮಸ್ಯೆ ಇದೆ. ಇಲ್ಲಿಂದ ನಗರಕ್ಕೆ ಹೋಗಲು ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲ. ಆಟೋ ರಿಕ್ಷಾದವರು ₹150ರಿಂದ ₹200 ಕೇಳುತ್ತಾರೆ. ಇಲ್ಲಿ ಸರಿಯಾಗಿ ನೆಟ್‌ವರ್ಕ್ ಸಿಗುವುದಿಲ್ಲ. ಮೆಸ್‌ನಲ್ಲಿ ಆಹಾರ ಸಮಸ್ಯೆ ಇದೆ ಎಂದು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಸಚಿವರಿಗೆ ತಿಳಿಸಿದರು.ಸಚಿವ ಶಿವಾನಂದ ಪಾಟೀಲ ಮಾತನಾಡಿ, ವೈದ್ಯಕೀಯ ಕಾಲೇಜಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲಾಗುವುದು ಎಂದರು.ಸಚಿವ ಡಾ. ಶರಣಪ್ರಕಾಶ ಎಸ್.ಪಾಟೀಲ ಅವರು ಮೆಸ್ ನಿರ್ವಹಣೆ ವಿದ್ಯಾರ್ಥಿಗಳಿಗೆ ನೀಡಿದರೆ, ಅವರೆ ಜವಾಬ್ದಾರಿಯಿಂದ ನಿರ್ವಹಿಸುತ್ತಾರೆ ಹಾಗಾಗಿ ಮೆಸ್ ನಿರ್ವಹಣೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುವಂತೆ ಡೀನ್ ಅವರಿಗೆ ಸೂಚನೆ ನೀಡಿದರು.ಸಭೆಯಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಥೋಡ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ ಇತರರಿದ್ದರು.