ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ ಮಂಗಳವಾರ ಬೆಳಿಗ್ಗೆ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿ ಪರಿಶೀಲನೆಗೆಂದು ತೆರಳಿದ ವೇಳೆ, ಗಂಜ್ ಪ್ರದೇಶದಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿ ಸೂಚನೆಗಳನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ ಮಂಗಳವಾರ ಬೆಳಿಗ್ಗೆ ನಗರದ ವಿವಿಧೆಡೆ ನಡೆಯುತ್ತಿರುವ ಕಾಮಗಾರಿ ಪರಿಶೀಲನೆಗೆಂದು ತೆರಳಿದ ವೇಳೆ, ಗಂಜ್ ಪ್ರದೇಶದಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಪರಿಶೀಲಿಸಿ ಸೂಚನೆಗಳನ್ನು ನೀಡಿದರು.ಬೆಳಗ್ಗೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ಬಳಿ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿದ ಅವರು, ಪಟೇಲ್ ಪ್ರತಿಮೆ ವೃತ್ತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಕಾಮಗಾರಿಗಳ ಪರಿಶೀಲಿಸಿದರು. ಈ ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಕೂಡಿದ್ದು, ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳ್ಳುವಂತೆ ಕ್ರಮ ವಹಿಸಲು ಸೂಚಿಸಿದರು.
ನಂತರ ಗಂಜ್ ಪ್ರದೇಶದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಅವರು, ಆಹಾರದ ನೈರ್ಮಲ್ಯ ಮತ್ತು ಗುಣಮಟ್ಟ ಪರಿಶೀಲಿಸಿ ಸಾರ್ವಜನಿಕರಿಗೆ ಶುಚಿ, ರುಚಿಯಾದ ಹಾಗೂ ಉತ್ತಮ ಗುಣಮಟ್ಟದ ಆಹಾರ ಒದಗಿಸಲು ಗುತ್ತಿಗೆದಾರರಿಗೆ/ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಿರಂತರ ಶುದ್ಧ ಕುಡಿಯುವ ನೀರು ಸಿಗುವಂತೆ ಆರ್.ಓ. ಪ್ಲಾಂಟ್ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಂಡರು. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಸಾರ್ವಜನಿಕರಿಂದ ಪಡೆಯದಂತೆ ಮತ್ತು ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ನಿರ್ದೇಶನ ನೀಡಿದರು.ರಸ್ತೆಗಳ ನೈರ್ಮಲ್ಯ ಮತ್ತು ಸ್ವಚ್ಛತೆ ಬಗ್ಗೆ ವೀಕ್ಷಣೆ ನಡೆಸಿದ ಡಿಸಿ ಪಾಂಡ್ವೆ, ಹೊಸಹಳ್ಳಿ ಕ್ರಾಸ್‌ನಿಂದ ಗಂಜ್‌ವರೆಗಿನ ಪ್ರಮುಖ ರಸ್ತೆಯ ಎರಡೂ ಬದಿಗಳನ್ನು ಪ್ರತಿದಿನ ಸ್ವಚ್ಛವಾಗಿಡಲು ಮತ್ತು ಕಸ ಮುಕ್ತವಾಗಿರಿಸಲು ಸಂಬಂಧಪಟ್ಟ ಪೌರಕಾರ್ಮಿಕರಿಗೆ/ಅಧಿಕಾರಿಗಳಿಗೆ ಸೂಚಿಸಿದರು. ಪೌರಾಯುಕ್ತ ಉಮೇಶ್ ಚವ್ಹಾಣ ಹಾಗೂ ಮುಂತಾದವರು ಉಪಸ್ಥಿತರಿದ್ದರು.