ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ನಾಗರತ್ನ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ರು. ಪರಿಹಾರ ನೀಡಬೇಕೆಂದು ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಲಿಂಗರಾಜಮೂರ್ತಿ ಒತ್ತಾಯಿಸಿದರು.ಎನ್.ಕೋಡಿಹಳ್ಳಿಯ ಲೋಕೇಶ್ ಅವರ ನಿವಾಸಕ್ಕೆ ಆಗಮಿಸಿ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿ, ಲೋಕೇಶ್ ಪತ್ನಿ ನಾಗರತ್ನ ಅವರು ಹೈನುಗಾರಿಕೆ ಚಟುವಟಿಕೆಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 1.25 ಲಕ್ಷ ರು. ಸಾಲ ಮಾಡಿದ್ದರು. ಖಾಸಗಿಯಾಗಿ 6 ಲಕ್ಷ ಸಾಲ ಮಾಡಿಕೊಂಡಿದ್ದಾರೆ ಎಂದರು.
9 ಹಸುಗಳನ್ನು ಹೊಂದಿದ್ದ ನಾಗರತ್ನ ಅವರು ಹಾಲು ಉತ್ಪಾದನೆಯಲ್ಲಿ ಕುಂಠಿತ ಆದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಸುಗಳ ನಿರ್ವಹಣೆಗಾಗಿಯೇ ದಿನದಿಂದ ದಿನಕ್ಕೆ ಸಾಲ ಹೆಚ್ಚಾಗಿದೆ. ಸಾಲಗಾರರ ಕಿರುಕುಳದಿಂದ ಮನನೊಂದ ನಾಗರತ್ನ ಸಾಲ ತೀರಿಸಲಾಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.ಕುಟುಂಬದ ಆಧಾರವಾಗಿದ್ದ ನಾಗರತ್ನ ಅವರ ಸಾವಿನಿಂದಾಗಿ ಅವಲಂಬಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಮಳವಳ್ಳಿ ತಾಲೂಕು ಆಡಳಿತ ಮಧ್ಯೆ ಪ್ರವೇಶಿಸಿ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ತಾಲೂಕು ಘಟಕದ ಅಧ್ಯಕ್ಷ ಭರತ್ ರಾಜ್, ಉಪಾಧ್ಯಕ್ಷ ಎ.ಎಲ್.ಶಿವಕುಮಾರ್, ಹೋಬಳಿ ಘಟಕದ ಅಧ್ಯಕ್ಷ ಎಂ.ಇ.ಮಹದೇವು, ಪದಾಧಿಕಾರಿ ಪ್ರಮೀಳಾ, ಸಾಗ್ಯ ಶಿವಕುಮಾರ್, ಶಾಂಭವಿ, ಸಣ್ಣಶೆಟ್ಟಿ, ಭಾಗ್ಯಮ್ಮ, ಸವಿತ, ಶಾಂತಮ್ಮ ಸೇರಿದಂತೆ ಹಲವರು ಇದ್ದರು.ಸಹಕಾರ ಸಂಘದ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ 4ನೇ ಬಾರಿ ಮುಂದೂಡಿಕೆ
ಶ್ರೀರಂಗಪಟ್ಟಣ:ತಾಲೂಕಿನ ಕೆ.ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯನ್ನು ಸತತ 4ನೇ ಬಾರಿಗೆ ಮುಂದೂಡಿದ ಘಟನೆ ಶನಿವಾರ ನಡೆದಿದೆ.
ಶನಿವಾರ ನಿಗಧಿಯಾಗಿದ್ದ ಪದಾಧಿಕಾರಿಗಳ ಆಯ್ಕೆಗೆ ಸಂಘದ ಒಟ್ಟು 11 ಮಂದಿ ಸದಸ್ಯರು ಪೈಕಿ 7 ಮಂದಿ ಚುನಾವಣಾ ಪ್ರಕ್ರಿಯೆಗೆ ಭಾಗವಹಿಸಿದ್ದರು. ಈ 7 ಮಂದಿ ನಿರ್ದೇಶಕರಲ್ಲಿ ಬೈರೇಗೌಡ ಮತ್ತು ನಂದೀಶ್‌ಕುಮಾರ್ ಮಂಡಳಿ ಸಭೆಗೆ ಭಾಗವಹಿಸಲು ಮತ್ತು ಪದಾಧಿಕಾರಿಗಳಿಗೆ ಸ್ಪರ್ಧಿಸದಂತೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪಾಂಡವಪುರ ಇವರಿಂದ ತಡೆಯಾಜ್ಞೆ ಇದೆ. ಜೊತೆಗೆ ಮಾನ್ಯ ಉಚ್ಛನ್ಯಾಯಾಲಯದಲ್ಲಿ ಈ ಆದೇಶ ರದ್ದುಗೊಂಡಿಲ್ಲ. ಹಾಗಾಗಿ ಸಭೆಗೆ ನಿರ್ದಿಷ್ಟ ಸಂಖ್ಯೆ ಕೋರಂ ಅಭಾವದಿಂದ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ರದ್ದುಗೊಳಿಸಿಲಾಗಿದೆ ಎಂದು ರಿಟರ್ನಿಂಗ್ ಅಧಿಕಾರಿ ಎನ್.ಎ.ರವಿ ತಿಳಿಸಿದ್ದಾರೆ.ಮಂಡ್ಯ ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸತತ 4 ಸಭೆಗೆ ಗೈರು ಹಾಜರಾಗಿರುವುದು, ಸಹಕಾರ ಸಂಘದ ಚುನಾವಣೆಗೆ ರಾಜಕೀಯ ಬೆರೆತು ಹೋಗಿದೆ ಎಂದು ಸಾರ್ವಜನಿಕರ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಈ ವೇಳೆ ನಿರ್ದೇಶಕರಾದ ಬೈರೇಗೌಡ, ಸಿ. ಜಗದೀಶ, ಉಮೇಶ, ಕೆ.ಆರ್ ರವಿ, ಬೋರಪ್ಪ ಸೇರಿದಂತೆ ಸಂಘದ ಷೇರುದಾರರು ಗ್ರಾಮಸ್ಥರು ಇದ್ದರು.