ಕನ್ನಡಪ್ರಭ ವಾರ್ತೆ ಅಥಣಿ

ಮುಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದು, ತಾಲೂಕಿನ ರೈತರಿಗೆ ತೊಂದರೆಯಾಗದಂತೆ ನಿಗದಿತ ದರದಲ್ಲಿ ಬೀಜ, ರಸಗೊಬ್ಬರವನ್ನು ಪೂರೈಸಲು ಕ್ರಮಕೈಗೊಳ್ಳಬೇಕು. ಖಾಸಗಿ ವ್ಯಾಪಾರಸ್ಥರಿಂದ ರೈತರಿಗೆ ಮೋಸವಾಗುತ್ತಿದ್ದು, ಸರ್ಕಾರದಿಂದ ಬೀಜ ಮತ್ತು ಗೊಬ್ಬರವನ್ನು ಪೂರೈಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಮಹದೇವ ಮಡಿವಾಳ ಅಗ್ರಹಿಸಿದರು. ಈ ಬಗ್ಗೆ ಪಟ್ಟಣದ ತಹಸೀಲ್ದಾರ್ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ತಾಲೂಕಿನಲ್ಲಿ ಗೊಬ್ಬರ ವ್ಯಾಪಾರಸ್ಥರ ಅಂಗಡಿಗಳಲ್ಲಿ ಬೀಜ ಮತ್ತು ಗೊಬ್ಬರಗಳ ಅಭಾವ ಕಂಡುಬರುತ್ತದೆ. ಇದಲ್ಲದೆ ಕಳೆದ ಬಾರಿಗಿಂತ ಈ ಬಾರಿ ಬೀಜ ಮತ್ತು ಗೊಬ್ಬರದ ದರಗಳನ್ನು ಹೆಚ್ಚಿಸಲಾಗಿದ್ದು, ರೈತರ ಬೆಳೆಗಳಿಗೆ ಯೋಗ್ಯ ಬೆಲೆ ನೀಡದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರಸಗೊಬ್ಬರ ಮತ್ತು ಬೀಜದ ದರಗಳನ್ನು ಹೆಚ್ಚಿಸಿ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿದರು. ರೈತರಿಗೆ ಸಕಾಲಕ್ಕೆ ಗೊಬ್ಬರ ಬೀಜ ಸಿಗುವ ನಿಟ್ಟಿನಲ್ಲಿ ತಾಲೂಕ ಆಡಳಿತ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪಟ್ಟಣದಲ್ಲಿ ಹೊರ ರಾಜ್ಯದಿಂದ ಬಂದ ಅರಿಶಿಣ ಬೀಜಕ್ಕೆ ದಲ್ಲಾಳಿಗಳು ಮನಬಂದಂತೆ ದರ ನಿಗದಿ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕ್ವಿಂಟಲ್ ಬೀಜಕ್ಕೆ ₹ 3 ಸಾವಿರ ಇದ್ದ ದರ ಮಳೆಯಾದ ಮರುದಿನ ₹ 4 ಸಾವಿರಕ್ಕೆ ಹೆಚ್ಚಿಸಿದ್ದಾರೆ. ತಾಲೂಕಾಡಳಿತ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಿಗಾ ವಹಿಸುವಂತೆ ಆಗ್ರಹಿಸಿದರು.ಈ ವೇಳೆ ಮುಖಂಡರಾದ ಸಂಗಪ್ಪ ಕರಿಗಾರ, ರಮೇಶ ಕುಂಬಾರ, ಬಾಹುಬಲಿ ಸಂಕಣ್ಣವರ, ಕಿರಣ್ ಮೀಸಾಳ, ದುಂಡಪ್ಪ ತನಂಗಿ, ಮಹದೇವ ಕುಚುನೂರ, ಲಕ್ಕಪ್ಪ ಪೂಜಾರಿ, ಜಗದೀಶ ಮರೆಗುದ್ದಿ, ಶಿವಾನಂದ ಮಗದುಮ್ಮ, ನಿಂಗಪ್ಪ ಉದ್ದಾನಗೋಳ, ಹನುಮಂತ ಮಹೇಶವಾಡಗಿ, ಮಹದೇವ ಹೊಸಮನಿ ಸೇರಿ ಇತರರು ಇದ್ದರು.