ಸರಕಾರ ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡುವ ಜೊತೆಗೆ, ನೇರ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಮಾಜಿ ಶಾಸಕ ಡಾ. ಸಿ.ಎಂ.ರಾಜೇಶ್ ಗೌಡ ಒತ್ತಾಯಿಸಿದ್ದಾರೆ.

ಶಿರಾ: ತಾಲೂಕು ಸೇರಿದಂತೆ ತುಮಕೂರು ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಶೇಂಗಾ ಬೆಳೆಗಾರರು ಬೆಲೆ ಕುಸಿತ ಮತ್ತು ಹೆಚ್ಚಿದ ಉತ್ಪಾದನಾ ವೆಚ್ಚದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಗಂಭೀರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಆದ್ದರಿಂದ ಸರಕಾರ ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡುವ ಜೊತೆಗೆ, ನೇರ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಮಾಜಿ ಶಾಸಕ ಡಾ. ಸಿ.ಎಂ.ರಾಜೇಶ್ ಗೌಡ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಶೇಂಗಾ ಬೆಳೆಯ ಉತ್ಪಾದನಾ ವೆಚ್ಚ ದಿನೇದಿನೇ ಹೆಚ್ಚಾಗುತ್ತಿದ್ದು, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕಾರ್ಮಿಕ ಕೂಲಿ ಹಾಗೂ ನೀರಾವರಿ ವೆಚ್ಚಗಳು ರೈತರ ಮೇಲೆ ಭಾರವಾಗಿ ಬೀಳುತ್ತಿವೆ. ಆದರೆ ಮಾರುಕಟ್ಟೆಯಲ್ಲಿ ಶೇಂಗಾ ಬೆಳೆಗೆ ಸಿಗುತ್ತಿರುವ ಬೆಲೆ ತೀವ್ರವಾಗಿ ಕುಸಿದಿದ್ದು, ಅನೇಕ ರೈತರು ತಮ್ಮ ವೆಚ್ಚವನ್ನೂ ವಾಪಸು ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಅನಿಶ್ಚಿತ ಮಳೆ, ಹವಾಮಾನ ಬದಲಾವಣೆ ಹಾಗೂ ಕೀಟ ರೋಗಗಳ ಹಾವಳಿಯಿಂದ ಬೆಳೆ ನಷ್ಟ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಶೇಂಗಾ ಬೆಳೆಗಾರರು ಬ್ಯಾಂಕ್ ಹಾಗೂ ಖಾಸಗಿ ಸಾಲಗಳ ಬಾಧೆಗೆ ಸಿಲುಕುತ್ತಿದ್ದಾರೆ. ಈ ಸ್ಥಿತಿ ಮುಂದುವರೆದರೆ ಶೇಂಗಾ ಕೃಷಿಯಿಂದ ರೈತರು ದೂರ ಸರಿಯುವ ಸಾಧ್ಯತೆ ಇದೆ. ಶಿರಾ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾಗಿದ್ದ ಶೇಂಗಾ ಕೃಷಿ ಇಂದು ಸಂಕಷ್ಟದ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ರೈತರ ಹಿತದೃಷ್ಟಿಯಿಂದ ತಕ್ಷಣವೇ ಕ್ರಮ ಕೈಗೊಂಡು ಶೇಂಗಾ ಬೆಳೆಗೆ ನ್ಯಾಯಸಮ್ಮತ ಬೆಂಬಲ ಬೆಲೆ ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.