ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಚಿತ್ರದುರ್ಗ, ಚಿಕ್ಕಮಗಳೂರಿಗೆ ನೀರು ಕೊಡುವುದು ಬಿಜೆಪಿ ಸರ್ಕಾರದ ಅವಧಿ ಯೋಜನೆ ಎನ್ನುತ್ತಿದ್ದಾರೆ. ಸರ್ಕಾರ ಯಾವುದೇ ಇರಲಿ, ಯಾವುದೇ ರೈತರಿಗೆ ತೊಂದರೆ ಆಗದಂತೆ ಕೆಲಸ ಮಾಡಬೇಕು ಎಂದು ಭಾರತೀಯ ರೈತ ಒಕ್ಕೂಟದ ಹಿರಿಯ ಧುರೀಣ, ಬಿಜೆಪಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಹೇಳಿದರು.ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಕವಳ್ಳಿ ಭದ್ರಾ ಡ್ಯಾಂನ ಬಲದಂಡೆ ನಾಲೆ ಸೀಳಿ ಕಾಮಗಾರಿ ಕೈಗೊಂಡರೆ ದಾವಣಗೆರೆ, ಶಿವಮೊಗ್ಗ ಜಿಲ್ಲೆ ಹಾಗೂ ಹರಪನಹಳ್ಳಿ ತಾಲೂಕಿನ ಅಚ್ಚುಕಟ್ಟು ರೈತರಿಗೆ ತೊಂದರೆಯಾಗಲಿದೆ. ಪರ್ಯಾಯ ವ್ಯವಸ್ಥೆ ಮೂಲಕ ನೆರೆಯ ಜಿಲ್ಲೆಗಳಿಗೆ ನೀರು ಪೂರೈಸುವ ಕೆಲಸ ಸರ್ಕಾರ ಮಾಡಲಿ. ಕುಡಿಯುವ ನೀರು ಕೊಡಬೇಕೆಂದರೆ ಬೇರೆಡೆಯಿಂದ ನೀರು ಒಯ್ಯಲಿ. ಭದ್ರಾ ಹಿನ್ನೀರು, ನದಿಯಿಂದಲೂ ನೀರು ಹರಿಸಲಿ ಎಂದು ಸಲಹೆ ನೀಡಿದ ಅವರು, ಬಲದಂಡೆ ನಾಲೆ ಸೀಳಿ ಕೈಗೊಂಡ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸದಿದ್ದರೆ, ನಾವೆಲ್ಲರೂ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಭದ್ರಾ ಡ್ಯಾಂ ಹಿನ್ನೀರಿನಿಂದ ನೆರೆ ಜಿಲ್ಲೆಗಳಿಗೆ ಕುಡಿಯುವ ನೀರು ಕೊಡಿ. ಬಲದಂಡೆ ನಾಲೆ ಸೀಳಿ ಕೈಗೊಂಡ ಕಾಮಗಾರಿ ತಕ್ಷಣ ಬಂದ್ ಆಗಬೇಕು ಎಂದರು.
ಮಾಜಿ ಸಚಿವ ರೇಣುಕಾಚಾರ್ಯ ಮಾತನಾಡಿ, ನನ್ನ ವರ್ಚಸ್ಸು, ಜನರೊಂದಿಗೆ ಒಡನಾಟ ನೋಡಿ ಸಹಿಸಲಾಗದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನನ್ನನ್ನು ಉಚ್ಚಾಟನೆ ಮಾಡಿ ಅಂತಾ ಹೇಳೋಕೆ ನೀವ್ಯಾರು? ನನ್ನ ಬಗ್ಗೆ ಮಾತನಾಡೋಕೆ ನೀವು ಯಾರೋ ಎಂದು ಹರಿಹರ ಶಾಸಕ ಬಿ.ಪಿ.ಹರೀಶ ವಿರುದ್ಧ ಹರಿಹಾಯ್ದರು. ಅಲ್ಲದೇ, ಕಾಂಗ್ರೆಸ್ ಪಕ್ಷಕ್ಕೆ 2013ರಲ್ಲೇ ಓಡಿ ಹೋಗಿದ್ದವರು ನೀವು. ಲೋಕಸಭೆ ಚುನಾವಣೆಯಲ್ಲಿ ನಮ್ಮದೇ ಪಕ್ಷದ ಅಭ್ಯರ್ಥಿ ಸೋಲಬೇಕು ಅಂತೆಲ್ಲಾ ನೀವು ಎಲ್ಲೆಲ್ಲಿ ಸಭೆ ಮಾಡಿದ್ದಿರಿ ಎಂಬುದೂ ಗೊತ್ತಿದೆ. ಹಾಲಿ ಶಾಸಕನಾಗಿ ನಿನ್ನದೇ ಹರಿಹರ ಕ್ಷೇತ್ರದಲ್ಲಿ ಎಷ್ಟು ಮತಗಳ ಮುನ್ನಡೆ ಕೊಡಿಸಿದ್ದೀರಿ ಎಂದು ಪ್ರಶ್ನಿಸಿದರು.ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಇತರರು ಇದ್ದರು.
- - -(ಟಾಪ್ ಕೋಟ್) ಭದ್ರಾ ಡ್ಯಾಂ ಹಿನ್ನೀರು ಅಥವಾ ಜಾಕ್ ವೆಲ್ ಮೂಲಕ ಕುಡಿಯುವ ನೀರನ್ನು ಎರಡೂ ಜಿಲ್ಲೆಗಳಿಗೆ ನೀಡಲಿ. ಕಾಂಗ್ರೆಸ್ ಪಕ್ಷದವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಜು.2ರಿಂದಲೇ ಕರಪತ್ರಗಳ ಹಂಚಿಕೆ ಶುರುವಾಗಲಿದೆ. ಪ್ರತಿ ಕ್ಷೇತ್ರದಲ್ಲೂ ರೈತರ ಜಾಗೃತಿ ಮೂಡಿಸಲಿದ್ದೇವೆ. ನಾವೆಲ್ಲಾ ಸೋಮವಾರ ರಾತ್ರಿ ಭದ್ರಾ ಡ್ಯಾಂ ಬಳಿ ಹೋದಾಗಲೂ ಬಲದಂಡೆ ನಾಲೆಯಲ್ಲಿ ಕಾಮಗಾರಿ ನಡೆದಿತ್ತು. ಇನ್ನೂ ಕಾಮಗಾರಿ ನಿಲ್ಲಿಸಿಲ್ಲ. ಡೇ ಅಂಡ್ ನೈಟ್ ಕೆಲಸ ಮಾಡುತ್ತಿದ್ದಾರೆ. ತಕ್ಷಣ ಕೆಲಸ ನಿಲ್ಲದಿದ್ದರೆ, ಸಾವಿರಾರು ಟ್ರ್ಯಾಕ್ಟರ್ ಸಮೇತ ಎಲ್ಲ ಹಂತದ ಹೋರಾಟಕ್ಕೂ ಸಿದ್ಧ.
- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ- - -
-1ಕೆಡಿವಿಜಿ14, 15:ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ನಿವಾಸದಲ್ಲಿ ಬಿಜೆಪಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ ಸುದ್ದಿಗಾರರೊಂದಿಗೆ ಮಾತನಾಡಿದರು.