ಸಾರಾಂಶ
ಶ್ರೀರಂಗ ಏತ ನೀರಾವರಿ ಯೋಜನೆಯಿಂದ ಹುತ್ರಿದುರ್ಗ ಹೋಬಳಿ 19 ಕೆರೆ ತುಂಬಿಸುವ ಯೋಜನೆಗೆ ಸುರೇಶ್ ಗೌಡ ಕಾಮಗಾರಿ ಅಡ್ಡಿ ಪಡಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು, ಸುರೇಶ್ ಗೌಡ ನನ್ನ ಸ್ನೇಹಿತರು. ಕುಣಿಗಲ್ ತಾಲೂಕಿನಲ್ಲಿ ಜನ್ಮ ಪಡೆದವರು. ಕಾಮಗಾರಿ ತಡೆಯುವುದಿಲ್ಲ ಅಂದು ಕೊಂಡಿದ್ದೇನೆ.
ಕನ್ನಡಪ್ರಭ ವಾರ್ತೆ ತುಮಕೂರು
ಕುಣಿಗಲ್ ತಾಲೂಕಿನ ಜನತೆಗೆ ಸಮಪಾಲಿನಂತೆ ನೀರು ಕೊಡಿ ಎಂದು ಕೇಳುತ್ತಿರುವುದಾಗಿ ಕುಣಿಗಲ್ ಶಾಸಕ ಡಾ. ರಂಗನಾಥ ತಿಳಿಸಿದರು.ಅವರು ಸುಂಕಾಪುರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಕುಣಿಗಲ್ ತಾಲೂಕಿನ ಬಹುದಿನಗಳ ಬೇಡಿಕೆ. 3 ಸಾವಿರ ಎಂಎಸ್ಎಫ್ ಟಿ ನೀರು ಪಡೆಯಲಿಕ್ಕೆ ಕಷ್ಟ ಪಡುತ್ತಿರುವ ಹಿನ್ನೆಲೆಯಲ್ಲಿ ನಾವು ಎಲ್ಲರಿಗೂ ಬೇಡಿಕೆ ಇಟ್ಟು ಮನವಿ ಮಾಡುತ್ತಿರುವುದಾಗಿ ತಿಳಿಸಿದರು. ಕೇಂದ್ರ ತಂಡ ಬರಬೇಕು ಎಂಬ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೀರು ಕೊಡುವುದಕ್ಕೆ ರಾಜ್ಯ ಸರ್ಕಾರ ಬೇಕು. ತಡೆ ಹಾಕುವುದಕ್ಕೆ ಕೇಂದ್ರ ಸರ್ಕಾರ ಬೇಕು ಅಂತ ಕೇಳ್ತಾ ಇದ್ದಾರಾ ಎಂದು ಪ್ರಶ್ನಿಸಿದರು.
ನಮಗೆ ಅನ್ಯಾಯ ಆಗಿರುವುದನ್ನು ಸರಿಪಡಿಸುವುದಕ್ಕೆ ನಾವು ಹೇಳ್ತಾ ಇದ್ದೇವೆ ಎಂದ ಅವರು, ನಾನು ರಾಜ್ಯ ಸರ್ಕಾರದ ಆಸರೆ ಪಡೀತಾ ಇದ್ದೀನಿ, ಅದರಲ್ಲೇನು ತಪ್ಪಿದೆ ಎಂದರು.ಶ್ರೀರಂಗ ಏತ ನೀರಾವರಿ ಯೋಜನೆಯಿಂದ ಹುತ್ರಿದುರ್ಗ ಹೋಬಳಿ 19 ಕೆರೆ ತುಂಬಿಸುವ ಯೋಜನೆಗೆ ಸುರೇಶ್ ಗೌಡ ಕಾಮಗಾರಿ ಅಡ್ಡಿ ಪಡಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು, ಸುರೇಶ್ ಗೌಡ ನನ್ನ ಸ್ನೇಹಿತರು. ಕುಣಿಗಲ್ ತಾಲೂಕಿನಲ್ಲಿ ಜನ್ಮ ಪಡೆದವರು. ಕಾಮಗಾರಿ ತಡೆಯುವುದಿಲ್ಲ ಅಂದು ಕೊಂಡಿದ್ದೇನೆ ಎಂದರು.
ಇವತ್ತು ಜಯಚಂದ್ರ, ಶ್ರೀನಿವಾಸ್ ಎಲ್ಲರೂ ಬಂದಿದ್ದಾರೆ. ಎಲ್ಲರಿಗೂ ಸದ್ಯ ಅರ್ಥ ಆಗಿದೆ ಅಂದುಕೊಂಡಿದ್ದೇನೆ. ಗುಬ್ಬಿ, ತುಮಕೂರಿನಂತೆಯೇ ಕುಣಿಗಲ್ ಕೂಡ ತಾಲೂಕು ಕೇಂದರವಾಗಿದ್ದು. ಎಲ್ಲರಿಗೂ ಸಮಾನ ನೀರು ಹಂಚಿಕೆ ಆಗಬೇಕು ಅನ್ನೋದೆ ನನ್ನ ವಾದ ಎಂದರು.