ಶಿಕ್ಷಣ ಒದಗಿಸುವುದು ಸರ್ಕಾರದ ಪ್ರಮುಖ ಕರ್ತವ್ಯ

| Published : Mar 12 2024, 02:02 AM IST

ಸಾರಾಂಶ

ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಅದನ್ನು ಸರಿಯಾಗಿ ಒದಗಿಸುವುದು ಸರ್ಕಾರದ ಕರ್ತವ್ಯ. ಶಿಕ್ಷಣ ನೀತಿ ರೂಪಿಸುವ ಪೂರ್ವದಲ್ಲಿ ಪೂರ್ವಾಪರ ಚರ್ಚೆ ಮತ್ತು ಸಲಹೆ ಅಗತ್ಯ.

ಧಾರವಾಡ:

ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಅದನ್ನು ಸರಿಯಾಗಿ ಒದಗಿಸುವುದು ಸರ್ಕಾರದ ಕರ್ತವ್ಯ. ಶಿಕ್ಷಣ ನೀತಿ ರೂಪಿಸುವ ಪೂರ್ವದಲ್ಲಿ ಪೂರ್ವಾಪರ ಚರ್ಚೆ ಮತ್ತು ಸಲಹೆ ಅಗತ್ಯ ಎಂದು ಎಐಪಿಟಿಎಫ್‌ ಶಿಕ್ಷಕ ಸಂಘಟನೆಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು. ಇಲ್ಲಿಯ ನಿವೃತ್ತ ಸರ್ಕಾರಿ ನೌಕರರ ಸಭಾಭವನದಲ್ಲಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್ ಆಫ್ ಇಂಡಿಯಾ ವತಿಯಿಂದ ರಾಜ್ಯ ಶಿಕ್ಷಣ ನೀತಿ ಕುರಿತಾಗಿ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿ ಕುರಿತಂತೆ ಸಮಿತಿ ರಚಿಸಿದೆ. ಆ ಸಮಿತಿ ರಾಜ್ಯದೆಲ್ಲೆಡೆ ಸಂಚರಿಸಿ ಪ್ರತಿಯೊಬ್ಬ ತಜ್ಞರ ಅಭಿಪ್ರಾಯ ಪಡೆಯಬೇಕು. ಜತೆಗೆ ನೂತನ ಶಿಕ್ಷಣ ನೀತಿ ಜಾರಿಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಪ್ರತಿಯೊಂದು ರಾಜ್ಯಕ್ಕೆ ಅದರದ್ದೇ ಆದ ಶಿಕ್ಷಣ ನೀತಿ ಇರುವುದು ಸೂಕ್ತ ಎಂದರು.ನೂತನ ಶಿಕ್ಷಣ ನೀತಿ ಪ್ರಕಾರ 1 ವರ್ಷ ಪದವಿ ಮುಗಿಸಿದರೂ ಪದವೀಧರರೇ, ನಾಲ್ಕು ವರ್ಷ ಮುಗಿಸಿದರೂ ಪದವೀಧರರೇ ಆಗಿದ್ದಾರೆ. ಆದರೆ, ನೇಮಕಾತಿ ಸಂದರ್ಭದಲ್ಲಿ ಯಾರನ್ನು ಪರಿಗಣಿಸಲಾಗುತ್ತದೆ ಎಂಬ ಗೊಂದಲ ಕಾಡತೊಡಗಿದೆ. ಇನ್ನೂ ಹತ್ತಾರು ಸಮಸ್ಯೆ ಇದ್ದರೂ ತರಾತುರಿಯಲ್ಲಿ ಎನ್‌ಇಪಿ ಜಾರಿಗೆ ತರಲಾಗಿದೆ. ಆದರೆ, ರಾಜ್ಯ ಸರ್ಕಾರ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಿ ಎಂದು ಹೇಳಿದರು.ಶಿಕ್ಷಣ ತಜ್ಞ ವೆಂಕಟೇಶ ಮಾಚಕನೂರ ಮಾತನಾಡಿ, ಪದವಿ ಸೇರಿದಂತೆ ಎಲ್ಲ ವಿಭಾಗದಲ್ಲಿ ಸೆಮಿಸ್ಟರ್ ಪದ್ಧತಿ ಅಳವಡಿಕೆ ಮಾಡಿದ್ದರಿಂದ ಕಲಿಕೆ ಗಟ್ಟಿತನ ಆಗುತ್ತಿಲ್ಲ. ಹಿಂದಿನ ದಿನಗಳಲ್ಲಿ ಮಾದರಿ ಶಿಕ್ಷಣ ಇತ್ತು. ಆಗ ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದರು. ಜತೆಗೆ ಮಕ್ಕಳಲ್ಲಿ ಜ್ಞಾನವೃದ್ಧಿ ಆಗುತ್ತಿತ್ತು. ಆದರೆ, ಇಂದಿನ ನೂತನ ಶಿಕ್ಷಣ ಪದ್ಧತಿಯಿಂದ ಮಕ್ಕಳಿಗೆ ಕ್ಷಣಿಕ ಜ್ಞಾನ ದೊರೆಯುತ್ತಿದೆ. ಇದು ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದರು.

ಸಾಹಿತಿ ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಮಕ್ಕಳಿಗೆ ವಿಷಯಾಧಾರಿತ ಜ್ಞಾನ ನೀಡುವುದು ಅವಶ್ಯವಾಗಿದೆ. ಆದರೆ, ನೂತನ ಶಿಕ್ಷಣ ಪದ್ಧತಿಯಲ್ಲಿ ಅಂತಹ ಜ್ಞಾನ ಪಡೆಯುತ್ತಿಲ್ಲ. ವಸ್ತುನಿಷ್ಠ ಪ್ರಶ್ನೆ ಪತ್ರಿಕೆ ಬರುತ್ತಿರುವುದರಿಂದ ಮಕ್ಕಳು ಅಗತ್ಯಕ್ಕೆ ತಕ್ಕಷ್ಟು ಮಾತ್ರವೇ ಅಭ್ಯಾಸ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಣ ಪಡೆದ ಮಕ್ಕಳಲ್ಲಿ ಜ್ಞಾನದ ಹಸಿವು ಇಲ್ಲದಂತಾಗುತ್ತಿದೆ ಎಂದರು.ಆನಂತರ ನಡೆದ ಸಮಾಲೋಚನಾ ಸಭೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಣ ತಜ್ಞರು ಇದ್ದರು.