ದೇಶಕ್ಕೆ ಸ್ವಾತಂತ್ರ ಬಂದಾಗ 15 ವಿವಿಗಳಿದ್ದವು. ಸಾಕ್ಷರತೆ ಶೇ. 11ರಷ್ಟಿತ್ತು. ಅದು ಶೇ‌. 76ರಷ್ಟಾಗಿದ್ದು, ಯಾವಾಗ ಅನ್ನೋದನ್ನು ನೋಡಿ. ಐಐಟಿ ತಂದಿದ್ದು ನಾವೇ ಎನ್ನುತ್ತಿದ್ದಾರೆ ಬಿಜೆಪಿ ಮುಖಂಡರು. ಐಐಟಿ ಪರಿಕಲ್ಪನೆ ತಂದಿದ್ದು ನೆಹರು.

ಧಾರವಾಡ: ಪ್ರತಿಯೊಬ್ಬರಿಗೂ ಆರೋಗ್ಯ ಹಾಗೂ ಶಿಕ್ಷಣ ಕೊಡುವುದು ಆಯಾ ಸರ್ಕಾರಗಳ ಜವಾಬ್ದಾರಿ. ಆದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇವೆರಡನ್ನು ಕೊಡುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಹೇಳಿದರು.

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಚುನಾವಣಾ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಲಕ್ಷಾಂತರ ಶಾಲೆಗಳು ಮುಚ್ಚುತ್ತಿವೆ. ಅವುಗಳನ್ನು ಕಾಪಾಡುವುದು ಸರ್ಕಾರದ ಕರ್ತವ್ಯ ಆಗಬೇಕಿತ್ತು. ಅದನ್ನು ಬಿಟ್ಟು ಕೇಂದ್ರ ಬಿಜೆಪಿ ಸರ್ಕಾರ ಎಸ್‌ಐಆರ್‌ ಹೆಸರಿನಲ್ಲಿ ಜನರ ದಾರಿ ತಪ್ಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬರುವ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕೆಂದು ಮನವಿ ಮಾಡಿದರು.

ವಿಶೇಷವಾಗಿ ವಿಧಾನಪರಿಷತ್ ಚುನಾವಣೆ ಪ್ರಜ್ಞಾವಂತರು, ಪದವೀಧರರು ಮತ ಚಲಾಯಿಸುವ ಚುನಾವಣೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು ಬೆಂಬಲಿಸಲು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ ಬಂದಾಗ 15 ವಿವಿಗಳಿದ್ದವು. ಸಾಕ್ಷರತೆ ಶೇ. 11ರಷ್ಟಿತ್ತು. ಅದು ಶೇ‌. 76ರಷ್ಟಾಗಿದ್ದು, ಯಾವಾಗ ಅನ್ನೋದನ್ನು ನೋಡಿ. ಐಐಟಿ ತಂದಿದ್ದು ನಾವೇ ಎನ್ನುತ್ತಿದ್ದಾರೆ ಬಿಜೆಪಿ ಮುಖಂಡರು. ಐಐಟಿ ಪರಿಕಲ್ಪನೆ ತಂದಿದ್ದು ನೆಹರು. ಪ್ರತಿ ತಿಂಗಳು ಪ್ರಧಾನಿ ಮೋದಿ ಅವರು ಮನ್ ಕೀ ಬಾತ್ ಮಾಡುತ್ತಾರೆ. ಮಹಿಳೆಯರ ಸುರಕ್ಷತೆ, ನಿರುದ್ಯೋಗ ಸಮಸ್ಯೆ ಬಗ್ಗೆ ಯಾವತ್ತೂ ಮಾತನಾಡುವುದಿಲ್ಲ. ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಎಂದೆಲ್ಲ ಜಾಹೀರಾತು ನೀಡಿದ್ದು, ದೇಶಾದ್ಯಂತ ಸಾಕಷ್ಟು ಕಂಪನಿಗಳು ಬಾಗಿಲು ಮುಚ್ಚಿ ಹೋಗಿವೆ. ಬಿಜೆಪಿಯ ಇಂತಹ ವಿಷಯಗಳನ್ನು ಕಾಂಗ್ರೆಸ್‌ ಕಾರ್ಯಕರ್ತರು ಪದವೀಧರರಿಗೆ ತಿಳಿಸಬೇಕೆಂದರು.

ಸಚಿವ ಸಂತೋಷ ಲಾಡ್ ಮಾತನಾಡಿ, ಪ್ರಜ್ಞಾವಂತರು ಸರಿಯಾಗಿ ಯೋಚಿಸಿ ಮತ ನೀಡಬೇಕು. ಸ್ಕಿಲ್ ಇಂಡಿಯಾ ಮೂಲಕ ಒಂದು ಕೋಟಿ ಉದ್ಯೋಗ ನೀಡುತ್ತೇವೆ ಅಂದಿದ್ದರು. ಆದರೆ, ಎಲ್ಲಿ ಉದ್ಯೋಗ ಸಿಕ್ಕವು. ಯುವಕರಿಗೆ ಕೆಲಸ ಕೊಡುತ್ತೇವೆ ಎನ್ನುತ್ತಾರೆ. ಆದರೆ, ಅದೆಲ್ಲ ಎಲ್ಲಿಯೂ ಆಗುತ್ತಿಲ್ಲ. ಈ ಬಗ್ಗೆ ಕೇಂದ್ರ ಸಚಿವ ಜೋಶಿಯವರು ಉತ್ತರ ನೀಡಬೇಕಿದೆ. ಮೋದಿ ಸರ್ಕಾರ 98,000 ಶಾಲೆಗಳನ್ನು ಮುಚ್ಚಿ ಹಾಕಿದೆ. ಇದನ್ನೆಲ್ಲ ಪದವೀಧರ ಮತದಾರರಿಗೆ ತಿಳಿಸಬೇಕಿದೆ ಎಂದರು.

ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ಅ. 23ರಂದು ಚುನಾವಣೆ ನಡೆಯಲಿದೆ. ಈ ಕ್ಷೇತ್ರ ನಾಲ್ಕು ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದು, 24 ಶಾಸಕರು, 34 ತಾಲೂಕುಗಳಿವೆ. ಬಹುತೇಕ ಒಂದು ಲಕ್ಷ ಮತದಾರರಿದ್ದಾರೆ. ಕಾರ್ಯಕರ್ತರು ಈಗಾಗಲೇ ಪ್ರಚಾರ ಕೈಗೊಂಡಿದ್ದು, ಹುಬ್ಬಳ್ಳಿಯಲ್ಲಿ ಚುನಾವಣಾ ಕಚೇರಿ ಸಹ ಉದ್ಘಾಟನೆ ಮಾಡಲಾಗಿದೆ. ಶಿಕ್ಷಕ ಮತದಾರರು ಹೆಚ್ಚಿದ್ದು, ದೊಡ್ಡ ಸಂಖ್ಯೆಯಲ್ಲಿ ವಕೀಲರು, ವೈದ್ಯರು, ಎಂಜಿನಿಯರ್ ಇದ್ದಾರೆ. ಇವರೆಲ್ಲರೂ ನಮ್ಮ ಪರವಾಗಿದ್ದಾರೆ ಎಂದುಕೊಂಡಿದ್ದೇನೆ ಎಂದರು.

ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಆರು ತಿಂಗಳ ಹಿಂದೆಯೇ ಈ ಚುನಾವಣೆಗೆ ನಾವು ಸಿದ್ಧರಾಗಿದ್ದೇವೆ. ಈಗಾಗಲೇ ಮೋಹನ ಲಿಂಬಿಕಾಯಿ ಎಲ್ಲ ಕಡೆ ಪದವೀಧರರನ್ನು ಭೇಟಿ ಮಾಡಿದ್ದಾರೆ. ಹು- ಧಾ ಅವಳಿ ನಗರದಲ್ಲಿ ಹೆಚ್ಚಿನ ಮತಗಳಿದ್ದು, ಅವು ಪಕ್ಷದ ಪರವಾಗಿ ಚಲಾವಣೆಯಾಗುವಂತೆ ನೋಡಿಕೊಳ್ಳಬೇಕಿದೆ. ನಾವೆಲ್ಲ ಸೇರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ವಿಧಾನಪರಿಷತ್‌ ಸದಸ್ಯ ಎಫ್‌.ಎಚ್‌. ಜಕ್ಕಪ್ಪನವರ, ಕಾಂಗ್ರೆಸ್‌ ಮುಖಂಡ ದೀಪಕ ಚಿಂಚೋರೆ, ಮಾಜಿ ಸಂಸದ ಐ.ಜಿ. ಸನದಿ ಹಾಗೂ ಕಾಂಗ್ರೆಸ್‌ ಮುಖಂಡರು ಇದ್ದರು.