ರಾಮನಗರ: ಅಭಿವೃದ್ಧಿ ಎಂದರೆ ಒಂದು ಪ್ರದೇಶದ ಉನ್ನತೀಕರಿಸಿದ ಶಾಲೆಗಳು, ವ್ಯವಸ್ಥಿತ ಆರೋಗ್ಯ ಸೇವೆಗಳು, ಒಳ್ಳೆಯ ರಸ್ತೆಗಳು, ಕುಡಿವ ನೀರಿನ ಹಂಚಿಕೆ ಇತ್ಯಾದಿ ಕಾರ್ಯಗಳಾಗಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಹಾಗೂ ಶಿಬಿರ ನಿರ್ದೇಶಕ ಪ್ರೊ. ಆರ್. ಶಿವಪ್ಪ ಹೇಳಿದರು.
ತಾಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಮೈಸೂರು ವಿವಿ ಸಮಾಜಕಾರ್ಯ ವಿಭಾಗದ ಸಹಯೋಗದಲ್ಲಿ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಹತ್ತು ದಿನಗಳ ಕಾಲ ಹಮ್ಮಿಕೊಂಡಿರುವ ಸಹಭಾಗಿತ್ವ ಸಮಾಜಕಾರ್ಯ ಶಿಬಿರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತನಗೆ ತನ್ನ ಮನೆಗೆ ಅನುಕೂಲವಾಗುವ ಸವಲತ್ತುಗಳನ್ನು ಒದಗಿಸಿಕೊಡುವುದನ್ನೇ ಸಮುದಾಯಗಳು ಅಭಿವೃದ್ಧಿ ಎಂದು ತಿಳಿದುಕೊಂಡಿವೆ ಎಂದರು.ಶಿಬಿರಾರ್ಥಿಗಳು ಗ್ರಾಮೀಣ ಪ್ರದೇಶದ ಜನರೊಡನೆ ಸಹಭಾಗಿತ್ವದ ಹೆಸರಿನಲ್ಲಿ ಮಾಹಿತಿಗಳನ್ನು ಕಲೆಹಾಕುವಾಗ ತುಂಬಾ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಹಾಗೆಯೇ ಅವರಿಂದ ಪಡೆಯುವ ಮಾಹಿತಿಗಳಿಗೆ ಸರಿಯಾದ ರೂಪ ಕೊಟ್ಟು, ಅವುಗಳ ಸಾಧ್ಯಾಸಾಧ್ಯತೆಗಳು, ಅವರ ಆಲೋಚನಾ ಕ್ರಮಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಇಫ್ರೊ ಜಾನಪದ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಂ.ಬೈರೇಗೌಡ ಮಾತನಾಡಿ, ಸಮಾಜ ಕಾರ್ಯವೆಂದರೆ ಅದೊಂದು ಯಜ್ಞ. ಅಲ್ಲಿನ ವಿಚಾರಗಳು ಸೀಮಿತ ಪರಿಧಿಯಲ್ಲೇ ಗಿರಕಿ ಹೊಡೆಯದೆ, ವಿಶಾಲ ಅರ್ಥದಲ್ಲಿ ಅರಗಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಹೇಳಿದರು.ನಗರಕೇಂದ್ರಿತ ಬದುಕಿನ ರೂಪಗಳು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸುತ್ತಿದ್ದು, ಜನರ ಜೀವನ ವಿಧಾನವೇ ಬೇರೆ ಮಜಲಿನಲ್ಲಿ ಚಲಿಸುತ್ತಿದೆ. ಈ ಬೆಳವಣಿಗೆಯ ಒಳಿತು ಕೆಡುಕುಗಳನ್ನು ಅರ್ಥಮಾಡಿಕೊಳ್ಳಬೇಕಾದ ತುರ್ತು ಹಿಂದೆಂದಿಗಿಂತಲೂ ಇಂದು ಅವಶ್ಯವಾಗಿದೆ. ವಿದ್ಯಾರ್ಥಿಗಳ ಪ್ರಶ್ನೆಗಳು ಅವರ ತಿಳಿವಳಿಕೆಯ ಮಟ್ಟವನ್ನು ಸೂಚಿಸುತ್ತದೆ. ಯಾವುದೇ ಸ್ಥಳದಲ್ಲಿ ನೀವು ಇದ್ದರೂ ಅಲ್ಲಿನ ಸಮುದಾಯಗಳನ್ನು ಅರ್ಥಮಾಡಿಕೊಳ್ಳುವ, ಅವರೊಡನೆ ಸಂವಹನ ನಡೆಸುವಾಗ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕೆಂದು ಬೈರೇಗೌಡ ಕಿವಿಮಾತು ಹೇಳಿದರು.
ಶಿಬಿರ ಸಂಚಾಲಕ ಎಂ.ಮುಖೇಶ್ ಪವನಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದ ಈ ಮುಖ್ಯ ಘಟ್ಟದಲ್ಲಿ ಹಲವು ನೆಲಗಳಲ್ಲಿ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು. ಶಿಬಿರದಲ್ಲಿ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
24ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕಿನ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ಹತ್ತು ದಿನಗಳ ಕಾಲ ಹಮ್ಮಿಕೊಂಡಿರುವ ಸಹಭಾಗಿತ್ವ ಸಮಾಜಕಾರ್ಯ ಶಿಬಿರವನ್ನು ಅತಿಥಿಗಳು ಉದ್ಘಾಟಿಸಿದರು.