ಮೈಸೂರು ಮತ್ತು ಚಾಮರಾಜನಗರ ಕೇಂದ್ರ ಸಹಕಾರ ಬ್ಯಾಂಕ್ ವ್ಯಾಪ್ತಿಯಲ್ಲಿರುವ ಪಿಎಸಿಸಿ ನೌಕರರ ಸೇವಾ ಹಿರಿತನ ಆಧಾರದಲ್ಲಿ ಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಜೊತೆಗೆ ನೌಕರರ ಹಿತರಕ್ಷಣೆಗೆ ಬದ್ದನಾಗಿರುವುದಾಗಿ ನೂತನ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಂ. ಜಯರಾಮ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೈಸೂರು ಮತ್ತು ಚಾಮರಾಜನಗರ ಕೇಂದ್ರ ಸಹಕಾರ ಬ್ಯಾಂಕ್ ವ್ಯಾಪ್ತಿಯಲ್ಲಿರುವ ಪಿಎಸಿಸಿ ನೌಕರರ ಸೇವಾ ಹಿರಿತನ ಆಧಾರದಲ್ಲಿ ಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಜೊತೆಗೆ ನೌಕರರ ಹಿತರಕ್ಷಣೆಗೆ ಬದ್ದನಾಗಿರುವುದಾಗಿ ನೂತನ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವೈ.ಎಂ. ಜಯರಾಮ್ ತಿಳಿಸಿದರು.ನಗರದ ಮಂಗಲ ಬಳಿ ಇರುವ ಶಂಕರದೇವರ ಬೆಟ್ಟದಲ್ಲಿ ಚಾಮರಾಜನಗರ ಮತ್ತು ಯಳಂದೂರು ತಾಲೂಕು ಪಿಎಸಿಸಿ ನೌಕರರ ಕ್ಷೇಮಾಭಿವೃದ್ದಿ ಸಂಘ ಆಯೋಜನೆ ಮಾಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರೈತರು ಹಾಗೂ ಬ್ಯಾಂಕ್ ಮತ್ತು ಸರ್ಕಾರಗಳ ಸೇತುವೆಯಾಗಿ ಪಿಎಸಿಸಿ ಬ್ಯಾಂಕ್ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸೇವಾ ಹಿರಿತನ ಮತ್ತು ಸಂಘದ ಅರ್ಥಿಕ ವಹಿವಾಟು ಗಮನಿಸಿ, ನೌಕರರಿಗೆ ನಿವೃತ್ತಿಯ ನಂತರ ಗೌರವ ಧನ , ಅಕಾಲಿಕ ಮರಣ ಹಾಗೂ ಅಪಘಾತ ಪರಿಹಾರ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲು ಅಡಳಿತ ಮಂಡಲಿ ಸಭೆಯಲ್ಲಿ ಚರ್ಚಿಸಿ, ಕ್ರಮ ವಹಿಸುವುದಾಗಿ ತಿಳಿಸಿದರು.
ರೈತರಿಗೆ ಸಕಾಲದಲ್ಲಿ ಸಾಲ ನೀಡುವ ಜೊತೆಗೆ ಮರು ಪಾವತಿಯನ್ನು ಸರಿಯಾಗಿ ಮಾಡಿಸಿದರೆ, ಬ್ಯಾಂಕ್ ಹಾಗೂ ಸಂಘಕ್ಕೆ ಲಾಭವಾಗುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ನೌಕರರು ಹೆಚ್ಚಿನ ಶ್ರಮ ವಹಿಸಬೇಕು. ಈಗ ನೀಡಿರುವ ಹೆಚ್ಚುವರಿ ಹಣವನ್ನು ಶೇ. ೧೦ಕ್ಕೆ ಏರಿಕೆ ಮಾಡುವುದಾಗಿ ತಿಳಿಸಿದರು. ಇದಕ್ಕು ಮುನ್ನಾ ನೌಕರರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ, ಶಿವಮೊಗ್ಗ ಎಂಡಿಸಿಸಿ ಬ್ಯಾಂಕ್ ಮಾದರಿಯಲ್ಲಿ ಪಿಎಸಿಸಿ ನೌಕರರಿಗೆ ಗೌರವ ಧನ ನೀಡಬೇಕು. ಸೇವಾ ಭದ್ರತೆ ಹಾಗು ಇತರೇ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.ನೂತನ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವೈ.ಎಂ. ಜಯರಾಮ್ ಅವರನ್ನು ಸಂಘದ ವತಿಯಿಂದ ಮೈಸೂರು ಪೇಟಾ ತೊಡಿಸಿ, ಶಾಲು, ಹಾರ ಹಾಕಿ , ಫಲತಾಂಬುಲು ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಕೆಂಪನಪುರ ಮಹದೇವಪ್ಪ, ಉಪಾಧ್ಯಕ್ಷ ಮಹದೇವಯ್ಯ, ಕಾರ್ಯದರ್ಶಿ ಜಯಶಂಕರ್, ಖಜಾಂಚಿ ಮಹೇಶ್, ಸಂಚಾಲಕ ಸತೀಶ್ ಜೋಷಿ ಸೇರಿದಂತೆ ಸಂಘದ ಸದಸ್ಯರು ಇದ್ದರು.