ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಹಿನ್ನೆಲೆಯಲ್ಲಿ ಚುನಾವಣಾ ಅಭ್ಯರ್ಥಿಗಳು ಕರಪತ್ರದಲ್ಲಿ ಅನುಮತಿ ಇಲ್ಲದ ಹಾಗೂ ಪ್ರಚೋದನಾಕಾರಿ ಅಂಶಗಳನ್ನು ಮುದ್ರಿಸಬಾರದು ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಟಿ ಟಿ.ಭೂಬಾಲನ್ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆಯಲ್ಲಿ ಮಾತನಾಡಿ, ಯಾವುದೇ ರೀತಿಯ ರಾಜಕೀಯ ಮತಪ್ರಚಾರ ಮತ್ತು ಕೋಮುಗಲಭೆ ಸೃಷ್ಟಿಸುವ ಫ್ಲೆಕ್ಸ್, ಕರಪತ್ರ, ಬ್ಯಾನರ್‌ಗಳನ್ನು ಮುದ್ರಿಸುವಂತಿಲ್ಲ. ಇದನ್ನು ಉಲ್ಲಂಘಿಸಿದರೆ ಪ್ರಜಾಪ್ರತಿನಿಧಿ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.ಅಭ್ಯರ್ಥಿಗಳು ಹಾಗೂ ಪ್ರಿಂಟಿಂಗ್‌ಪ್ರೆಸ್ ಮಾಲೀಕರು ತಾವು ಮುದ್ರಿಸುವ ವಿಷಯಗಳ ಮಾದರಿಯನ್ನು ಜಿಲ್ಲಾಡಳಿತಕ್ಕೆ ಮೂರು ದಿನಗಳ ಮುಂಚಿತವಾಗಿ ತಿಳಿಸಬೇಕು. ಜಿಲ್ಲಾಡಳಿತದಿಂದ ಅನುಮತಿ ಪಡೆದ ನಂತರ ಕರಪತ್ರವನ್ನು ಮುದ್ರಿಸಬಹುದಾಗಿದೆ. ಕಡ್ಡಾಯವಾಗಿ ಕರಪತ್ರದಲ್ಲಿ ಮುದ್ರಕರ ಹೆಸರು, ಮುದ್ರಣ ಮಾಡಿದ ಕರಪತ್ರಗಳ ಸಂಖ್ಯೆಯನ್ನು ನಮೂದಿಸಬೇಕು ಎಂದು ತಿಳಿಸಿದರು.
ಯಾವುದೇ ರೀತಿಯ ಅಪಪ್ರಚಾರ, ಸುಳ್ಳು ಮಾಹಿತಿ, ಕೋಮುಗಲಭೆ ಸೃಷ್ಟಿಸುವಂತಹ ಕರಪತ್ರ, ಪೋಸ್ಟರ್, ಬ್ಯಾನರ್ ಮುದ್ರಿಸಲು ಅನುಮತಿ ಇರುವದಿಲ್ಲ. ಮಾಲೀಕರ ನಿಯಮ ಉಲ್ಲಂಘಿಸಿದರೆ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ 6 ತಿಂಗಳು ಜೈಲು ಮತ್ತು 2 ಸಾವಿರ ರುಪಾಯಿ ದಂಡ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರಿಂಟಿಂಗ್ ಪ್ರೆಸ್ ಮಾಲೀಕರು ಬೇರೆ ಸ್ಥಳದಿಂದ ಮುದ್ರಿಸಿ, ನಮ್ಮ ಜಿಲ್ಲೆಯಲ್ಲಿ ಹಂಚುತ್ತಿದ್ದಾರೆ. ಇದ್ದಕ್ಕೆ ಕಡಿವಾಣ ಹಾಕಲು ಈಗಾಗಲೇ ಎಸ್‌ಎಸ್‌ಟಿ ಮತ್ತು ಎಫ್‌ಎಸ್‌ಟಿ ತಂಡಗಳು ಕಾರ್ಯಪ್ರವೃತ್ತವಾಗಿವೆ. ಅಂತಹ ಘಟನೆಗಳು ಕಂಡುಬಂದರೆ ಕೂಡಲೇ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳು ಚುನಾವಣಾ ವೆಚ್ಚದ ಸರಿಯಾದ ನಿರ್ವಹಣೆ ಮಾಡಬೇಕಾಗಿದೆ. ಫ್ಲೆಕ್ಸ್, ಬ್ಯಾನರ್ ಮುದ್ರಣಗಳು ಅಭ್ಯರ್ಥಿಯ ಚುನಾವಣೆ ವೆಚ್ಚಕ್ಕೆ ಸೇರ್ಪಡೆಯಾಗಲಿದೆ. ಅಭ್ಯರ್ಥಿಗಳು 10 ಸಾವಿರಕ್ಕಿಂತ ಹೆಚ್ಚು ಹಣ ಪಾವತಿ ಮಾಡಬೇಕಾದ ಸಂದರ್ಭದಲ್ಲಿ ಕಡ್ಡಾಯವಾಗಿ ಚೆಕ್ ರೂಪದಲ್ಲಿ ಪಾವತಿ ಮಾಡಬೇಕು ಎಂದು ಸೂಚಿಸಿದರು.ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹಾಗೂ ಜಿಲ್ಲೆಯ ವಿವಿಧ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಹಾಗು ಸಿಬ್ಬಂದಿ ಇದ್ದರು.