ಪಿಎಸೈ ಪರಶುರಾಮ್‌ ಸಾವಿನ ಪ್ರಕರಣ ತನಿಖೆ ಸಿಬಿಐಗೆ ?

| Published : Aug 07 2024, 01:04 AM IST

ಸಾರಾಂಶ

ಪಿಎಸೈ ಪರಶುರಾಮ್‌ ಶಂಕಾಸ್ಪದ ಸಾವಿನ ಪ್ರಕರಣ ಸಿಬಿಐ ತನಿಖೆಗೊಳಪಡುವ ಬಹುತೇಕ ಸಾಧ್ಯತೆಗಳು ಕಂಡುಬರುತ್ತಿವೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆ ವಹಿಸಿದೆಯಾದರೂ, ಸಿಬಿಐಗೆ ವಹಿಸುವಂತೆ ಕುಟುಂಬಸ್ಥರು ಹಾಗೂ ರಾಜ್ಯ ಬಿಜೆಪಿ ನಾಯಕರು ಆಗ್ರಹಿಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸಿಬಿಐಗೆ ಪ್ರಕರಣ ಕೊಡಲು ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಪಿಎಸೈ ಪರಶುರಾಮ್‌ ಶಂಕಾಸ್ಪದ ಸಾವಿನ ಪ್ರಕರಣ ಸಿಬಿಐ ತನಿಖೆಗೊಳಪಡುವ ಬಹುತೇಕ ಸಾಧ್ಯತೆಗಳು ಕಂಡುಬರುತ್ತಿವೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆ ವಹಿಸಿದೆಯಾದರೂ, ಸಿಬಿಐಗೆ ವಹಿಸುವಂತೆ ಕುಟುಂಬಸ್ಥರು ಹಾಗೂ ರಾಜ್ಯ ಬಿಜೆಪಿ ನಾಯಕರು ಆಗ್ರಹಿಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಸಿಬಿಐಗೆ ಪ್ರಕರಣ ಕೊಡಲು ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಇದಕ್ಕೆ ಪೂರಕವೆಂಬಂತೆ, ಕೇಂದ್ರ ಗೃಹ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಪಿಎಸೈ ಪರಶುರಾಮ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳವಣಿಗೆಗಳ ಕುರಿತು ವಿವಿಧ ಮಾಹಿತಿ ಕಲೆ ಹಾಕಿದೆ ಎಂದು ಬೆಂಗಳೂರಿನ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು "ಕನ್ನಡಪ್ರಭ "ಕ್ಕೆ ಪ್ರತಿಕ್ರಿಯಿಸಿದ್ದಾರೆ.

ಪರಶುರಾಮ್‌ ಪತ್ನಿ ಹಾಗೂ ಕುಟುಂಬಸ್ಥರ ಆರೋಪಗಳು, ತಮ್ಮದೇ ಇಲಾಖೆಯ ಪೊಲೀಸ್ ಅಧಿಕಾರಿಯೊಬ್ಬರ ಶಂಕಾಸ್ಪದ ಸಾವಿನ ಬಗ್ಗೆ ಶಾಸಕ, ಪುತ್ರನ ವಿರುದ್ಧ ಎಫ್‌ಐಆರ್‌ ದಾಖಲಿಸುವಲ್ಲಿ ಪೊಲೀಸ್‌ ಇಲಾಖೆ ಮಾಡುತ್ತಿರುವ ವಿಳಂಬ, ಪ್ರತಿಭಟನೆ ಸೇರಿದಂತೆ ಇಡೀ ಪ್ರಕರಣದ ಇಂಚಿಂಚೂ ಮಾಹಿತಿಗಳನ್ನು ಕೇಂದ್ರ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಅವರು ತಿಳಿಸಿದ್ದಾರೆ.

ಡಿಐಜಿ ಕಚೇರಿಯಲ್ಲೂ ವಿಚಾರಣೆ ಸಾಧ್ಯತೆ

ಪಿಎಸೈ ಪರಶುರಾಮ್‌ ಸೇರಿದಂತೆ, ಈಶಾನ್ಯ ವಲಯದ ಕೆಲವು ಪಿಎಸೈ ವರ್ಗಾವಣೆ ವಿಚಾರದಲ್ಲಿ ಕೇಳಿಬಂದ ಆರೋಪಗಳಿಂದಾಗಿ ಸಿಐಡಿ ಅಧಿಕಾರಿಗಳು ಪರಶುರಾಮ್‌ ಪ್ರಕರಣದಲ್ಲಿ ಡಿಐಜಿ ಕಚೇರಿಯ ಕೆಲವರ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಅಲ್ಲಿನ ಕೆಲವರು ಮಧ್ಯವರ್ತಿಯಂತೆ ಕೆಲಸ ನಿರ್ವಹಿಸುತ್ತಿದ್ದು, ಪಿಎಸೈ ವರ್ಗಾವಣೆಯಲ್ಲಿ ಭಾರಿ ಪ್ರಮಾಣದ ದುಡ್ಡಿನ ಅವ್ಯವಹಾರ ನಡೆದಿದೆ ಎಂದು ಪೊಲೀಸ್‌ ವಲಯದಲ್ಲೇ ಮಾತುಗಳಿವೆ.