2025-26ನೇ ಸಾಲಿನ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಯನ್ನು ಸುಪ್ರಸಿದ್ಧ ಸಂಗೀತ ಕಲಾವಿದ ಬೆಂಗಳೂರಿನ ಪಂ. ಪರಮೇಶ್ವರ ಹೆಗಡೆ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು ₹ 1 ಲಕ್ಷ ಮೊತ್ತ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಧಾರವಾಡ:

ಸ್ವರ ಸಾಮ್ರಾಟ್‌ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ರಾಜಗುರು ಅವರ 106ನೇ ಜನ್ಮದಿನಾಚರಣೆ ಅಂಗವಾಗಿ ಆ. 24ರಂದು ಸಂಜೆ 5.30ಕ್ಕೆ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರೀಯ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ.

2025-26ನೇ ಸಾಲಿನ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಯನ್ನು ಸುಪ್ರಸಿದ್ಧ ಸಂಗೀತ ಕಲಾವಿದ ಬೆಂಗಳೂರಿನ ಪಂ. ಪರಮೇಶ್ವರ ಹೆಗಡೆ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು ₹ 1 ಲಕ್ಷ ಮೊತ್ತ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಹಾಗೆಯೇ, ಇಬ್ಬರು ಯುವ ಕಲಾವಿದರನ್ನು ಯುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಬೆಂಗಳೂರಿನ ಯುವ ಸಂಗೀತ ಕಲಾವಿದರಾದ ಅನಿರುದ್ಧ ಐತಾಳ ಹಾಗೂ ಮೈಸೂರಿನ ಸರೋದ ವಾದಕ ಸಚಿನ್ ಹಂಪೆ ಅವರು ಆಯ್ಕೆಯಾಗಿದ್ದಾರೆ. ಈ ಕಲಾವಿದರಿಗೆ ತಲಾ ₹ 25000 ಮೊತ್ತದ ಬಹುಮಾನ ಹಾಗೂ ಪ್ರಶಸ್ತಿ ಫಲಕವಿದೆ. ಪಂ. ಎಂ. ವೆಂಕಟೇಶಕುಮಾರ ಸಮಾರಂಭ ಉದ್ಘಾಟಿಸಲಿದ್ದು ಪಂ. ಕೈವಲ್ಯಕುಮಾರ ಗುರವ ಅಧ್ಯಕ್ಷತೆ ವಹಿಸುವರು. ಕೆ.ಎಚ್. ಚನ್ನೂರ, ಭಾರತಿದೇವಿ ರಾಜಗುರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಹಾಗೂ ಸರೋದವಾದನ ನಡೆಯಲಿದೆ ಎಂದು ಟ್ರಸ್ಟ್ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.