ಪ್ರಸಿದ್ಧಿಗಾಗಿ ಅಲ್ಲ, ಸಿದ್ಧಿಗಾಗಿ ಹಾಡಿದವರು ಪಂ. ರಾಜಶೇಖರ ಮನಸೂರ: ಡಾ. ಎಂ. ವೆಂಕಟೇಶಕುಮಾರ

| Published : May 27 2024, 01:03 AM IST

ಪ್ರಸಿದ್ಧಿಗಾಗಿ ಅಲ್ಲ, ಸಿದ್ಧಿಗಾಗಿ ಹಾಡಿದವರು ಪಂ. ರಾಜಶೇಖರ ಮನಸೂರ: ಡಾ. ಎಂ. ವೆಂಕಟೇಶಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ ಕ್ಷೇತ್ರದೊಂದಿಗೆ ಸಂಗೀತ ಕ್ಷೇತ್ರದಲ್ಲಿಯೂ ಬಹುದೊಡ್ಡ ಸಾಧನೆ ಮಾಡಿದವರು ಪಂ. ರಾಜಶೇಖರ ಮನಸೂರ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಗಾಯಕ ಡಾ. ಎಂ. ವೆಂಕಟೇಶಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಪಂ. ರಾಜಶೇಖರ ಮನಸೂರ ಪ್ರಸಿದ್ಧಿಗಾಗಿ ಹಾಡಿದವರಲ್ಲ, ತಮ್ಮ ಇಡೀ ಜೀವನ ಸಿದ್ಧಿಯಾಗಿ ಸಂಗೀತವನ್ನು ಆರಾಧಿಸಿದವರು. ಅವರು ನಿಷ್ಠುರರಂತೆ ಕಂಡರೂ ಸ್ವಚ್ಛ ಹೃದಯದ ಮನಸ್ಸಿನ ಸ್ವಭಾವದವರು. ಶೈಕ್ಷಣಿಕ ಕ್ಷೇತ್ರದೊಂದಿಗೆ ಸಂಗೀತ ಕ್ಷೇತ್ರದಲ್ಲಿಯೂ ಬಹುದೊಡ್ಡ ಸಾಧನೆ ಮಾಡಿದವರು ಪಂ. ರಾಜಶೇಖರ ಮನಸೂರ ಎಂದು ಪದ್ಮಶ್ರೀ ಪುರಸ್ಕೃತ ಹಿರಿಯ ಗಾಯಕ ಡಾ. ಎಂ. ವೆಂಕಟೇಶಕುಮಾರ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಕುಮಾರೇಶ್ವರ ಕಲ್ಚರಲ್ ಸೊಸೈಟಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಪಂ. ರಾಜಶೇಖರ ಮನಸೂರ ಅವರ 2ನೇ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಸಂಗೀತೋತ್ಸವ ಉದ್ಘಾಟಿಸಿ ಮಾತನಾಡಿದರು.

ಮನಸೂರ ಅವರ ಜೀವನದುದ್ದಕ್ಕೂ ಅವರ ನೆರಳಿನಂತೆ ಬಾಳಿ, ಜೈಪುರ ಅತ್ರೌಲಿ ಘರಾಣೆಯ ಸಂಗೀತ ಪರಂಪರೆ ಬೆಳೆಸಿದರು ಎಂದರು.

ಧಾರವಾಡದ ಸಂಗೀತ ಪರಂಪರೆಯು ಅವಿಚ್ಛಿನ್ನವಾದುದು, ಅದು ಅತ್ಯಂತ ಶ್ರೇಷ್ಠತೆಯಿಂದ ಮುಂದುವರಿದಿದೆ. ನಮ್ಮ ಹಿಂದೂಸ್ತಾನಿ ಪರಂಪರೆಯು ಇಡೀ ದೇಶವೇ ಧಾರವಾಡದ ಕಡೆಗೆ ತಿರುಗಿ ನೋಡುವಂತೆ ಮಾಡಿದವರು ಅವರು. ಪಂ.ಬಸವರಾಜ ರಾಜಗುರು, ಪಂ. ಪಂಚಾಕ್ಷರಿ ಗವಾಯಿಗಳು, ಪಂ. ಪುಟ್ಟರಾಜ ಗವಾಯಿಗಳು, ಭಾರತರತ್ನ ಪಂ.ಭೀಮಶೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್‌ ಅವರಂತಹ ಮೇರು ಗಾಯಕರಿಂದಾಗಿ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ಗಾಯಕ ಡಾ. ಶಾಂತಾರಾಮ ಹೆಗಡೆ ಅಭಿಪ್ರಾಯ ಪಟ್ಟರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಪ್ರಾಧ್ಯಾಪಕಿ ಡಾ. ಜಯದೇವಿ ಜಂಗಮಶೆಟ್ಟಿ ಮಾತನಾಡಿ, ಡಾ. ರಾಜಶೇಖರ ಮನಸೂರರು ನೋಡಲು ಆಧುನಿಕರಂತೆ ಕಂಡರೂ ನಮ್ಮ ನಾಡಿನ ಸಂಪ್ರದಾಯಗಳನ್ನು ಬಹಳ ಪ್ರೀತಿಯಿಂದ ಆರಾಧಿಸುತ್ತಿದ್ದರು. ಅವರು ತಮ್ಮ ಎಲ್ಲ ಶಿಷ್ಯರನ್ನು ತಾಯಿಯ ಮಮತೆಯಂತೆ ಕಂಡರು. ಅವರೊಬ್ಬ ಇಂಗ್ಲೀಷ್ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದರೂ ಜೈಪೂರ ಘರಾಣೆಯ ಕೊಂಡಿಯಾಗಿ ಸಂಗೀತ ಪರಂಪರಿ ಮುಂದುವರಿಸುವಲ್ಲಿ ಬಹಳ ದೊಡ್ಡ ಪಾತ್ರ ನಿರ್ವಹಿಸಿದರು ಎಂದರು.

ಹಾರ್ಮೊನಿಯಂ ಕಲಾವಿದ ಯು.ಎಂ. ನಿರಂಜನಮೂರ್ತಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾರ್ಜುನ ಚಿಕ್ಕಮಠ, ಸಂಗೀತ ಕ್ಷೇತ್ರದಲ್ಲಿ ಡಾ. ರಾಜಶೇಖರ ಮನಸೂರ ಮಾಡಿದ ಅನುಪಮ ಸಾಧನೆ ಇಂದಿನ ಮಕ್ಕಳಿಗೆ ತಿಳಿಸಬೇಕಿದೆ. ಅವರ ಸ್ಮರಣೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ ಎಂದರು.

ಸಂಗೀತಾ ರಾಜಶೇಖರ ಮನಸೂರ ವೇದಿಕೆಯಲ್ಲಿದ್ದರು. ರವಿ ಕುಲಕರ್ಣಿ ನಿರೂಪಿಸಿದರು. ಸುಜಾತಾ ಗುರವ ಸ್ವಾಗತಿಸಿದರು. ಪ್ರಕಾಶ ಬಾಳಿಕಾಯಿ ವಂದಿಸಿದರು. ಪೂರ್ವಿ ಜೆ. ಪ್ರಾರ್ಥಿಸಿದರು. ಸಂಗೀತೋತ್ಸವದಲ್ಲಿ ಪಂ. ರಾಜಶೇಖರ ಮನಸೂರ ಅವರ ಶಿಷ್ಯರಾದ ಡಾ. ಚಂದ್ರಿಕಾ ಕಾಮತ, ಡಾ. ಮೃತ್ಯುಂಜಯ ಅಗಡಿ, ಡಾ. ಮಿಥುನ ಚಕ್ರವರ್ತಿ, ಡಾ. ಜಯದೇವಿ ಜಂಗಮಶೆಟ್ಟಿ ಹಾಗೂ ಯುವ ಗಾಯಕಿ ಜೆ. ಪೂರ್ವಿ ಗಾಯನ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಪಂ. ಅಲ್ಲಮಪ್ರಭು ಕಡಕೋಳ, ಉಸ್ತಾದ್ ನಿಸ್ಸಾರ ಅಹಮ್ಮದ್ ಹಾಗೂ ಪ್ರಸಾದ ಮಡಿವಾಳರ ಮತ್ತು ಹಾರ್ಮೊನಿಯಂದಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ ಹಾಗೂ ಬಸವರಾಜ ಹಿರೇಮಠ ಸಾಥ್ ಸಂಗತ ನೀಡಿದರು.