ಸಾರಾಂಶ
ಕನ್ನಡಪ್ರಭ ವಾರ್ತೆ ಹುಲಸೂರು
ಪೂಜ್ಯ ವಿರೂಪಾಕ್ಷಯ್ಯ ಸ್ವಾಮಿ ಅವರು ವೇದದ ರುದ್ರಮಂತ್ರಗಳಿಗೆ ಸಂಗೀತ ಸ್ವರ ಸಂಯೋಜನೆ ಮಾಡಿ ಸಂಗೀತ ರುದ್ರವನ್ನು ಜಾರಿಗೆ ತಂದ ದೇಶದ ಮೊಟ್ಟಮೊದಲ ಸಂಗೀತ ವಿದ್ವಾಂಸರಾಗಿದ್ದರು ಎಂದು ಸಂಗೀತ ವಿದ್ವಾಂಸಕ ಡಾ. ಕೇಶವರಾವ ಸೂರ್ಯವಂಶಿ ನುಡಿದರು.ಭಾನುವಾರ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮದಲ್ಲಿ ನಡೆದ ಸಂಗೀತ ರುದ್ರೇಶ್ವರ 2ನೇ ಜಾತ್ರಾ ಮಹೋತ್ಸವ, ವೀರಮ್ಮಾ ವಿರೂಪಾಕ್ಷಯ್ಯ ಸ್ವಾಮಿಗಳ 12ನೇ ಪುಣ್ಯ ಸಂಸ್ಮರಣೋತ್ಸವ ಕಲ್ಯಾಣ ಕರ್ನಾಟಕ 5ನೇ ಪ್ರಾಂತಿಯ ಸಂಗೀತ ಸಮ್ಮೇಳನ ಮತ್ತು ಪಂ.ವಿರೂಪಾಕ್ಷ ಸಮ್ಮಾನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಾಗಿ ಮಾತನಾಡಿದರು.
ದೇಶದ ಅನೇಕ ಕಡೆಗಳಲ್ಲಿ 65 ವರ್ಷ ಕಾಲ ತಮ್ಮ ಸಂಗೀತ ರುದ್ರ ಕಾರ್ಯಕ್ರಮಗಳನ್ನು ನೀಡಿ ಜಿಲ್ಲೆಗೆ ನಾಡಿಗೆ ಅಪಾರ ಕೀರ್ತಿ ತಂದಿರುವ ಮಹಾನ ಸಂಗೀತ ಸಂಶೋದಕರಾಗಿರುವರು. ಅನೇಕ ನಾಟಕಗಳಿಗೆ ನಟರಾಗಿ ಸಂಗೀತ ನಿರ್ದೇಶಕರಾಗಿ ರಂಗಭೂಮಿಗೆ ನೀಡಿದ ಕೊಡುಗೆ ಅಪಾರವಾಗಿದೆ. 1942ರಲ್ಲಿ ಗೋರಟಾದಲ್ಲಿ ಶಾರದಾ ಸಂಗೀತ ವಿದ್ಯಾಲಯ ಸ್ಥಾಪಿಸಿ ಸಾವಿರಾರು ಜನ ವಿದ್ಯಾರ್ಥಿಗಳಿಗೆ ಸಂಗೀತ ಕಲಿಕೆ ಅನಕೂಲ ಮಾಡಿಕೊಟ್ಟಿದ್ದಾರೆ ಎಂದರು.ಇನ್ನೋರ್ವ ಪ್ರಶಸ್ತಿ ಪುರಸ್ಕೃತರಾದ ಖ್ಯಾತ ಗಾಯಕರಾದ ಉಸ್ತಾದ್ ಶೇಖ್ ಹನ್ನುಮಿಯ್ಯಾ ಮಾತನಾಡಿ, ನನ್ನ ಸಂಗೀತ ಗುರುಗಳು ವಿರೂಪಾಕ್ಷಯ್ಯನವರು ಅವರ ಆಶೀರ್ವಾದದಿಂದ ನಾನು ಸಂಗೀತ ಕ್ಷೇತ್ರದಲ್ಲಿ ಇಷ್ಟೊಂದು ಬೆಳವಣಿಗೆ ಸಾಧ್ಯವಾಯಿತು. ಇಂದು ಅವರ ಹೆಸರಿನ ಪ್ರಶಸ್ತಿಯು ನನಗೆ ದೊರಕಿರುವುದು ನನ್ನ ಅಹೋಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ಡಾ. ರಾಜಶೇಖರ ಶಿವಾಚಾರ್ಯರು ಗೋರ್ಟಾ ಅವರು ಚಾರಿತ್ರಿಕ ಇತಿಹಾಸವನ್ನು ಎಳೆ ಎಳೆಯಾಗಿ ಬಿಡಿಸಿ ಪ್ರಾಚೀನ ಗೋರಟಾ ಕಲೆ, ಸಾಹಿತ್ಯ, ಸಂಗೀತ ವಿದ್ಯೆಗಳ ಬಹುದೊಡ್ಡ ವಿದ್ಯಾಕೇಂದ್ರವಾಗಿ ಪ್ರಸಿದ್ದವಾಗಿದ್ದು ಶ್ರೀ ಸಂಗೀತ ರುದ್ರೇಶ್ವರ ದೇವಾಲಯ ಪ್ರಾಚೀನ ರುದ್ರೇಶ್ವರರ ಪ್ರತಿರೂಪವಾಗಿದೆ. ಅಂದಿನ ಘಟಿಕಸ್ಥಾನ ಮಾದರಿಯಲ್ಲಿ ಇಲ್ಲೊಂದು ಸಂಗೀತದ ವಿದ್ಯಾಕೇಂದ್ರ ತಲೆ ಎತ್ತಬೇಕಾಗಿದೆ. ನೆನೆಗುದಿಗೆ ಬಿದ್ದಿರುವ ಪ್ರಾದೇಶಿಕ ಸಂಗೀತ ಅಧ್ಯಯನ ಕೇಂದ್ರ ಪ್ರಾರಂಭಿಸಬೇಕೆಂದು ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದರಲ್ಲದೆ ಬರುವ ಮುಂದಿನ ವರ್ಷದಲ್ಲಿ ಸಂಗೀತ ರುದ್ರೇಶ್ವರ 3ನೇ ಜಾತ್ರೆಯಲ್ಲಿ ನೂತನ ಮಹಾರಥೋತ್ಸವ ನಡೆಸಲಾಗುವುದು. ಶ್ರಾವಣದ ನಂತರ ನೂತನ ರಥದ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದೆಂದು ಶ್ರೀಗಳು ಹೇಳಿದರು.ಖ್ಯಾತ ಸಂಗೀತ ವಿದ್ವಾಂಸ ಡಾ.ಕೇಶವರಾವ ಸೂರ್ಯವಂಶಿ ಮತ್ತು ಉಸ್ತಾದ ಶೇಖ್ ಹನ್ನುಮಿಯ್ಯಾರವರನ್ನು ಪಂ. ವಿರೂಪಾಕ್ಷ ಸಮ್ಮಾನ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಯಿತ್ತು. ಅಭಿನಂದನಾ ನುಡಿಯನ್ನು ಖ್ಯಾತ ಸಂಗೀತ ವಿದ್ವಾಂಸ ಡಾ.ಸಿದ್ದಾರಾಮಯ್ಯ ಸ್ವಾಮಿ ಗೋರಟಾ ನುಡಿದರು.
ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಅಧಿಪತಿಗಳಾದ ಕರುಣಾದೇವಿ ಮಾತಾ ಕಾರ್ಯಕ್ರಮ ಉದ್ಘಾಟಿಸಿದರು.ರಾಜ್ಯ ದಿಶಾ ಕಮಿಟಿ ಸದಸ್ಯ ಶಿವಯ್ಯಾ ಸ್ವಾಮಿ, ಜೋತಿಷ್ಯ ಪಂಡಿತ ಗಂಗಾಧರ ಸ್ವಾಮಿ, ಜಿಲ್ಲಾ ಅಂಚೆ ಇಲಾಖೆ ನಿವೃತ ಅಧಿಕಾರಿ ಗುರನಾಥ ಅಕ್ಕಣ್ಣ ಮಾತನಾಡಿದರು.
ಡಿ.ವಾಯ್. ಬಿರಾದಾರ, ಶರಣಮ್ಮ ಮುದ್ದಾ, ಡಿವೈಎಸ್ಪಿ ಗಂಗಾಧರ ಸ್ವಾಮಿ, ಭೂದಾನಿ ಕಮಳಬಾಯಿ ಅಕ್ಕಣ್ಣ, ಕರಬಸಪ್ಪಾ ಅಕ್ಕಣ್ಣ, ಯುವ ಮುಖಂಡರಾದ ಮಹಾದೇವ ಪಟ್ನೆ, ರಾಜಕುಮಾರ ಬುಧೇರಾ, ಶಿವಕುಮಾರ ಪಾಟೀಲ್, ಕಂಟೆಪ್ಪಾ ಭಂಗೋರೆ, ಸೋಮೇಶ್ವರ ಬಿರಾದಾರ ಮುಖ್ಯ ಅತಿಥಿಗಳಾಗಿದ್ದರು ಡಾ. ರುದ್ರೇಶ್ವರ ಸ್ವಾಮಿ ಸ್ವಾಗತಿಸಿದರು, ಬಸವರಾಜ ಹಾಲಹಳ್ಳಿ ನಿರೂಪಿಸಿದರೆ ಚಂದ್ರಕಾಂತ ಸ್ವಾಮಿ ಚಂದನಹಳ್ಳಿ ವಂದಿಸಿದರು.