ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ನ್ಯಾಯಾಲಯದಲ್ಲಿ ದಾಖಲಾಗಿರುವ ಮತ್ತು ಇತರ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಶನಿವಾರ ಪುತ್ತೂರಿನ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು ೧,೧೮೫ ಪ್ರಕರಣಗಳ ಪೈಕಿ ೫೩೭ ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲಾಗಿದೆ. ಫಲಾನುಭವಿಗಳಿಗೆ ೨,೩೩,೦೫,೭೮೨ ರು. ಪರಿಹಾರ ಮೊತ್ತವನ್ನು ವಿತರಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ, ಜನನ ಮರಣ ನೋಂದಣಿ ಸಹಿತ ಚೆಕ್ ಬೌನ್ಸ್, ವಿಮಾ ಹಣದ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊಂದಿಗೆ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸರಿತಾ ಡಿ. ಅವರ ನ್ಯಾಯಾಲಯದಲ್ಲಿ ೫೧ ಪ್ರಕರಣಗಳಲ್ಲಿ ೧೭ ಇತ್ಯರ್ಥಗೊಂಡಿದ್ದು ೫೪,೬೮,೭೭೦ ರು. ಪರಿಹಾರ ವಿತರಣೆಗೆ ಆದೇಶ ಆಗಿದೆ. ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಪ್ರಿಯ ರವಿ ಜೋಗಲೇಕರ್ ಅವರ ನ್ಯಾಯಾಲಯದಲ್ಲಿ ೧೨೭ ಪ್ರಕರಣಗಳಲ್ಲಿ ೫೪ ಇತ್ಯರ್ಥಗೊಂಡಿದ್ದು ೩೬,೫೭,೦೦೦ ರು. ಪರಿಹಾರ ವಿತರಣೆಗೆ ಆದೇಶ ಆಗಿದೆ.
ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಮತ್ತು ಜೆಎಮ್‌ಎಫ್‌ಸಿಯೂ ಆಗಿರುವ ಪ್ರಿಯಾ ಜೋವಲೆಕರ್ ಅವರ ನ್ಯಾಯಾಲಯದಲ್ಲಿ ೧೫೮ ಪ್ರಕರಣಗಳಲ್ಲಿ ೬೩ ಪ್ರಕರಣ ಇತ್ಯರ್ಥಗೊಂಡಿದ್ದು, ೭೨,೭೯,೮೦೦ ರು. ಪರಿಹಾರ ವಿತರಿಸಲು ಆದೇಶಿಸಿದರು.ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಂಎಫ್‌ಸಿ ನ್ಯಾಯಾಧೀಶೆ ಅರ್ಚನಾ ಕೆ. ಉನ್ನಿತಾನ್ ಅವರ ನ್ಯಾಯಾಲಯದಲ್ಲಿ ೩೦೦ ಪ್ರಕರಣಗಳಲ್ಲಿ ೩೮ ಪ್ರಕರಣಗಳು ಇತ್ಯರ್ಥಗೊಂಡಿದ್ದು ೫೨,೪೪,೯೩೪ ರು. ವಿತರಣೆಗೆ ಆದೇಶ ಆಗಿದೆ.
ಅಪರ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ಶಿವಣ್ಣ ಎಚ್.ಆರ್ ಅವರ ನ್ಯಾಯಾಲಯದಲ್ಲಿ ೩೧೮ ಪ್ರಕರಣಗಳಲ್ಲಿ ೧೮೫ ಇತ್ಯರ್ಥಗೊಂಡಿದ್ದು, ೨೬,೮೫೦ರುಪಾಯಿ ವಿತರಣೆಗೆ ಆದೇಶ ಆಗಿದೆ.೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ಯೋಗೇಂದ್ರ ಶೆಟ್ಟಿ ಅವರ ನ್ಯಾಯಾಲಯದಲ್ಲಿ ೨೩೧ ಪ್ರಕರಣಗಳಲ್ಲಿ ೧೮೦ ಪ್ರಕರಣ ಇತ್ಯರ್ಥಗೊಂಡಿದ್ದು, ೧೬, ೨೮,೪೨೮ ರು. ವಿತರಣೆಗೆ ಆದೇಶ ಆಗಿದೆ.
ಪ್ರಕರಣಗಳ ಇತ್ಯರ್ಥಕ್ಕೆ ಸಂಧಾನಕಾರರಾಗಿ ನ್ಯಾಯವಾದಿಗಳಾದ ಅಶ್ವಿನಿ ರೈ, ಚಂದ್ರಾವತಿ ಸಿ.ಟಿ., ಮಿಥುನ್ ರೈ, ಸುಶ್ಮಿತಾ, ರಾಜೇಶ್ವರಿ ಆಚಾರ್ಯ ಅವರು ಸಹಕರಿಸಿದರು.ಸದರಿ ವ್ಯಾಜ್ಯಗಳಲ್ಲಿ ಸಂಧಾನಕಾರ ವಕೀಲರನ್ನು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಅವರು ನೇಮಕ ಮಾಡಿದ್ದರು.