ಪಿಯು ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶ ಭಾರೀ ಕುಸಿತ?

| Published : May 27 2024, 01:07 AM IST / Updated: May 27 2024, 07:25 AM IST

ಸಾರಾಂಶ

ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಏರುತ್ತಾ ಸಾಗಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಬಾರಿ ತೀವ್ರ ಕುಸಿತವಾದ ಹಿನ್ನೆಲೆಯಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣವೂ ಭಾರೀ ಸಂಖ್ಯೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ.

 ಬೆಂಗಳೂರು :  ರಾಜ್ಯದಲ್ಲಿ ನಾಲ್ಕು ವರ್ಷಗಳಿಂದ ಏರುತ್ತಾ ಸಾಗಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಬಾರಿ ತೀವ್ರ ಕುಸಿತವಾದ ಹಿನ್ನೆಲೆಯಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣವೂ ಭಾರೀ ಸಂಖ್ಯೆಯಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ಮರುದಿನದಿಂದಲೇ (ಮೇ11) ಪದವಿ ಪೂರ್ವ ಶಿಕ್ಷಣ ಇಲಾಖೆ 2024-25ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಆರಂಭಿಸಿದ್ದು, ಜೂನ್ 1ರಿಂದ ತರಗತಿಗಳು ಆರಂಭವಾಗಲಿವೆ.

ಆದರೆ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದ ಪರಿಣಾಮ ಪ್ರತಿಷ್ಠಿತ ಕಾಲೇಜುಗಳನ್ನು ಹೊರತುಪಡಿಸಿ ಮಧ್ಯಮ ಕ್ರಮಾಂಕದ ಇತರೆ ಖಾಸಗಿ ಕಾಲೇಜುಗಳ ಜೊತೆಗೆ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ.

ಪ್ರತೀ ವರ್ಷ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಮಕ್ಕಳಲ್ಲಿ ಸುಮಾರು ಶೇ.95ರಷ್ಟು ಮಂದಿ ಪಿಯುಸಿಗೆ ಪ್ರವೇಶ ಪಡೆಯುತ್ತಾರೆ. ಉಳಿದವರು ಐಟಿಐ, ಡಿಪ್ಲೊಮಾ ಮತ್ತಿತರ ಕೋರ್ಸುಗಳಿಗೆ ಸೇರುತ್ತಾರೆ. ಕೆಲವರು ಓದು ನಿಲ್ಲಿಸುತ್ತಾರೆ. 2022-23 ಸೇರಿದಂತೆ ಅದರ ಹಿಂದಿನ ಮೂರು-ನಾಲ್ಕು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ಏರುಗತಿಯಲ್ಲೇ ಸಾಗಿದ್ದರಿಂದ ಪ್ರತೀ ವರ್ಷ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯುವವರ ಸಂಖ್ಯೆ ಸುಮಾರು 7 ಲಕ್ಷ ವರೆಗೂ ತಲುಪಿತ್ತು.

ಆದರೆ, ಈ ಬಾರಿ ಶೇ.10ರಷ್ಟು ಫಲಿತಾಂಶ ಕುಸಿತದಿಂದ ಪಿಯು ದಾಖಲಾತಿ ಆರು ಲಕ್ಷ ದಾಟುವುದೂ ಕಷ್ಟವಾಗಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪಾಸಾಗಿರುವ 6.31 ಲಕ್ಷ ಮಕ್ಕಳಲ್ಲಿ ಶೇ.95ರಷ್ಟು ಮಂದಿ ಪಿಯುಗೆ ದಾಖಲಾದರೂ ಸುಮಾರು 5.90 ಲಕ್ಷ ಜನ ಆಗಬಹುದು. ಹಾಗಾಗಿ ಪಿಯು ಕಾಲೇಜುಗಳು ಈ ದಾಖಲಾತಿ ಕೊರತೆಯನ್ನು ಸರಿದೂಗಿಸಿಕೊಳ್ಳಲು ಎಸ್ಸೆಸ್ಸೆಲ್ಸಿ ಪರೀಕ್ಷೆ -2 ಫಲಿತಾಂಶಕ್ಕಾಗಿ ಕಾಯುತ್ತಿವೆ. ಇಲ್ಲಿ ಪ್ರತೀ ವರ್ಷದಂತೆ ಸರಾಸರಿ 30ರಿಂದ 40ರಷ್ಟು ಮಂದಿ ಪಾಸಾದರೂ 60 ರಿಂದ 70 ಸಾವಿರ ವಿದ್ಯಾರ್ಥಿಗಳು ಪಿಯು ಪ್ರವೇಶ ಪಡೆಯಬಹುದು. ಆದರೂ ಈ ಬಾರಿ ದಾಖಲಾತಿ ಸಂಖ್ಯೆ 6.5 ಲಕ್ಷ ತಲುಪಿದರೆ ಹೆಚ್ಚೆನ್ನಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಫೇಲಾಗಿರುವ 2 ಲಕ್ಷಕ್ಕೂ ಹೆಚ್ಚು ಮಂದಿ ಪರೀಕ್ಷೆ 2 ತೆಗೆದುಕೊಂಡು ಶೇ.50 ಕ್ಕಿಂತ ಹೆಚ್ಚು ಫಲಿತಾಂಶ ಬಂದರೆ ಮಾತ್ರ ದಾಖಲಾತಿ ಕೊರತೆ ನೀಗಿಸಬಹುದು.

ವಿಜ್ಞಾನ, ವಾಣಿಜ್ಯ ಕೋರ್ಸಿಗೆ ಬೇಡಿಕೆ

ಈ ಬಾರಿಯೂ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಕೋರ್ಸುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ವಿವಿಧ ಪಿಯು ಕಾಲೇಜುಗಳ ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಕಲಾ ವಿಭಾಗದ ವಿಷಯಗಳಿಗೆ ಬೇಡಿಕೆ ಕಡಿಮೆಯಾಗುತ್ತಾ ಸಾಗಿದೆ. ಹೆಚ್ಚಿನ ಮಕ್ಕಳು ವಿಜ್ಞಾನ ವಿಭಾಗದ ಪಿಸಿಎಂಬಿ ಮತ್ತು ಪಿಸಿಎಂಸಿ ಕಾಂಬಿನೇಷನ್‌ಗೆ ಪ್ರವೇಶ ಪಡೆಯುತ್ತಿದ್ದಾರೆ. ನಂತರ ವಾಣಿಜ್ಯ ವಿಭಾಗದ ಕಂಪ್ಯೂಟರ್ ಸೈನ್ಸ್ ಕೋರ್ಸು ಒಳಗೊಂಡ ಸಿಇಬಿಎ ಮತ್ತು ಎಸ್‌ಇಬಿಎ ಕಾಂಬಿನೇಷನ್‌ಗೆ ಹೆಚ್ಚು ಪ್ರವೇಶ ಪಡೆಯುತ್ತಿದ್ದಾರೆ ಎಂದು ಬಸವನಗುಡಿಯ ಗಿರಿಜಾಂಬ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲರಾದ ಜಿ.ನಾಗಣ್ಣ ತಿಳಿಸಿದರು.

ಎಚ್ ಎಸ್ಆರ್ ಲೇಔಟ್ ಸರ್ಕಾರಿ ಪಿಯು ಕಾಲೇಜಿನ ದಾಖಲಾತಿ ವಿಭಾಗದ ಸಿಬ್ಬಂದಿ ನೀಡಿದ ಮಾಹಿತಿ ಪ್ರಕಾರ ಕೋವಿಡ್ ವರ್ಷದ ಬಳಿಕ ತಮ್ಮ ಕಾಲೇಜಿನಲ್ಲಿ ಏರುಗತಿಯಲ್ಲಿ ಸಾಗಿದ್ದ ದಾಖಲಾತಿ ಈ ಬಾರಿ ಕುಸಿಯುವಂತಿದೆ. ಕಳೆದ ವರ್ಷ ಈ ವೇಳೆಗಾಗಲೆ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಬಹುತೇಕ ಸೀಟುಗಳು ಭರ್ತಿಯಾಗಿದ್ದವು. ನಿರೀಕ್ಷೆಗೂ ಮೀರಿ ದಾಖಲಾತಿ ಆಗಿತ್ತು. ಈ ಬಾರಿ ಕಳೆದ ಬಾರಿಗಿಂತ ಕೊಂಚ ಕಡಿಮೆ ಎಂದರು.

ಖಾಸಗಿ ಕಾಲೇಜುಗಳಾದ ನಗರದ ಶೇಷಾದ್ರಿಪುರಂ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು ಸೇರಿದಂತೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಮಾತ್ರ ಇರುವ ಸೀಟುಗಳು ಭರ್ತಿಯಾಗಿವೆ. ಆದರೆ ಕಳೆದ ಬಾರಿ ಇರುವ ಸೀಟಿಗಿಂತ ದುಪ್ಪಟ್ಟು ಅರ್ಜಿ ಬಂದಿದ್ದವು, ಈ ಬಾರಿ ಅಷ್ಟು ಬೇಡಿಕೆ ಇಲ್ಲ ಎನ್ನುತ್ತಾರೆ ಆ ಕಾಲೇಜಿನ ಬೋಧಕ ಸಿಬ್ಬಂದಿ. ಉಳಿದ ಮಧ್ಯಮ ಕ್ರಮಾಂಕದ ಕಾಲೇಜುಗಳಲ್ಲಿ ಇರುವ ಸೀಟಿನಲ್ಲೆ ಇನ್ನು ಶೇ.20ರಷ್ಟು ಭರ್ತಿಯಾಗಿಲ್ಲ ಎಂದು ಆಡಳಿತ ಮಂಡಳಿಗಳು ಹೇಳುತ್ತಿವೆ.ಕೋಟ್‌:

ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತ ಪಿಯು ದಾಖಲಾತಿ ಮೇಲೆ ಪರಿಣಾಮ ಬೀರಲಿದೆ. ದಾಖಲಾತಿ ಕಡಿಮೆಯಾಗುವುದರಿಂದ ಬಹಳಷ್ಟು ಕಾಲೇಜುಗಳಲ್ಲಿ ಉಪನ್ಯಾಸಕರ ಸಂಖ್ಯೆ ಹೆಚ್ಚುವರಿಗೊಳ್ಳಲಿದೆ‌. ಹಾಗಾಗಿ ಪಿಯು ವ್ಯಾಸಂಗಕ್ಕೆ ಈಗಾಗಲೇ ಎನ್ಸಿಇಆರ್ಟಿ ಪಠ್ಯ ಅಳವಡಿಸಿರುವ ಸರ್ಕಾರ, ಎನ್ಸಿಆರ್ಟಿ ಮಾನದಂಡವನ್ನೇ ಅನುಸರಿಸಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಅನುಪಾತವನ್ನೂ 1:80 ರಿಂದ 1:40ಕ್ಕೆ ಇಳಿಸಬೇಕು.

- ನಿಂಗೇಗೌಡ, ರಾಜ್ಯ ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ