ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರಾಜ್ಯ ಸರ್ಕಾರ ೨೦೨೫-೨೬ ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದಂತೆ ತಾಲೂಕಿನ ತೆರಕಣಾಂಬಿ ಮೊರಾರ್ಜಿ ದೇಸಾಯಿ ವಸತಿ ಶಾಲೆ( ಹಿಂದುಳಿದ ವರ್ಗ) ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಪ್ರಥಮ ಪಿಯು ಕಾಲೇಜು ಆರಂಭವಾಗಲಿದ್ದು, ಮುಂದಿನ ವರ್ಷದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯು ಕಾಲೇಜು ಆರಂಭಕ್ಕೆ ಆದೇಶ ಹೊರ ಬಿದ್ದಿದೆ.೨೦೨೫-೨೬ ನೇ ಸಾಲಿನ ಆಯವ್ಯಯ ಕಂಡಿಕೆ-೧೭೫ ರನ್ವಯ ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗ ಹಾಗು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತೆರಕಣಾಂಬಿ ಸೇರಿದಂತೆ ರಾಜ್ಯದ ೩೧ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಯ್ಕೆ ಮಾಡಬೇಕು. ಆ ವಸತಿ ಶಾಲೆಯಲ್ಲಿ ಪದವಿ ಪೂರ್ವ ಶಿಕ್ಷಣಕ್ಕೆ ಉನ್ನತೀಕರಿಸಿ, ಪಿಯು ಕೋರ್ಸ್‌ಗಳನ್ನು (೧೧ ನೇ ಮತ್ತು ೧೨ ನೇ ತರಗತಿಗಳನ್ನು) ವಿಜ್ಞಾನ ವಿಷಯಗಳಲ್ಲಿ ಪಿಸಿಎಂಬಿ ಮತ್ತು ಪಿಸಿಎಂಸಿ ಸಂಯೋಜನೆಗಳಲ್ಲಿ ಪದವಿ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯ ನಿರ್ವಾಹಕ ನಿರ್ದೇಶಕರು ಮನವಿ ಸಲ್ಲಿಸಿದ್ದರು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯ ನಿರ್ವಾಹಕ ನಿರ್ದೇಶಕರ ಪ್ರಸ್ತಾವನೆ ಹಿನ್ನೆಲೆ ರಾಜ್ಯ ಸರ್ಕಾರ ಕಳೆದ ಜು.೩೧ ರಂದು ಆದೇಶ ಹೊರಡಿಸಿದ್ದು, ಆ ಆದೇಶದಲ್ಲಿ ತಾಲೂಕಿನ ತೆರಕಣಾಂಬಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ಸೇರಿದೆ.
ಪದವಿ ಪೂರ್ವ ಶಿಕ್ಷಣಕ್ಕೆ ಉನ್ನತೀಕರಿಸಿ ವಿಜ್ಞಾನ ವಿಷಯಗಳಾದ ಪಿಸಿಎಂಬಿ ಮತ್ತು ಪಿಸಿಎಂಸಿ ಸಂಯೋಜನೆಗಳಲ್ಲಿ ೧೧ ಮತ್ತು ೧೨ನೇ ತರಗತಿಗಳನ್ನು ಅನುಬಂಧ- ೧ ರಂತೆ ಸದರಿ ಕಾಲೇಜಿಗೆ ಅಗತ್ಯ ವಿವಿಧ ವೃಂದಗಳ ೧೮೬ ಹುದ್ದೆಗಳನ್ನು ಅನುಬಂಧ-೨ ರಂತೆ ಸೃಜಿಸಿ ಅನುಮೋದನೆ ನೀಡಿ ಆದೇಶಿಸಿದೆ.ಉನ್ನತೀಕರಿಸಿದ ವಸತಿ ಶಾಲೆಗೆ ಒಂದು ಅತಿಥಿ ಉಪನ್ಯಾಸಕರಿಗೆ ಮಾಸಿಕ ೧೮,೧೫೦ ರು.ನಂತೆ ೬ ಅತಿಥಿ ಉಪನ್ಯಾಸಕರುಗಳ ಹುದ್ದೆಗಳಿಗೆ ವರ್ಷದಲ್ಲಿ ೧೦ ತಿಂಗಳಿಗೆ ಸೀಮಿತಿಗೊಳಿಸಿ ವೇತನ ಬಾಬ್ತು ವೆಚ್ಚ ಮಾಡಲು ಆರ್ಥಿಕ ಇಲಾಖೆ ಕೂಡ ಅನುಮತಿ ನೀಡಿದೆ.
ಈ ವೆಚ್ಚವನ್ನು ವಸತಿ ಶಾಲೆಗಳಿಗೆ ಆಯಾ ವಸತಿ ಶಾಲೆಗಳ ನಿರ್ವಹಣಾ ಲೆಕ್ಕ ಶೀರ್ಷಿಕೆಯಡಿ ಭರಿಸುವುದ ಹಗು ಪರಿಶಿಷ್ಟ ಜಾತಿ(೧೫), ಪರಿಶಿಷ್ಟ ಪಂಗಡ(೭), ಹಿಂದುಗಳಿ ವರ್ಗಗಳ (೯) ಸೇರಿದಂತೆ ರಾಜ್ಯದ ೩೧ ವಸತಿ ಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿಸಿ ಉನ್ನತೀಕರಿಸಲು ಮತ್ತು ಪೂರಕವಾಗಿ ೧೮೬ ಹುದ್ದೆಗಳನ್ನು ಸೃಜಿಸಿ, ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ಅನುದಾನದ ಮಿತಿಯಲ್ಲಿಯೇ ವೆಚ್ಚವನ್ನು ಭರಿಸಿ ಅನುಷ್ಠಾನ ಗೊಳಿಸಲು ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ.ಬಜೆಟ್ ನಲ್ಲಿ ತೆರಕಣಾಂಬಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರಥಮ, ದ್ವಿತೀಯ ಕಾಲೇಜು ಘೋಷಣೆಯಾಗಿತ್ತು. ಪ್ರಸಕ್ತ ವರ್ಷದಿಂದಲೇ ಪ್ರಥಮ ಪಿಯುಸಿ ಆರಂಭವಾದರೆ ತಾಲೂಕಿನ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿದೆ.
ಎಚ್.ಎಂ.ಗಣೇಶ್ ಪ್ರಸಾದ್, ಶಾಸಕ