ಸಾರಾಂಶ
- ಕೋಟಿ ಕೋಟಿ ರುಪಾಯಿ ವೆಚ್ಚ ಮಾಡಿ ಕಾಲೇಜು ನಿರ್ಮಾಣ
- ಉಪನ್ಯಾಸಕರು ಇಲ್ಲದಿರುವ ಕಾಲೇಜಿಗೆ ಬರಲು ವಿದ್ಯಾರ್ಥಿಗಳ ಹಿಂದೇಟು- ಕಾಲೇಜು ಮಂಜೂರು ಮಾಡಿ ಉಪನ್ಯಾಸಕರನ್ನೇ ಮರೆತ ಪಿಯು ಇಲಾಖೆಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಕೆಕೆಆರ್ಡಿಬಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 2018 ರಲ್ಲಿ ಆರಂಭವಾದ 14 ಪಿಯು ಕಾಲೇಜುಗಳು ಅಕ್ಷರಶಃ ಅನಾಥವಾಗಿವೆ. ಐದು ವರ್ಷಗಳ ಕಾಲ ಇದನ್ನು ನಿರ್ವಹಣೆ ಮಾಡಿದ್ದ ಕೆಕೆಆರ್‌ಡಿಬಿ ಇದೀಗ ಅದನ್ನು ಸರ್ಕಾರಕ್ಕೆ ಒಪ್ಪಿಸಿದ್ದು, ಸರ್ಕಾರ (ಶಿಕ್ಷಣ ಇಲಾಖೆ) ಮುನ್ನಡೆಸಿಕೊಂಡು ಹೋಗಬೇಕಾಗಿದೆ. ಆದರೆ ಸರ್ಕಾರ ಇದರತ್ತ ಗಮನ ಹರಿಸದೇ ಇರುವುದರಿಂದ ಇಲ್ಲಿಯ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರ ಹಿಂದುಳಿದಿದೆ ಎನ್ನುವ ಕಾರಣ ಮುಂದಿಟ್ಟುಕೊಂಡು ಕೆಕೆಆರ್‌ಡಿಬಿ 2017- 18 ರಲ್ಲಿ ಈ ಭಾಗದ ರಾಯಚೂರು, ಬಳ್ಳಾರಿಯಲ್ಲಿ ತಲಾ 2, ಕೊಪ್ಪಳ ಜಿಲ್ಲೆಯಲ್ಲಿ 4, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯಲ್ಲಿ ತಲಾ 3 ಪಿಯು ಕಾಲೇಜುಗಳನನ್ನು ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಪ್ರಾರಂಭಿಸಿತ್ತು.ಈ 14 ಕಾಲೇಜುಗಳಿಗೆ ಕೋಟ್ಯಂತರ ರು. ವೆಚ್ಚದಲ್ಲಿ ಕೆಕೆಆರ್‌ಡಿಬಿ ಅನುದಾನದಿಂದ ಕಟ್ಟಡ ನಿರ್ಮಿಸಲಾಗಿತ್ತು. 18 ಲಕ್ಷ ವೆಚ್ಚದಲ್ಲಿ ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನೂ ಕಲ್ಪಿಸಲಾಗಿತ್ತು. ಅಷ್ಟೇ ಅಲ್ಲದೇ ಈ ಐದು ವರ್ಷ ಅತಿಥಿ ಉಪನ್ಯಾಸಕರ ನೇಮಕ ಮಾಡಿ ವೇತನವನ್ನೂ ನೀಡಲಾಗಿದೆ. ಮುಂದೆ ಈ ಕಾಲೇಜನ್ನು ಶಿಕ್ಷಣ ಇಲಾಖೆಯ ಮೂಲಕ ಸರ್ಕಾರವೇ ನಡೆಸಿಕೊಂಡು ಹೋಗಬೇಕೆಂಬ ಒಪ್ಪಂದವೂ ಇತ್ತೆನ್ನಲಾಗಿದೆ.
ಇದೀಗ ಆ ಐದು ವರ್ಷ ಮುಗಿದಿದ್ದು ಶಿಕ್ಷಣ ಇಲಾಖೆ ಈ ಕಾಲೇಜುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕಳೆದ ಎರಡು ವರ್ಷಗಳ ಹಿಂದೆಯೇ ಶಿಕ್ಷಣ ಇಲಾಖೆಯ ಸುಪರ್ದಿಗೆ ಕಾಲೇಜು ಬಂದಿವೆ. ಆದರೆ ಇನ್ನೂ ವರೆಗೆ ಇಲಾಖೆ ಒಬ್ಬ ಉಪನ್ಯಾಸಕರನ್ನೂ ನೇಮಕ ಮಾಡಿಲ್ಲ. ಪ್ರಾಚಾರ್ಯರೂ ಈ ಕಾಲೇಜುಗಳಿಗೆ ಇಲ್ಲ. ಇತರೆ ಸಿಬ್ಬಂದಿಗಳೂ ಇಲ್ಲ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಡು ದೇವರಿಗೇ ಪ್ರೀತಿ ಎಂಬಂತಾಗಿದೆ.2017- 18ರಲ್ಲಿ ಪ್ರಾರಂಭವಾಗಿರುವ ಈ ಕಾಲೇಜಿಗೆ ಕೆಕೆಆರ್‌ಡಿಬಿಯಿಂದ 2022ವರೆಗೂ ಅನುದಾನ ಬಂದು ಕಾಲೇಜು ನಡೆದುಕೊಂಡು ಹೋಗಿದೆ. ಅದಾದ ಮೇಲೆ ಸರ್ಕಾರ ಇದಕ್ಕೆ ನಯಾಪೈಸೆ ನೀಡಿಲ್ಲ ಮತ್ತು ಕಾಲೇಜಿಗೆ ಪ್ರಾಚಾರ್ಯರು, ಉಪನ್ಯಾಸಕರ ಹಾಗೂ ಇತರೆ ಸಿಬ್ಬಂದಿಯ ಹುದ್ದೆ ಮಂಜೂರಾತಿಯನ್ನೇ ನೀಡಿಲ್ಲ. ಪರಿಣಾಮ ಇಲ್ಲಿಗೆ ಯಾವುದೇ ಉಪನ್ಯಾಸಕರನ್ನು ನಿಯೋಜನೆ ಮಾಡುವಂತೆಯೂ ಇಲ್ಲ, ವರ್ಗಾವಣೆ ಮಾಡುವಂತೆ ಇಲ್ಲ. ಅಷ್ಟೇ ಯಾಕೆ. ಇಲ್ಲಿ ಒಂದು ಚಿಕ್ಕ ಸಾಮಗ್ರಿ ತೆಗೆದುಕೊಳ್ಳುವುದಕ್ಕೂ ಪಿಯು ಇಲಾಖೆಯಲ್ಲಿ ಅವಕಾಶವೇ ಇಲ್ಲ.
ಪರಿಣಾಮ ಈ ಹದಿನೆಂಟು ಕಾಲೇಜುಗಳು ಇದ್ದೂ ಇಲ್ಲದಂತಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸ್ಥಳೀಯ ಗ್ರಾಮಸ್ಥರೇ ಇಲ್ಲಿ ಉಪನ್ಯಾಸಕರಿಗೆ ಅಷ್ಟಿಷ್ಟು ನೀಡಿ, ಮಕ್ಕಳಿಗೆ ಪಾಠ ಮಾಡಿಸಿದ್ದಾರೆ. ಈ ವರ್ಷ ಈ ಕಾಲೇಜುಗಳನ್ನು ದೇವರೇ ಕಾಪಾಡಬೇಕು ಎನ್ನುವಂತಾಗಿದೆ.ಮರೆತ ಸರ್ಕಾರ:
ಕೆಕೆಆರ್ ಡಿಬಿಯಿಂದ ಐದು ವರ್ಷ ವಿಶೇಷ ಅನುದಾನದಲ್ಲಿ ನಡೆದ ಕಾಲೇಜುಗಳನ್ನು ನಂತರ ಸರ್ಕಾರದ ಅಡಿಯಲ್ಲಿ ಮುಂದುವರೆಸಬೇಕು ಎನ್ನುವುದನ್ನೇ ಮರೆತಂತಿದೆ. ಕಾಲೇಜಿಗೆ ಪಿಯು ಇಲಾಖೆ ಮಂಜೂರಾತಿ ನೀಡಿ, ಉಪನ್ಯಾಸಕರು ಮತ್ತು ಪ್ರಾಚಾರ್ಯರ ಹುದ್ದೆ ಮಂಜೂರಿಯನ್ನೇ ಮರೆತಿದೆ. ಮಂಜೂರಾತಿ ಇಲ್ಲದ ಹುದ್ದೆಗೆ ಸ್ಥಳೀಯ ಡಿಡಿಪಿಯು ಪ್ರಾಚಾರ್ಯರು ಮತ್ತು ಉಪನ್ಯಾಸಕರನ್ನು ನಿಯೋಜನೆ ಮಾಡುವುದಕ್ಕೂ ಕಾನೂನು ಅಡ್ಡಿಯಾಗುವುದರಿಂದ ಹದಿನೆಂಟು ಕಾಲೇಜುಗಳು ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿವೆ.ಟಿಸಿ ಕೊಡುವುದಕ್ಕೂ ಯಾರೂ ಇಲ್ಲ:
ಈ ಕಾಲೇಜಿನಲ್ಲಿ ಟಿಸಿ ಕೊಡುವುದಕ್ಕೆ ಮತ್ತು ಪ್ರವೇಶ ನೀಡುವುದಕ್ಕೂ ಅಧಿಕೃತವಾಗಿ ಯಾರೊಬ್ಬರೂ ಇಲ್ಲ. ಪ್ರವೇಶ ಪತ್ರಗಳನ್ನು ಬಸ್ಸಿಗೆ ಕಳುಹಿಸಿದರೆ ವಿದ್ಯಾರ್ಥಿಗಳೇ ತೆಗೆದುಕೊಳ್ಳಬೇಕಾದ ಸ್ಥಿತಿ ಇದೆ.
ಜಿಲ್ಲೆಯಲ್ಲಿ 2018ರಲ್ಲಿ ನಾಲ್ಕು ಪಿಯು ಕಾಲೇಜು ಪ್ರಾರಂಭವಾಗಿದ್ದು, ಇದುವರೆಗೂ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಹುದ್ದೆ ಮಂಜೂರಿಯಾಗಿಲ್ಲ. ಹೀಗಾಗಿ ಸಮಸ್ಯೆಯಾಗಿದೆ. ಈ ಕುರಿತು ಪ್ರಸ್ತಾವನೆ ಕಳುಹಿಸಲಾಗಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಡಿಡಿಪಿಯು ಜಗದೀಶ ತಿಳಿಸಿದ್ದಾರೆ.