ದ್ವಿತೀಯ ಪಿಯು ಪರೀಕ್ಷೆ ಸುಸೂತ್ರ ಆರಂಭ

| Published : Mar 02 2024, 01:51 AM IST

ಸಾರಾಂಶ

ಬೆಂ.ಗ್ರಾಮಾಂತರದಲ್ಲಿ ಒಬ್ಬ ವಿದ್ಯಾರ್ಥಿ ಡಿಬಾರ್‌ ಆಗಿರುವುದನ್ನು ಹೊರತುಪಡಿಸಿ ಮೊದಲ ದಿನ ಕನ್ನಡ, ಅರೇಬಿಕ್‌ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ -1 ಶುಕ್ರವಾರದಿಂದ ರಾಜ್ಯಾದ್ಯಂತ ಆರಂಭಗೊಂಡಿದ್ದು, ಮೊದಲ ದಿನ ಕನ್ನಡ ಮತ್ತು ಅರೇಬಿಕ್‌ ಭಾಷಾ ವಿಷಯದ ಪರೀಕ್ಷೆಗಳು ಯಾವುದೇ ಗೊಂದಲಗಳಿಲ್ಲದೆ ಎಲ್ಲ ಕೇಂದ್ರಗಳಲ್ಲೂ ಸುಸೂತ್ರವಾಗಿ ನಡೆದಿವೆ.ಈ ಮಧ್ಯೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಕೇಂದ್ರದಲ್ಲಿ ಪರೀಕ್ಷೆ ಬರೆಯುವಾಗ ಉತ್ತರ ನಕಲು ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಡಿಬಾರ್‌ ಮಾಡಲಾಗಿದೆ. ಉಳಿದೆಡೆ ಯಾವುದೇ ಪರೀಕ್ಷಾ ಅಕ್ರಮಗಳು ವರದಿಯಾಗಿಲ್ಲ. ಬಹುತೇಕ ಎಲ್ಲ ಕೇಂದ್ರಗಳಲ್ಲೂ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬಂದು ಪರೀಕ್ಷೆ ಬರೆದಿದ್ದಾರೆ. ಸಮವಸ್ತ್ರ ಇಲ್ಲದವರು ಕೂಡ ಯಾವುದೇ ವಿವಾದಿತ ಉಡುಪು ಧರಿಸಿ ಬರದೆ ಸಾಧಾರಣ ಉಡುಗೆಯಲ್ಲಿ ಬಂದು ಪರೀಕ್ಷೆ ಬರೆದಿದ್ದಾರೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕಾರಿಗಳು ತಿಳಿಸಿದೆ.ಇನ್ನು, ಮಂಡಳಿ ನೀಡಿರುವ ಮಾಹಿತಿ ಪ್ರಕಾರ, ಕನ್ನಡ ಮತ್ತು ಅರೇಬಿಕ್ ಪರೀಕ್ಷೆಗೆ ನೋಂದಾಯಿಸಿದ್ದ 5.25 ವಿದ್ಯಾರ್ಥಿಗಳ ಪೈಕಿ 5.07 ಮಂದಿ (ಶೇ.96.53) ಹಾಜರಾಗಿದ್ದು, 18,231 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪ್ರಸಕ್ತ ಸಾಲಿನಿಂದ ವರ್ಷದಲ್ಲಿ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶವಿರುವ ಕಾರಣಕ್ಕೋ ಏನೋ ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾಥಿಗಳು ಪರೀಕ್ಷೆ -1 ಬರೆಯದಿರುವುದು ಕಂಡು ಬಂದಿದೆ. ಇವರು ಏಪ್ರಿಲ್‌ ಮೊದಲವಾರ ಹಾಗೂ ಕೊನೆಯ ವಾರ ನಡೆಯಲಿರುವ ಪರೀಕ್ಷೆ 2 ಅಥವಾ ಪರೀಕ್ಷೆ 3ರಲ್ಲಿ ಕನ್ನಡ, ಅರೇಬಿಕ್‌ ಪರೀಕ್ಷೆ ಬರೆಯಬಹುದಾಗಿದೆ. ಎಲ್ಲಡೆ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲಾಗಿದೆ. ರಾಜ್ಯಾದ್ಯಂತ 1124 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ 2,108 ವಿಶೇಷ ಜಾಗೃತ ದಳ, 540 ಜಿಲ್ಲಾ ಜಾಗೃತ ದಳದ ಸದಸ್ಯರನ್ನು ನೇಮಕ ಮಾಡಲಾಗಿದೆ ಎಂದು ಮಂಡಳಿ ಮಾಹಿತಿ ನೀಡಿದೆ. ಪರೀಕ್ಷೆ ಮುಗಿದ ಬಳಿಕ ಹೊರಬಂದ ಮಕ್ಕಳು ಕನ್ನಡ ಭಾಷಾ ಪತ್ರಿಕೆ ಬಹಳ ಸುಲಭವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಶೇಷಾದ್ರಿಪುರಂ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ನವೀನ್‌, ಮಾತೃಭಾಷೆಯ ವಿಷಯದ ಪರೀಕ್ಷೆಯಾಗಿರುವುದರಿಂದ ಅತ್ಯಂತ ಸುಲಭವಾಗಿತ್ತು. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಶೇ.90ಕ್ಕಿಂತ ಹೆಚ್ಚು ಅಂಕಗಳು ಬರುವ ನಿರೀಕ್ಷೆ ಇದೆ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಚಿವ

ಪರೀಕ್ಷೆ ಆರಂಭವಾಗುವುದಕ್ಕೂ ಮುನ್ನ ಬೆಂಗಳೂರಿನ ಮಲ್ಲೇಶ್ವರದ ಎಚ್.ವಿ. ನಂಜುಂಡಯ್ಯ ಸ್ನಾರಕ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಕೇಂದ್ರಕ್ಕೆ ಭೇಟಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಪರೀಕ್ಷೆಯನ್ನು ಉತ್ತಮವಾಗಿ ಬರೆಯುವಂತೆ ಧೈರ್ಯ ತುಂಬಿದರು.

ಇನ್ನು, ಪರೀಕ್ಷೆ ಆರಂಭಕ್ಕೆ ಕೊನೆಯ ಕ್ಷಣದ ವರೆಗೂ ಬಹುತೇ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಅಂತಮ ಕ್ಷಣದ ಸಿದ್ಧತೆಯಲ್ಲಿ ತೊಡಗಿದ್ದರು ಕಂಡುಬಂತು. ಪರೀಕ್ಷೆ ಆರಂಭಕ್ಕೆ ಕೆಲ ಗಂಟೆ ಮೊದಲೇ ಕೇಂದ್ರಗಳಲ್ಲಿ ಹಾಜರಾದ ವಿದ್ಯಾಥಿಗಳು ಬೆಲ್‌ ಹೊಡೆಯುತ್ತಿದ್ದಂತೆ ಕೇಂದ್ರದ ಆವರಣದ ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಿದ್ದ ಮಾಹಿತಿ ಆಧರಿಸಿ ತಮ್ಮ ನೋಂದಣಿ ಸಂಖ್ಯೆಯನ್ನು ದಾಖಲಿಸಿರುವ ಕೊಠಡಿಗಳನ್ನು ಹುಡುಕಿಕೊಂಡರು.