ತುಂಗಭದ್ರಾ ನದಿ ಪಾವಿತ್ರ್ಯತೆ ಕಾಪಾಡಲು ಜನಜಾಗೃತಿ ಅತ್ಯಗತ್ಯ

| Published : Oct 06 2025, 01:01 AM IST

ತುಂಗಭದ್ರಾ ನದಿ ಪಾವಿತ್ರ್ಯತೆ ಕಾಪಾಡಲು ಜನಜಾಗೃತಿ ಅತ್ಯಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಅತ್ಯಂತ ಅಪಾಯದಲ್ಲಿರುವ ನದಿಗಳಲ್ಲಿ ತುಂಗಭದ್ರಾ ಪ್ರಮುಖವಾದುದು.

ಕಂಪ್ಲಿ: ತುಂಗಭದ್ರಾ ನದಿ ಪಾವಿತ್ರ್ಯತೆ ಕಾಪಾಡಲು ಜನಜಾಗೃತಿ ಅತ್ಯಗತ್ಯ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಪಾಟೀಲ ವೀರಾಪುರ ತಿಳಿಸಿದರು.

ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಆವರಣದಲ್ಲಿ, ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನಿರ್ಮಲ ತುಂಗಭದ್ರಾ ಅಭಿಯಾನದ ಮೂರನೇ ಹಂತದ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ದೇಶದ ಅತ್ಯಂತ ಅಪಾಯದಲ್ಲಿರುವ ನದಿಗಳಲ್ಲಿ ತುಂಗಭದ್ರಾ ಪ್ರಮುಖವಾದುದು. ವಿವಿಧ ನೀರಾವರಿ ಯೋಜನೆಗಳು, ಕೈಗಾರಿಕಾ ತ್ಯಾಜ್ಯ ಮತ್ತು ಕೃಷಿ ರಾಸಾಯನಿಕಗಳಿಂದ ನದಿ ಜೀವಸಂಕುಲಕ್ಕೆ ತೀವ್ರ ಹಾನಿ ಉಂಟಾಗಿದೆ. ತುಂಗಭದ್ರಾ ನದಿಯನ್ನು ಕೇವಲ ಕುಡಿಯುವ ನೀರಿನ ಮೂಲವಾಗಿ ಉಳಿಸಲು ಸರ್ಕಾರದ ಮಟ್ಟದಲ್ಲಿ ತುರ್ತು ಕ್ರಮ ಅಗತ್ಯ. ಸಹ್ಯಾದ್ರಿ ಪರ್ವತಗಳಲ್ಲಿ ನಡೆಯುತ್ತಿರುವ ಅರಣ್ಯ ನಾಶ ನದಿಯ ಜೀವನಾಡಿ ನಾಶವಾಗಲು ಕಾರಣವಾಗಿದೆ. ನದಿಯ ಪಾವಿತ್ರ್ಯತೆ ಹಾಗೂ ಜೀವಂತಿಕೆಯ ರಕ್ಷಣೆಗೆ ಜನ, ಧರ್ಮಗುರುಗಳು, ಕೃಷಿಕರು ಹಾಗೂ ಸ್ಥಳೀಯ ಆಡಳಿತಗಳು ಕೈಜೋಡಿಸಬೇಕಿದೆ. ಜನ ಮತ್ತು ಜಲ ಜಾಗೃತಿಗೊಳಿಸುವ ನಿರ್ಮಲ ತುಂಗಭದ್ರಾ ಅಭಿಯಾನದ ಉದ್ದೇಶವೇ ನದಿಗೆ ಹೊಸ ಜೀವ ತುಂಬುವುದು ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಡಾ.ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ತುಂಗಭದ್ರಾ ನೀರಿನ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರ ಪರಿಣಾಮ ಸ್ಥಳೀಯರಲ್ಲಿ ಕ್ಯಾನ್ಸರ್, ಜಾಂಡೀಸ್‌ ಸೇರಿದಂತೆ ಹಲವು ರೋಗಗಳು ವ್ಯಾಪಿಸುತ್ತಿವೆ. ನದಿಯ ಪಾವಿತ್ರ್ಯತೆ ಮುಂದಿನ ಪೀಳಿಗೆಗೆ ಉಳಿಸಲು ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನು ಅರಿತು ಕ್ರಮ ಕೈಗೊಳ್ಳಬೇಕು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ದಕ್ಷಿಣ ಭಾರತ ಸಂಚಾಲಕ ಟಿ. ಮಾಧವನ್, ನಿರ್ಮಲ ತುಂಗಭದ್ರಾ ಅಭಿಯಾನದ ರಾಜ್ಯ ಸಂಚಾಲಕ ಮಹಿಮಾ ಪಾಟೀಲ, ರಾಜ್ಯ ರಾಯಭಾರಿ ಲಲಿತಾರಾಣಿ, ಕೊಪ್ಪಳ ಜಿಲ್ಲಾಧ್ಯಕ್ಷ ರಾಘವೇಂದ್ರ ಸೂನಾ, ಕಂಪ್ಲಿ ತಾಲೂಕು ಮಾರ್ಗದರ್ಶಕ ಡಾ. ಜಂಬುನಾಥ ಗೌಡ, ದಿಶಾ ಸಮಿತಿ ಸದಸ್ಯ ಎ.ಸಿ. ದಾನಪ್ಪ, ಮುಖಂಡರಾದ ಎಸ್.ಎಂ. ನಾಗರಾಜಸ್ವಾಮಿ, ಬಳ್ಳಾರಿ ರವೀಂದ್ರನಾಥಶ್ರೇಷ್ಠಿ, ಡಾ. ಶ್ರೀನಿವಾಸರೆಡ್ಡಿ, ಡಾ. ಭಟ್ಟಾ ರಾಮಾಂಜಿನೇಯ, ಕೆ.ಎಂ. ವಾಗೀಶ, ಕೊಟ್ಟೂರು ರಮೇಶ್, ಕೆ. ತಿಮ್ಮಪ್ಪನಾಯಕ, ಕೆ.ಎಸ್. ದೊಡ್ಡಬಸಪ್ಪ, ಎಸ್.ಡಿ. ಬಸವರಾಜ, ಟಿ. ಗಂಗಣ್ಣ, ಕೆ. ಸುದರ್ಶನ, ಮಾಧವರೆಡ್ಡಿ ಷಣ್ಮುಖಪ್ಪ, ಅಂಚೆ ಮಹ್ಮದ್‌ಸಾಬ್, ಆದೋನಿ ರಂಗಪ್ಪ, ನಾಗರಾಜ, ಚಂದ್ರಶೇಖರ ಬಣಗಾರ ಇದ್ದರು.