ರೇಬಿಸ್ ನಂತಹ ಮಾರಣಾಂತಿಕ ಕಾಯಿಲೆಯ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯ.
ಧಾರವಾಡ:
ರೇಬಿಸ್ ನಂತಹ ಮಾರಣಾಂತಿಕ ಕಾಯಿಲೆಯ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯ. ರೇಬಿಸ್ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆ, ಪಶುವೈದ್ಯರು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ ಹೇಳಿದರು.ರಾಯಾಪುರದಲ್ಲಿರುವ ಕರ್ನಾಟಕ ಹಾಲು ಮಹಾ ಮಂಡಳಿ ತರಬೇತಿ ಕೇಂದ್ರದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ ಜಂಟಿಯಾಗಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಪಶುವೈದ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಏರ್ಪಡಿಸಿದ್ದ ತಾಂತ್ರಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜಂಟಿ ನಿರ್ದೇಶಕ ಡಾ. ಎಚ್. ನಾಗರಾಜ್ ರೇಬಿಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮ, ಪ್ರಾಣಿಗಳ ಲಸಿಕಾಕರಣ ಹಾಗೂ ಇಲಾಖೆಯ ವತಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಹೇಶ ಚಿತ್ತರಗಿ ರೇಬಿಸ್‌ನಿಂದ ಉಂಟಾಗುವ ಆರೋಗ್ಯ ಸಮಸ್ಯೆ, ನಾಯಿ ಕಚ್ಚಿದ ಸಂದರ್ಭದಲ್ಲಿ ತಕ್ಷಣ ಕೈಗೊಳ್ಳಬೇಕಾದ ಕ್ರಮ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ರೇಬಿಸ್ ನಿಯಂತ್ರಣದ ಮಹತ್ವದ ಕುರಿತು ಮಾತನಾಡಿದರು.
ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ಇದ್ದರು.ಅಧ್ಯಕ್ಷತೆ ವಹಿಸಿದ್ದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆ ಇಲಾಖೆ ನಿರ್ದೇಶಕ ಡಾ.ಎಸ್.ವಿ. ಸಂತಿ ಮಾತನಾಡಿ, ಡಬ್ಲೂಎಚ್‌ಓ ಘೋಷಿಸಿದಂತೆ 2030ರ ಒಳಗೆ ನಾಯಿ ಕಡಿತದಿಂದ ಆಗುವ ರೇಬಿಸ್ ಸಾವುಗಳನ್ನು ಶೂನ್ಯವಾಗಿಸುವ ಸಂಕಲ್ಪವನ್ನು ಸಾಧಿಸಲು ಇರುವ ಸವಾಲುಗಳು ಹಾಗೂ ಅವುಗಳನ್ನು ಎದುರಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಪಶು ವೈದ್ಯರು ಮಾನವ ವೈದ್ಯರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ಈ ಕಾರ್ಯಾಗಾರ ಮುಖ್ಯ ವೇದಿಕೆಯಾಗಲೆಂದರು.
ಡಾ. ಮನೀಶ್ ಹಾಗೂ ಸೀಮಂತೀನಿ ರೇಬಿಸ್ ನಿಯಂತ್ರಣ, ಬೀದಿ ನಾಯಿಗಳ ನಿರ್ವಹಣೆ, ಪ್ರಾಣಿಗಳ ಲಸಿಕಾಕರಣ ಹಾಗೂ ಸಾರ್ವಜನಿಕರ ಸುರಕ್ಷತೆ ಕುರಿತು ಮಾಹಿತಿ ನೀಡಿದರು. ಡಾ. ಶೀಲವಂತಮಠ, ಡಾ ಬಣಕರ್, ಡಾ. ಆನಂದ ಪಡಿಯಪ್ಪನವರ ಇದ್ದರು.