ಪೊಲೀಸ್ ದೂರುಗಳ ಪ್ರಾಧಿಕಾರದ ಜನಜಾಗೃತಿ ಅಗತ್ಯ

| Published : May 07 2024, 01:05 AM IST

ಸಾರಾಂಶ

ರಾಮನಗರ: ಪೊಲೀಸರ ದುರ್ನಡತೆ ವಿರುದ್ಧ ಸಾರ್ವಜನಿಕರು ನಿರ್ಭೀತಿಯಿಂದ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು ಎಂದು ಪ್ರಾಧಿಕಾರದ ಅಧ್ಯಕ್ಷ ಹಾಗೂ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ತಿಳಿಸಿದರು.

ರಾಮನಗರ: ಪೊಲೀಸರ ದುರ್ನಡತೆ ವಿರುದ್ಧ ಸಾರ್ವಜನಿಕರು ನಿರ್ಭೀತಿಯಿಂದ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು ಎಂದು ಪ್ರಾಧಿಕಾರದ ಅಧ್ಯಕ್ಷ ಹಾಗೂ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ದೂರುಗಳ ಪ್ರಾಧಿಕಾರದ ಪರಿಶೀಲನಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಾಧಿಕಾರದ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ಇಲ್ಲವಾಗಿದೆ. ಸಾರ್ವಜನಿಕರು ಮುಕ್ತವಾಗಿ ನಮ್ಮ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು ಎಂದರು.

ಸಾರ್ವಜನಿಕರಿಗೆ ಪೊಲೀಸ್ ದೂರುಗಳ ಪ್ರಾಧಿಕಾರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಮ್ಮ ಪ್ರಾಧಿಕಾರದ ಸದಸ್ಯರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇವೆ. ಪ್ರತಿ ಜಿಲ್ಲೆಗಳಿಗೆ ತೆರಳಿ ಜಿಲ್ಲಾಮಟ್ಟದಲ್ಲಿ ಸಲ್ಲಿಸಿರುವ ದೂರುಗಳ ಬಗ್ಗೆ ಪರಿಶೀಲಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಪೊಲೀಸ್ ದೂರುಗಳ ಪ್ರಾಧಿಕಾರ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಸಾಮಾನ್ಯ ಪೇದೆಯಿಂದ ಡಿವೈಎಸ್ಪಿ ದರ್ಜೆ ಅಧಿಕಾರಿವರೆಗೆ ದುರ್ನಡತೆ ತೋರಿದಲ್ಲಿ ಅದನ್ನು ಜಿಲ್ಲಾಮಟ್ಟದ ಪ್ರಾಧಿಕಾರದಲ್ಲಿ ವಿಚಾರಣೆ ಮಾಡಲಾಗುತ್ತದೆ. ಅವರಿಗಿಂತ ಹೆಚ್ಚಿನ ಹುದ್ದೆಯ ಅಧಿಕಾರಿಗಳಾದಲ್ಲಿ ರಾಜ್ಯಪ್ರಾಧಿಕಾರ ವಿಚಾರಣೆ ಮಾಡುತ್ತದೆ ಎಂದರು.

ಜಿಲ್ಲಾ ಮಟ್ಟದ ಪೊಲೀಸ್ ದೂರು ಪ್ರಾಧಿಕಾರಕ್ಕೆ ಆಯಾಯ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಇನ್ನು ನಾಗರಿಕರ ಪರವಾಗಿ ಒಬ್ಬರನ್ನು ಸರ್ಕಾರ ನಾಮ ನಿರ್ದೇಶನ ಮಾಡುತ್ತದೆ. ಈ ಸಮಿತಿ ಜಿಲ್ಲಾಮಟ್ಟದಲ್ಲಿ ಸಲ್ಲಿಕೆಯಾಗುವ ದೂರುಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಶಿಫಾರಸ್ಸು ಮಾಡುತ್ತದೆ ಎಂದು ತಿಳಿಸಿದರು.

ಅರ್ಜಿಗಳ ಇತ್ಯರ್ಥ:

ನಾನು ಪ್ರಾಧಿಕಾರದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು 8 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನಾನು ಅಧ್ಯಕ್ಷನಾದ ಬಳಿಕ ನಮ್ಮ ಪ್ರಾಧಿಕಾರಕ್ಕೆ ಸಲ್ಲಿಸಿದ್ದ 200 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ನಾನು ಅಧಿಕಾರ ವಹಿಸಿಕೊಂಡಾಗ 600 ಅರ್ಜಿ ಬಾಕಿ ಇದ್ದವು. ಉಳಿದ ಅರ್ಜಿಗಳನ್ನು ಹಂತ ಹಂತವಾಗಿ ವಿಲೇ ಮಾಡಲಾಗುವುದು. ನಮ್ಮ ಪ್ರಾಧಿಕಾರ ಪ್ರಕರಣವೊಂದರಲ್ಲಿ ಡಿವೈಎಸ್ಪಿ ದರ್ಜೆಯ ಅಧಿಕಾರಿ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರಕ್ಕೆ 38 ಅರ್ಜಿಗಳು ಇದುವರೆಗೆ ಸಲ್ಲಿಕೆಯಾಗಿದ್ದು, 37 ಅರ್ಜಿಗಳು ವಿಲೇವಾರಿಯಾಗಿವೆ. ರಾಮನಗರ ಜಿಲ್ಲೆಯಲ್ಲಿ ದೂರುಗಳ ಪ್ರಾಧಿಕಾರದ ಕೆಲಸ ಸಮರ್ಪಕವಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದೇವಜ್ಯೋತಿ ರೇ, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಉಪಸ್ಥಿತರಿದ್ದರು.

ಬಾಕ್ಸ್‌........

ಪೊಲೀಸರೂ ದೂರು ನೀಡಬಹುದು

ನಮ್ಮ ಪ್ರಾಧಿಕಾರಕ್ಕೆ ಸಾರ್ವಜನಿಕರು ಮಾತ್ರವಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಕಿರುಕುಳವಾದಲ್ಲಿ ಪೊಲೀಸ್ ಸಿಬ್ಬಂದಿಗಳು ನಮ್ಮ ಪ್ರಾಧಿಕಾರಕ್ಕೆ ದೂರು ನೀಡಬಹುದು. ಪೊಲೀಸ್ ಸಿಬ್ಬಂದಿಗಳಿಂದ ಹಿರಿಯ ಅಧಿಕಾರಿಗಳು ಮನೆಕೆಲಸ ಮಾಡಿಸಿಕೊಳ್ಳುವುದು, ಅಪಮಾನಕಾರಿ ಕೆಲಸ ಮಾಡಿಸುವುದು ಸೇರಿದಂತೆ ಇಲಾಖೆಯೇತರ ಕೆಲಸಗಳನ್ನು ಮಾಡಿಸಿಕೊಂಡಲ್ಲಿ ನಮಗೆ ದೂರು ನೀಡಬಹುದಾಗಿದೆ ಎಂದು ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷ ಎನ್‌.ಕೆ.ಸುಧೀಂದ್ರ ರಾವ್ ತಿಳಿಸಿದ್ದಾರೆ.

ಬಾಕ್ಸ್ .........ಕಚೇರಿಯಲ್ಲೇ ದೂರು ಸಲ್ಲಿಸಬಹುದು

ಬೆಂಗಳೂರಿನ ವಿಶ್ವೇಶ್ವರಯ್ಯ ಟವರ್ ನಲ್ಲಿ ನಮ್ಮ ಪ್ರಾಧಿಕಾರದ ಕೇಂದ್ರ ಕಚೇರಿ ಇದೆ. ಸಾರ್ವಜನಿಕರು ನೇರವಾಗಿ ಇಲ್ಲಿಗೆ ಬಂದು ದೂರುಗಳನ್ನು ದಾಖಲಿಸಬಹುದು. ದೂರನ್ನು ದಾಖಲಿಸುವ ವಿಧಾನ ಸರಳವಾಗಿದೆ. ಅಲ್ಲಿಯವರೆಗೆ ಬರಲಾಗದಿದ್ದರೆ ನಮ್ಮ ಪ್ರಾಧಿಕಾರದ ಕಚೇರಿಯ ವಿಳಾಸಕ್ಕೆ ದೂರಿನ ಅರ್ಜಿಯನ್ನು ಬರೆದು ಅಂಚೆ ಮೂಲಕ ಕಳುಹಿಸಿದರೂ ನಾವು ಅದನ್ನು ಸ್ವೀಕರಿಸಿ ವಿಚಾರಣೆ ಆರಂಭಿಸುತ್ತೇವೆ ಎಂದು ಪ್ರಾಧಿಕಾರದ ಅಧ್ಯಕ್ಷ ಸುಧೀಂದ್ರರಾವ್‌ ಹೇಳಿದ್ದಾರೆ.6ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷ ನ್ಯಾ.ಎನ್.ಕೆ.ಸುಧೀಂದ್ರರಾವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.