Public Awareness Through Dasa Sahitya by Kanakadasa
-ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅಭಿಮತ । ಯಾದಗಿರಿಯಲ್ಲಿ ಸಂತಕವಿ ಕನಕದಾಸರ ಜಯಂತ್ಯುತ್ಸವ
--ಕನ್ನಡಪ್ರಭ ವಾರ್ತೆ ಯಾದಗಿರಿ
16ನೇ ಶತಮಾನದಲ್ಲಿ ಬದುಕಿದ ಕನಕದಾಸರು ಕೀರ್ತನೆಗಳು, ತತ್ವಪದಗಳು ಮತ್ತು ಸಾಹಿತ್ಯದ ಮೂಲಕ ಜ್ಞಾನ, ಭಕ್ತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ಸಾರಿದವರು, ಅಧಿಕಾರದ ಜೀವನವನ್ನು ತೊರೆದು ದಾಸಸಾಹಿತ್ಯದ ಮೂಲಕ ಜನಜಾಗೃತಿ ಮೂಡಿಸಿದವರು ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಸಂತಕವಿ ಕನಕದಾಸ ಜಯಂತ್ಯೋತ್ಸವ ಸಮಿತಿ ಯಾದಗಿರಿಯ ಸಂಯುಕ್ತಾಶ್ರಯದಲ್ಲಿ, ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ಅರ್ಪಿಸಿ ಅವರು ಮಾತನಾಡಿದರು.
ಕನ್ನಡ ನಾಡಿನ ಶ್ರೇಷ್ಠ ಸಂತ ಕವಿ, ದಾಸಶ್ರೇಷ್ಠ, ಸಮಾಜ ಸುಧಾರಕ ಹಾಗೂ ಸಮಾನತೆಯ ಹರಿಕಾರ ಸಂತ ಕವಿ ಕನಕದಾಸರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನೀಡುವ ನಿಜವಾದ ಗೌರವ. ಕೇವಲ ಭಾವಚಿತ್ರಕ್ಕೆ ಹಾರ ಹಾಕುವುದಕ್ಕೆ ಸೀಮಿತವಾಗದೆ ಅವರ ತತ್ವಗಳನ್ನು ಪಾಲಿಸಬೇಕು ಎಂದು ತುನ್ನೂರ್ ಹೇಳಿದರು.ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಮಾತನಾಡಿ, 16ನೇ ಶತಮಾನದಲ್ಲಿ ಜಾತಿ ಮತ್ತು ಕುಲ ಆಧಾರಿತ ವ್ಯವಸ್ಥೆಯ ವಿರುದ್ಧ ಕನಕದಾಸರು ಜನಸಾಮಾನ್ಯರಿಗೆ ಸಂದೇಶ ನೀಡಿದರು.
ಕುಲ ಕುಲ ಕುಲವೆಂದು ಹೊಡೆದಾಡದಿರಿ.. ಎಂಬ ಕೀರ್ತನೆಯ ಮೂಲಕ ಕುಲದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಪ್ರಶ್ನಿಸಿದರು. ಆ ಕಾಲದಲ್ಲಿ ತಂತ್ರಜ್ಞಾನ ಅಥವಾ ಸಾಮಾಜಿಕ ಜಾಲತಾಣಗಳು ಇಲ್ಲದಿದ್ದರೂ, ಕವಿತೆ ಮತ್ತು ಕೀರ್ತನೆಗಳ ಮೂಲಕ ಹಳ್ಳಿಗಳಿಗೆ ಮತ್ತು ಜನಸಮುದಾಯಗಳಿಗೆ ತಮ್ಮ ವಿಚಾರಗಳನ್ನು ತಲುಪಿಸಿ, ಸಮಾನತೆ ಸಾರಿದರು. ಯಾವುದೇ ಸಂಘಟನೆ ಅಥವಾ ಸಾಮಾಜಿಕ ರಕ್ಷಣೆಯ ಬೆಂಬಲವಿಲ್ಲದಿದ್ದರೂ ಏಕಾಂಗಿಯಾಗಿ ಧ್ವನಿ ಎತ್ತಿದ ಅವರು, 16ನೇ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಸಂತ ಜ್ಞಾನೇಶ್ವರರು ಮತ್ತು ನಮ್ಮ ಭಾಗದಲ್ಲಿ ಕನಕದಾಸರು ಭಕ್ತಿ ಚಳವಳಿಗೆ ಅಡಿಪಾಯ ಹಾಕಿದರು.
ಇಂದು 21ನೇ ಶತಮಾನದಲ್ಲಿ ನಾವು ಕಾಣುತ್ತಿರುವ ಸಮಾನತೆ, ಹಕ್ಕುಗಳು ಮತ್ತು ರಕ್ಷಣೆಯ ಹಿಂದೆ ಆ ಚಳವಳಿಗಳ ಪ್ರಭಾವವಿದೆ. ಅವರ ವಿಚಾರಗಳನ್ನು ಆಚರಣೆಗೆ ತರುವುದೇ ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದರು.ಉಪನ್ಯಾಸಕ ಶ್ರೀಶೈಲ ಪೂಜಾರಿ ವಿಶೇಷ ಉಪನ್ಯಾಸ ನೀಡಿ, ಕನಕದಾಸರು ಯಾವುದೇ ಸಮಾಜದ ಕಟ್ಟಳೆಗೆ ಒಳಪಡದೆ ಇಡೀ ವಿಶ್ವವನ್ನು ದೂರದೃಷ್ಟಿಯಿಂದ ನೋಡಿದ ಮಹಾಸಂತರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅವರು ನೀಡಿದ ಕೊಡುಗೆಗಳು ಜನಪ್ರಿಯವಾಗಿದ್ದು, ಸಮಾಜದಲ್ಲಿ ಅವರಿಗೆ ವಿಶೇಷ ಗೌರವವಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರಿಗೆ ಯೌವನದಲ್ಲಿ ಮದುವೆಯ ಯೋಚನೆ ಬಂದರೂ, ವಿಜಯನಗರ ಸಾಮ್ರಾಜ್ಯದ ಮೇಲಿನ ದಾಳಿ ಮತ್ತು ಯುದ್ಧದಲ್ಲಿ ಸೈನಿಕನಾಗಿ ಭಾಗವಹಿಸಿದಾಗ ಎದುರಾದ ಸಾವು-ನೋವುಗಳು ಅವರ ಜೀವನದಲ್ಲಿ ದೊಡ್ಡ ಬದಲಾವಣೆ ತಂದವು. ಜೀವನ ನಶ್ವರ ಎಂಬ ಅರಿವು ಮೂಡಿ ದಾಸಶ್ರೇಷ್ಠರಾದರು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಯೂಡಾ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಜಿಪಂ ಸಿಇಒ ಜುಬೀನ್ ಮಹಾಪಾತ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಇದಕ್ಕೂ ಮೊದಲು ನಗರದ ಕನಕ ವೃತ್ತದಲ್ಲಿ ಕನಕದಾಸರ ಪುತ್ಥಳಿಗೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್, ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅವರು ಮಾರ್ಲಾಪಣೆ ಮಾಡಿದರು.
ಫೋಟೊ:27ವೈಡಿಆರ್1
ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಮಾತನಾಡಿದರು.-
ಫೋಟೊ: 27ವೈಡಿಆರ್2ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಉದ್ಘಾಟಿಸಿದರು.