ಸಾರ್ವಜನಿಕರ ಬ್ಯಾಡ್ಮಿಂಟನ್ ಕ್ರೀಡಾಂಗಣ ವಶಕ್ಕೆ ಮುಂದು

| Published : Jun 12 2024, 12:30 AM IST

ಸಾರ್ವಜನಿಕರ ಬ್ಯಾಡ್ಮಿಂಟನ್ ಕ್ರೀಡಾಂಗಣ ವಶಕ್ಕೆ ಮುಂದು
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಪಂ ವತಿಯಿಂದ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು15ನೇ ಹಣಕಾಸು ಯೋಜನೆ ಹಾಗೂ ಅಂದಿನ ಶಾಸಕರ ಅನುದಾನ ಮತ್ತು ನರೇಗಾ ಯೋಜನೆಯಡಿ 55ಅಡಿ ಅಗಲ 55 ಅಡಿ ಉದ್ದದ ಷಟಲ್ ಒಳಾಂಗಣ ಕ್ರೀಡಾಂಗಣ ಸಾರ್ವಜನಿಕರ ಉಪಯೋಗಕ್ಕೆ ಬಳಸಲು ನಿರ್ಮಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಸಾರ್ವಜನಿಕರಿಗೆ ನಿರ್ಮಿಸಿದ್ದ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಕಂದಾಯ ಇಲಾಖೆ ವಶಕ್ಕೆ ನೀಡಲು ಮುಂದಾಗಿದ್ದ ಗ್ರಾಪಂ ಪಿಡಿಒ ಬಸವರಾಜು ಅವರ ಕ್ರಮ ಖಂಡಿಸಿ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಕೆಆರ್‌ಎಸ್ ಗ್ರಾಮದಲ್ಲಿ ನಡೆದಿದೆ.

ಗ್ರಾಪಂ ವತಿಯಿಂದ ಷಟಲ್ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು15ನೇ ಹಣಕಾಸು ಯೋಜನೆ ಹಾಗೂ ಅಂದಿನ ಶಾಸಕರ ಅನುದಾನ ಮತ್ತು ನರೇಗಾ ಯೋಜನೆಯಡಿ 55ಅಡಿ ಅಗಲ 55 ಅಡಿ ಉದ್ದದ ಷಟಲ್ ಒಳಾಂಗಣ ಕ್ರೀಡಾಂಗಣ ಸಾರ್ವಜನಿಕರ ಉಪಯೋಗಕ್ಕೆ ಬಳಸಲು ನಿರ್ಮಿಸಲಾಗಿತ್ತು. ಕಂದಾಯ ಇಲಾಖೆಯು ನಮಗೆ ಸೇರಿದ್ದ ಜಾಗದಲ್ಲಿ ಗ್ರಾಪಂ ಅವರು ಅಕ್ರಮವಾಗಿ ಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ. ಅದನ್ನು ತಕ್ಷಣ ನಮ್ಮ ಇಲಾಖೆಗೆ ನೀಡಬೇಕೆಂದು ತಹಸೀಲ್ದಾರ್ ತಾಪಂ ಇಒ ಅವರಿಗೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಪಿಡಿಒ ಸದಸ್ಯರ ಗಮನಕ್ಕೆ ತಾರದೆ ಮೇಲಾಧಿಕಾರಿಗಳ ಪ್ರಭಾವಕ್ಕೆ ಮಣಿದು ಕಂದಾಯ ಇಲಾಖೆಗೆ ನೀಡಲು ದಾಖಲಾತಿ ಸಿದ್ದಪಡಿಸಿ, ಕ್ರೀಡಾಂಗಣದ ಕೀಯನ್ನು ಕಂದಾಯ ಇಲಾಖೆಗೆ ನೀಡಲು ಮುಂದಾದ ಕ್ರಮವನ್ನು ಗ್ರಾಪಂ ಆಧ್ಯಕ್ಷೆ ಶೃತಿ ಹಾಗೂ ಉಪಾಧ್ಯಕ್ಷ ರವಿಶಂಕರೇಗೌಡ ಹಾಗೂ ಸದಸ್ಯರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ತರಾಟೆ ತೆಗೆದುಕೊಂಡಿದ್ದಾರೆ.ಈ ವೇಳೆ ಸದಸ್ಯ ಸಿ.ಮಂಜುನಾಥ್ ಮಾತನಾಡಿ, ಕೆಆರ್‌ಎಸ್ ಗ್ರಾಪಂಗೆ ಸೇರಿದ ಜಾಗದಲ್ಲಿ ಸರ್ಕಾರ ನಿರ್ಮಿಸಿದ್ದ ಷಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ಸಾರ್ವಜನಿಕರ ಉಪಯೋಗಕ್ಕೆ ನಿರ್ಮಿಸಲಾಗಿದೆ ಎಂದರು.

ಈ 2 ಕ್ರೀಡಾಂಗಣದಲ್ಲಿ ಗ್ರಾಮದ ಹಿರಿಯರು, ಮಕ್ಕಳು, ಮಹಿಳೆಯರಿಗೆ ಉಚಿತವಾಗಿ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಹಾಲಿ ಶಾಸಕರು ತಮ್ಮ ಬೆಂಬಲಿಗನ ಖಾಸಗಿ ಕ್ರೀಡಾಂಗಣಕ್ಕೆ ಆದಾಯ ಕಡಿಮೆಯಾಗುತ್ತದೆ ಎಂಬ ಉದ್ದೇಶದಿಂದ ರಾಜಕೀಯ ಮಾಡಿ ಅಧಿಕಾರಿಗಳಿಗೆ ಸೂಚಿಸಿ ಮುಚ್ಚುವ ಯತ್ನ ಮಾಡುತ್ತಿರುವುದು ಬೇಸರ ತರಿಸಿದೆ. ಅಧಿಕಾರಿಗಳು ಸಾರ್ವಜನಿಕರರ ಬಳಕೆಗಿದ್ದ ಕ್ರೀಡಾಂಗಣವನ್ನು ಹಸ್ತಾಂತರಿಸಿದ್ದಲ್ಲಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.