ಸಮುದಾಯಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಕಾರ ಬಹಳ ಅಗತ್ಯವಾಗಿದೆ ಎಂದು ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ ಅವರು ಹೇಳಿದರು.
ಬಳ್ಳಾರಿ: ಸಮುದಾಯಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಸಾರ್ವಜನಿಕರ ಸಹಕಾರ ಬಹಳ ಅಗತ್ಯವಾಗಿದೆ ಎಂದು ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ ಅವರು ಹೇಳಿದರು.
ಡೆಂಘೀ ರೋಗ ನಿಯಂತ್ರಣ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಂಡಿಹಟ್ಟಿಯ ಸರ್ಕಾರಿ ಹಾಸ್ಟೆಲ್‌ನಲ್ಲಿ ಶಾಲಾ ಮಕ್ಕಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮಳೆಗಾಲದಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಮನೆ ಒಳಗಡೆ ಮತ್ತು ಹೊರಾಂಗಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತ ನೀರಿನಲ್ಲಿ ಈಡೀಸ್ ಸೊಳ್ಳೆಗಳ ಲಾರ್ವಾ ಉತ್ಪತ್ತಿಯಾಗುವುದನ್ನು ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ನಿಂತ ನೀರಿನಿಂದಾಗಿ ಡೆಂಘೀ ಮಾತ್ರವಲ್ಲದೆ ಚಿಕೂನ್‌ಗುನ್ಯಾ, ಮಲೇರಿಯಾ, ಆನೇಕಾಲು ರೋಗ ಹಾಗೂ ಮೆದುಳು ಜ್ವರಗಳಂತಹ ಮಾರಕ ರೋಗಗಳು ಹರಡುವ ಸಾಧ್ಯತೆಯಿದೆ. ಸಾಧಾರಣ ಜ್ವರವೆಂದು ನಿರ್ಲಕ್ಷಿಸಿದರೆ ಡೆಂಘೀ ರೋಗಿಗಳಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಶೀಘ್ರವಾಗಿ ಕುಸಿದು ರಕ್ತಸ್ರಾವದಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಬಹುದು. ಹಾಗಾಗಿ 3 ದಿನಗಳಿಗಿಂತ ಹೆಚ್ಚು ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಕಂಡುಬಂದರೆ ತಕ್ಷಣವೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.ಮುಖ್ಯವಾಗಿ ಚಿಕ್ಕ ಮಕ್ಕಳು, ಗರ್ಭಿಣಿಯರು ಹಾಗೂ ವಯೋವೃದ್ಧರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಅವರು ಮನವಿ ಮಾಡಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಣುಕಾ ಜಡಗನ್ನವರ ಮಾತನಾಡಿ, ಮನೆಯಲ್ಲಿ ನೀರು ಸಂಗ್ರಹಿಸುವ ಡ್ರಮ್, ಬ್ಯಾರಲ್, ನೀರಿನ ತೊಟ್ಟಿ, ಕಲ್ಲಿನ ಡೋಣಿ, ಹೂವಿನ ಕುಂಡಗಳನ್ನು ವಾರಕ್ಕೊಮ್ಮೆ ಕಡ್ಡಾಯವಾಗಿ ಸ್ವಚ್ಛಗೊಳಿಸಬೇಕು. ನೀರು ತುಂಬಿದ ಪಾತ್ರೆಗಳಿಗೆ ಮುಚ್ಚಳ ಮುಚ್ಚಬೇಕು ಅಥವಾ ಬಟ್ಟೆ ಕಟ್ಟಬೇಕು. ಬಳಕೆಯಾಗದ ನೀರು ಸಂಗ್ರಹಕಗಳಿಗೆ ಕೊಬ್ಬರಿ ಎಣ್ಣೆ ಹಾಕುವುದರಿಂದ ಸೊಳ್ಳೆ ಉತ್ಪತ್ತಿಯನ್ನು ತಡೆಯಬಹುದು ಎಂದು ಸರಳ ಪರಿಹಾರಗಳನ್ನು ತಿಳಿಸಿದರು.ಮನೆಯ ಸುತ್ತಮುತ್ತ ಹಳೆಯ ಡಬ್ಬಿ, ಟೈರ್, ಒಡೆದ ಬಕೆಟ್, ಬಾಟಲ್ ಹಾಗೂ ಕಸವನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಹೂದಾನಿ ಮತ್ತು ಫ್ರಿಜ್ ಹಿಂಭಾಗದ ವೇಸ್ಟ್ ವಾಟರ್ ಟ್ರೇಗಳಲ್ಲಿ ನೀರನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಸೊಳ್ಳೆ ಕಚ್ಚದಂತೆ ಪೂರ್ಣ ಬಾಹು ಬಟ್ಟೆಗಳನ್ನು ಧರಿಸಿ ಮತ್ತು ಮನೆಗಳ ಕಿಟಕಿ-ಬಾಗಿಲುಗಳಿಗೆ ಸೊಳ್ಳೆ ಜಾಲಿ ಅಳವಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದಾ ಬೇಗಮ್, ಜಿಲ್ಲಾ ಮಲೇರಿಯಾ ನಿಯಂತ್ರಣ ಕಚೇರಿಯ ನಾಗೇಂದ್ರಪ್ಪ (ಹಿ.ಆ.ನಿ), ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜ್, ಎಂ.ಟಿ.ಎಸ್. ಬಾಬುರಾವ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗೀತಾ, ದಾನಕುಮಾರಿ, ಹಾಸ್ಟೆಲ್ ಸಿಬ್ಬಂದಿ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.