ಯಾವುದೇ ತನಿಖಾ ಏಜೆನ್ಸಿಗಳ ವಿಚಾರಣೆಯು ಆನ್‌ಲೈನ್‌ನಲ್ಲಿ ನಡೆಯುವುದಿಲ್ಲ.

ಬಳ್ಳಾರಿ: ಅಪರಾಧಗಳನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ. ತಿಳಿಸಿದರು.

ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಗೃಹ ಇಲಾಖೆಯ ಜಿಲ್ಲಾ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯಾವುದೇ ತನಿಖಾ ಏಜೆನ್ಸಿಗಳ ವಿಚಾರಣೆಯು ಆನ್‌ಲೈನ್‌ನಲ್ಲಿ ನಡೆಯುವುದಿಲ್ಲ. ಸಿಬಿಐ, ಇಡಿ, ಪೊಲೀಸ್ ಇನ್ನಿತರೆಗಳ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳ ಕುರಿತು ಜನರು ಸದಾಕಾಲ ಎಚ್ಚರವಾಗಿದ್ದು, ಏನಾದರೂ ಸಮಸ್ಯೆಗಳಿದ್ದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು ಎಂದರು.ಸಂಚಾರ ಪೊಲೀಸ್ ಠಾಣೆಯ ಸಿಪಿಐ ಅಯ್ಯನಗೌಡ ಪಾಟೀಲ್ ಮಾತನಾಡಿ, ಮಕ್ಕಳ ಸುರಕ್ಷತೆಗಾಗಿ ಅಪ್ರಾಪ್ತರಿಗೆ ವಾಹನಗಳನ್ನು ಚಲಾಯಿಸಲು ಕೊಡಬಾರದು. ಅಪ್ರಾಪ್ತರು ವಾಹನ ಚಾಲಿಸಿದಲ್ಲಿ ಮತ್ತು ವಾಹನ ಕೊಟ್ಟವರಿಗೆ ದಂಡ ವಿಧಿಸಲಾಗುವುದು ಎಂದರು.

ನಗರದ ಐದು ವೃತ್ತಗಳಲ್ಲಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದು, ಉಳಿದೆರೆಡು ವೃತ್ತಗಳಲ್ಲಿ ಶೀಘ್ರದಲ್ಲೇ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲಾಗುತ್ತದೆ. ಶಿಕ್ಷಣ ಸಂಸ್ಥೆಗಳ ವಾಹನಗಳು- ಅವಶ್ಯಕ ಪದಾರ್ಥಗಳ ವಾಹನಗಳ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಸಹ ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ಇದರಿಂದ ಅಪಘಾತ ಪ್ರಮಾಣ ತಗ್ಗಿಸಬಹುದಾಗಿದ್ದು, ಸಾರ್ವಜನಿಕ ಜೀವಸುರಕ್ಷೆಯೂ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅವ್ವಾರು ಮಂಜುನಾಥ್ ಅವರು, ದಿನದ 24 ತಾಸು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಗೆ ನಮ್ಮೆಲ್ಲರ ಸಹಕಾರ ಅತ್ಯಗತ್ಯ. ಕರ್ತವ್ಯದ ಒತ್ತಡ, ಸಿಬ್ಬಂದಿ ಕೊರತೆ ಮತ್ತು ಇನ್ನಿತರೆ ಸಮಸ್ಯೆಗಳಲ್ಲೂ ಉತ್ತಮವಾದ ಸೇವೆ ಸಲ್ಲಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಿರುವ ಪೊಲೀಸ್ ಇಲಾಖೆಯ ಸೇವೆ ಶ್ಲಾಘನೀಯ ಎಂದರು.

ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡಗೌಡ, ಉಪಾಧ್ಯಕ್ಷ ಸೊಂತ ಗಿರಿಧರ, ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಜಂಟಿ ಕಾರ್ಯದರ್ಶಿಗಳಾದ ಡಾ.ಮರ್ಚೆಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ನಿಕಟಪೂರ್ವ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ, ಮಾಜಿ ಅಧ್ಯಕ್ಷ ಬಿ. ಮಹಾರುದ್ರಗೌಡ, ಡಿವೈಎಸ್ಪಿ ಮಾಲತೇಶ್ ಕೋನಬೇವು ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.