ಪ್ರತಿಯೊಬ್ಬರ ಜೀವನದಲ್ಲೂ ಡಾಕ್ಟರ್, ಎಂಜಿನಿಯರ್, ಪೊಲೀಸ್ ಅಥವಾ ಕ್ರೀಡಾಪಟು ಆಗಬೇಕೆಂಬ ದೊಡ್ಡ ಕನಸುಗಳಿರುತ್ತವೆ. ಆದರೆ, ಒಮ್ಮೆ ಡ್ರಗ್ಸ್‌ನಂತಹ ದುಶ್ಚಟಗಳಿಗೆ ಬಲಿಯಾದರೆ ಆ ಎಲ್ಲ ಕನಸುಗಳು ನುಚ್ಚುನೂರಾಗುತ್ತವೆ.

ಗದಗ: ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಕೇವಲ ಪೊಲೀಸ್ ಇಲಾಖೆಯಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರು ಹಾಗೂ ಯುವಜನತೆ ಕೈಜೋಡಿಸಿದಾಗ ಮಾತ್ರ ಈ ಪಿಡುಗನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೆಯೆಯಲು ಸಾಧ್ಯ ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ತಿಳಿಸಿದರು.

ಸೋಮವಾರ ನಗರದಲ್ಲಿ ಅಂತಾರಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಮತ್ತು ಕಳ್ಳಸಾಗಣೆ ವಿರೋಧಿ ದಿನಾಚರಣೆಯ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮುಕ್ತ ಗದಗ ವಾಕಾಥಾನ್ 2026 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಯೊಬ್ಬರ ಜೀವನದಲ್ಲೂ ಡಾಕ್ಟರ್, ಎಂಜಿನಿಯರ್, ಪೊಲೀಸ್ ಅಥವಾ ಕ್ರೀಡಾಪಟು ಆಗಬೇಕೆಂಬ ದೊಡ್ಡ ಕನಸುಗಳಿರುತ್ತವೆ. ಆದರೆ, ಒಮ್ಮೆ ಡ್ರಗ್ಸ್‌ನಂತಹ ದುಶ್ಚಟಗಳಿಗೆ ಬಲಿಯಾದರೆ ಆ ಎಲ್ಲ ಕನಸುಗಳು ನುಚ್ಚುನೂರಾಗುತ್ತವೆ. ಹೀಗಾಗಿ ಯುವಜನತೆ ಯಾವುದೇ ಕಾರಣಕ್ಕೂ ಇಂತಹ ವ್ಯಸನಗಳಿಗೆ ಒಳಗಾಗದೇ ಸೇ ನೋ ಟು ಡ್ರಗ್ಸ್ ಎಂಬ ಪಣವನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದರು.

ಕಳೆದ ಒಂದು ವರ್ಷದಲ್ಲಿ ಜಿಲ್ಲಾ ಪೊಲೀಸರು ಮಾದಕ ವಸ್ತುಗಳ ತಡೆಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಒಟ್ಟು 27 ಪ್ರಕರಣಗಳನ್ನು ದಾಖಲಿಸಿ, 52 ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ, ಇಡೀ ಉತ್ತರ ವಲಯದ 5 ಜಿಲ್ಲೆಗಳಲ್ಲೇ (ಬೆಳಗಾವಿ, ವಿಜಯಪುರ, ಗದಗ, ಧಾರವಾಡ ಮತ್ತು ಬಾಗಲಕೋಟೆ) ಪ್ರಥಮ ಬಾರಿಗೆ ಗದಗ ಜಿಲ್ಲೆಯಲ್ಲಿ ಪಿಟ್ ಎನ್‌ಡಿಪಿಎಸ್ ಕಾಯ್ದೆಯಡಿ ಈ ಅಭ್ಯಾಸ ಉಳ್ಳ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಿ, ಒಂದು ವರ್ಷದವರೆಗೆ ಜೈಲಿಗಟ್ಟುವ ಕಠಿಣ ಕ್ರಮ ಜರುಗಿಸಲಾಗಿದೆ ಎಂದರು.

ಎಸ್ಪಿ ರೋಹನ ಜಗದೀಶ ಮಾತನಾಡಿ ಮಾದಕ ವಸ್ತುಗಳ ದುರ್ಬಳಕೆಯು ಕೇವಲ ಒಬ್ಬ ವ್ಯಕ್ತಿಯ ಮೇಲಷ್ಟೇ ಅಲ್ಲದೆ, ಅವರ ಇಡೀ ಕುಟುಂಬ ಹಾಗೂ ಯುವ ಪೀಳಿಗೆಯ ಭವಿಷ್ಯದ ಮೇಲೆ ಅತ್ಯಂತ ಗಂಭೀರವಾದ ಪರಿಣಾಮ ಬೀರುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಮಾದಕ ವ್ಯಸನದ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಐಎಂಎ ಅಧ್ಯಕ್ಷ ಡಾ. ಪ್ಯಾರಾಲಿ ಮುಲಾನಿ ಮುಂತಾದವರು ಮಾತನಾಡಿದರು. ಡಿವೈಎಸ್ಪಿ ಮಹಾಂತೇಶ್ ಸಜ್ಜನ, ಡಿಎಸ್ಪಿ ಮುರ್ತುಜಾ ಖಾದ್ರಿ, ವಿವಿಧ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಗಾಂಧಿ ವೃತ್ತದಿಂದ ಪ್ರಾರಂಭವಾಗಿ ರೋಟರಿ ಸರ್ಕಲ್ ಮಾರ್ಗವಾಗಿ ಭೂಮರಡ್ಡಿ ಸರ್ಕಲ್, ಹಳೆ ಡಿಸಿ ಆಫೀಸ್, ಬಸವೇಶ್ವರ ಮೂರ್ತಿ ಭೀಷ್ಮಕೆರೆ ವರೆಗೆ ಬಂದು ತಲುಪಿತು.