ದೊಡ್ಡಬಳ್ಳಾಪುರ: ಘನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ಮನೆಗಳಲ್ಲಿ ಪ್ರತ್ಯೇಕವಾಗಿ ವಿಂಗಡಿಸಿ ನಗರಸಭೆ, ಪುರಸಭೆಯ ತ್ಯಾಜ್ಯ ಸಂಗ್ರಹ ವಾಹನಗಳಿಗೆ ಹಸ್ತಾಂತರಿಸುವ ಮೂಲಕ ಘನ ತ್ಯಾಜ್ಯ ಸಮರ್ಪಕ ನಿರ್ವಹಣೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್.ಅನುರಾಧ ಹೇಳಿದರು.

ಬೆಂ.ಗ್ರಾ ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ ವತಿಯಿಂದ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026 ರ ಅನುಷ್ಠಾನದ ಕುರಿತ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಸರ್ಕಾರವು ಘನ ತ್ಯಾಜ್ಯ ನಿರ್ವಹಣಾ ನಿಯಮಗಳು-2026 ಅನ್ನು ಅನುಷ್ಠಾನಗೊಳಿಸಿದ್ದು, ಪ್ರತಿಯೊಬ್ಬರೂ ತಮ್ಮ ಮನೆಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ಒಣ ತ್ಯಾಜ್ಯ, ಹಸಿ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ ಹಾಗೂ ಕಪ್ಪು ತ್ಯಾಜ್ಯವಾಗಿ ನಾಲ್ಕು ವಿಭಾಗದಲ್ಲಿ ತ್ಯಾಜ್ಯ ವಿಂಗಡಿಸಿ, ಸ್ವಚ್ಛ ವಾಹಿನಿ ವಾಹನಕ್ಕೆ ನೀಡುವಲ್ಲಿ ಸಹಕರಿಸಬೇಕು. ಇದರಿಂದ ಸ್ವಚ್ಚ ಹಾಗೂ ಸುಂದರ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದರು.

ನಾವು ಎಲ್ಲೆಂದರಲ್ಲಿ ಕಸ ಎಸೆಯುವುದರಿಂದ ನಮ್ಮ ಆರೋಗ್ಯದ ಮೇಲೆಯೇ ದುಷ್ಪರಿಣಾಮ ಬೀರುತ್ತದೆ ಎನ್ನುವ ಸ್ಪಷ್ಟ ಅರಿವು ಸಾರ್ವಜನಿಕರಲ್ಲಿ ಇರಬೇಕು. ಪೌರಾಡಳಿತ ಅಥವಾ ಸ್ಥಳೀಯ ಸಂಸ್ಥೆಗಳ ಸ್ವಚ್ಚ ವಾಹಿನಿ ವಾಹನ ಮನೆ ಬಾಗಿಲಿಗೆ ಬಂದಾಗ ವಿಂಗಡಿಸಿದ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿಕೊಡುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರಿ ಉದ್ದೇಶಗಳಿಗೆ ಸೂಕ್ತ ಜಾಗ ಕೊಡಿಸಲು ಪ್ರಯತ್ನಿಸಬೇಕು. ಜತೆಗೆ ತಮ್ಮ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೇಳಿದರು.


ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎಸ್ ರಮೇಶ್ ಮಾತನಾಡಿ, ಘನತ್ಯಾಜ್ಯ ನಿರ್ವಹಣೆ ನಿಯಮಗಳು-2026 ಅನ್ನು ಏಪ್ರಿಲ್ 1, 2026 ರಂದು ಜಾರಿಗೆ ಬಂದಿದ್ದು, ಭಾರತವನ್ನು ಸ್ವಚ್ಛ, ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರವಾಗಿಸುವ ಗುರಿ ಹೊಂದಿವೆ. ಆಹಾರದ ತುಣುಕುಗಳು, ತರಕಾರಿ ಸಿಪ್ಪೆಗಳು ಮತ್ತು ಅಡುಗೆ ತ್ಯಾಜ್ಯಗಳನ್ನು ಹಸಿ ತ್ಯಾಜ್ಯ ಎಂದೂ, ಕಾಗದ, ಪ್ಲಾಸ್ಟಿಕ್, ಲೋಹ ಮತ್ತು ಗಾಜು ಇತ್ಯಾದಿಗಳನ್ನು ಒಣ ತ್ಯಾಜ್ಯ ಎಂದು ಹಾಗೂ ಡೈಪರ್‌ಗಳು ಮತ್ತು ನೈರ್ಮಲ್ಯ ನ್ಯಾಪ್‌ಕಿನ್‌ಗಳನ್ನು ನೈರ್ಮಲ್ಯ ತ್ಯಾಜ್ಯವೆಂದು ವಿಂಗಡಿಸಲಾಗುತ್ತದೆ. ವಿಶೇಷ ಆರೈಕೆ ತ್ಯಾಜ್ಯಗಳಾದ ಬ್ಯಾಟರಿಗಳು, ಔಷಧಗಳು, ಬಲ್ಬ್‌ಗಳು ಮತ್ತು ಅಂತಹುದೇ ವಸ್ತುಗಳು ನಾಲ್ಕು-ಮಾರ್ಗಗಳಲ್ಲಿ ಬೇರ್ಪಡಿಸುವುದು ಕಡ್ಡಾಯ ಎಂದರು.

ತ್ಯಾಜ್ಯ ನಿರ್ವಹಣಾ ಮಾನದಂಡಗಳನ್ನು ಪಾಲಿಸದ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಸಂಸ್ಥೆಗಳು ಪರಿಸರ ದಂಡ ಪಾವತಿಸಬೇಕು. ದೊಡ್ಡ ವಸತಿ ಸಂಕೀರ್ಣಗಳು, ವಿಶ್ವವಿದ್ಯಾಲಯಗಳು, ಮಾಲ್‌ಗಳು ಮತ್ತು ಸರ್ಕಾರಿ ಕಟ್ಟಡಗಳಂತಹ ಬೃಹತ್ ತ್ಯಾಜ್ಯ ಉತ್ಪಾದಕರ ಮೇಲೆ ನಿಯಮಗಳು ಹೆಚ್ಚಿನ ಜವಾಬ್ದಾರಿಯನ್ನು ಇದ್ದು, ಅವರು ಉತ್ಪಾದಿಸುವ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ಸಂಸ್ಕರಿಸಬೇಕು. ನಾವು ತ್ಯಾಜ್ಯವನ್ನು ಸರಿಯಾಗಿ ಬೇರ್ಪಡಿಸಿ ನಿಯಮಗಳನ್ನು ಅನುಸರಿಸಿದರೆ, ನಾವು ನಮ್ಮ ಪರಿಸರವನ್ನು ರಕ್ಷಿಸಬಹುದು ಮತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯವನ್ನು ಸೃಷ್ಟಿಸಬಹುದು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಸಂಚಾರಿ ಸಂಪತ್ ಮಾತನಾಡಿ, ಪರಿಸರ ಮಾಲಿನ್ಯ ತಪ್ಪಿಸಲು ಘನತ್ಯಾಜ್ಯ ನಿರ್ವಹಣೆ ನಿಯಮಗಳು-2026 ಪಾಲನೆ ಅತ್ಯವಶ್ಯಕವಾಗಿದೆ. ಕಸ ನಿರ್ವಹಣೆ ಸಮರ್ಪಕವಾಗಿ ನಿರ್ವಹಣೆ ಮಾಡದಿದ್ರೇ ಮಾನವ ಸಮಾಜಕ್ಕೆ ಆಪತ್ತು ಗ್ಯಾರಂಟಿ ಎಂದು ಹೇಳಿದರು.

ನಾವೆಲ್ಲರೂ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಪ್ಲಾಸ್ಟಿಕ್

ಬಳಕೆಯಿಂದ ಮಣ್ಣಿನ ಸವಕಳಿ ಕುಂಠಿತವಾಗಲು ಕಾರಣವಾಗಲಿದೆ. ಸಾರ್ವಜನಿಕರು ನಾಲ್ಕು ವಿಧದಲ್ಲಿ ಕಸವನ್ನು ವಿಂಗಡಣೆ ಮಾಡುವುದರಿಂದ ಪಂಚಾಯತಿಗಳಿಗೆ ತ್ಯಾಜ್ಯ ನಿರ್ವಹಣೆಗೆ ತುಂಬಾ ಸಹಕಾರಿಯಾಗುತ್ತದೆ ಎಂದರು.

ಕಸ ಸಂಗ್ರಹಿಸುವ ಪೌರಕಾರ್ಮಿಕರ ಬಗ್ಗೆ ಗೌರವ ಇರಬೇಕು. ಇವರು ದಿನಂಪ್ರತಿ ನಿರ್ವಹಿಸುವ ಕಾರ್ಯದಿಂದಲೇ ಸಮಾಜವು ಸ್ವಚ್ಛ ಹಾಗೂ ಸ್ವಾಸ್ಥ್ಯದಿಂದ ಇರುವುದನ್ನು ಮರೆಯಬಾರದು ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಮುಖಂಡರು ತ್ಯಾಜ್ಯ ವಿಂಗಡಣೆ ಕುರಿತು

ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಪ್ರತಿಯೊಂದು ಮನೆ ಹಂತದಿಂದ ತ್ಯಾಜ್ಯ ನಿರ್ವಹಣೆ ಆಗುವಂತೆ ಮಾಡಬೇಕು. ರೈತರು ಹಸಿ ಕಸದಿಂದ ಸಾವಯವ ಗೊಬ್ಬರ ಉತ್ಪಾದಿಸಿ, ರಾಸಾಯನಿಕ ಗೊಬ್ಬರ ಬಳಕೆ ತಡೆಗೆ ಉತ್ತೇಜಿಸಲು ಮುಂದಾಗಬೇಕು ಎಂದರು.

ಇದೇ ವೇಳೆ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು-2026 ರ ಸರ್ಕಾರಿ ಆದೇಶ ಪತ್ರವನ್ನು ಸ್ಥಳೀಯ

ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ವಿತರಣೆ ಮಾಡಿದರು.

ಕಾರ್ಯಾಗಾರದಲ್ಲಿ ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ವೆಂಕಟೇಶ್ ಬಂತಿ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರೇಮ್ ಕುಮಾರ್, ನಗರ ಸಭೆ, ಪುರಸಭೆ ಸದಸ್ಯರುಗಳು ಹಾಗೂ ಪೌರಾಯುಕ್ತರು ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

2ಕೆಡಿಬಿಪಿ2-

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಘನ ತ್ಯಾಜ್ಯ ಸಮರ್ಪಕ ನಿರ್ವಹಣೆ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.